ನೀರಿಗೂ ಎಕ್ಸ್‌ಪೈರಿ ಡೇಟ್ ಇದೆಯೇ...?
ಹೆಚ್ಚಿನ ಭಾರತೀಯರು ಈಗಲೂ ಶತಮಾನಗಳಿಂದಲೂ ಅಸ್ತಿತ್ವದಲ್ಲಿರುವ ಅಂತರ್ಜಲ ಅಥವಾ ಬಾವಿಯ ನೀರನ್ನೇ ಬಳಸುತ್ತಾರೆ. ಈ ಭೂಮಿಯ ಮೇಲೆ ಶತಮಾನಗಳಿಂದಲೂ ಇರುವ ನೀರು ಎಂದೂ ಹಾಳಾಗುವುದಿಲ್ಲ. ಆದರೆ ಶುದ್ಧನೀರನ್ನು ಒಳಗೊಂಡಿರುವ ಪೆಟ್ ಬಾಟಲ್‌ಗಳ ಮೇಲೇಕೆ ಎಕ್ಸ್‌ಪೈರಿ ಡೇಟ್ ಅಥವಾ ಮುಗಿತಾಯ ದಿನಾಂಕವಿರುತ್ತದೆ? ಇದು ಹೆಚ್ಚಿನವರನ್ನು ಕಾಡುತ್ತಿರುವ ಪ್ರಶ್ನೆ.
ಅಲ್ಲದೆ ಇಂದಿನ ದಿನಗಳಲ್ಲಿ ಬಾಟ್ಲಿಂಗ್ ಕಂಪನಿಗಳು ಮಾರಾಟ ಮಾಡುತ್ತಿರುವ ನೀರು ಕಳಪೆ ಗುಣಮಟ್ಟದ್ದಾಗಿರುವುದರಿಂದ ಹೆಚ್ಚಿನ ಬ್ರಾಂಡ್‌ಗಳು ನಂಬಲರ್ಹವಲ್ಲ.
ಇಲ್ಲಿವೆ ನೋಡಿ ನೀರು ಮತ್ತು ಅದರ ತಥಾಕಥಿತ ಎಕ್ಸ್‌ಪೈರಿ ಡೇಟ್ ಕುರಿತು ಕೆಲವು ವಾಸ್ತವಾಂಶಗಳು.....
ನೀರು ಎಂದೂ ಹಾಳಾಗುವುದಿಲ್ಲ. ಆಹಾರ ವಸ್ತುಗಳು ಹಾಳಾಗುತ್ತವೆ. ಉಪ್ಪು ಮತ್ತು ಸಕ್ಕರೆ ಕೂಡ ಕೆಡುವುದಿಲ್ಲ.
ಹೀಗಿರುವಾಗ ನೀರಿನ ಬಾಟಲ್‌ಗಳ ಮೇಲೇಕೆ ಎಕ್ಸ್‌ಪೈರಿ ಡೇಟ್ ಇರುತ್ತದೆ? ಬಾಟ್ಲಿಂಗ್ ಕಂಪನಿಗಳು ತಮ್ಮ ಉತ್ಪನ್ನ ಬಳಕೆಗೆ ಯಾವಾಗ ಅತ್ಯುತ್ತಮ ಎನ್ನುವುದನ್ನು ಗ್ರಾಹಕರಿಗೆ ತಿಳಿಸಲು ಕೆಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ.
ಎಕ್ಸ್‌ಪೈರಿ ಡೇಟ್‌ನ್ನು ಗಂಭೀರವಾಗಿ ಪರಿಗಣಿಸಲು ಇನ್ನೊಂದು ಮುಖ್ಯವಾದ ಕಾರಣ ವೆಂದರೆ ರಾಸಾಯನಿಕ ಕ್ರಿಯೆಗಳು. ಹೌದು,ನೀರನ್ನು ಪ್ಯಾಕ್ ಮಾಡಿರುವ ಪ್ಲಾಸ್ಟಿಕ್ ಬಾಟಲ್ ಕೆಲವು ಸಮಯದ ಬಳಿಕ ಕರಗಿ ಕೆಲವು ರಾಸಾಯನಿಕಗಳನ್ನು ನೀರಿನಲ್ಲಿ ಬಿಡುಗಡೆಗೊಳಿಸಬಹುದು ಮತ್ತು ಹೀಗೆ ರಾಸಾಯನಿಕಗಳು ನೀರಿನಲ್ಲಿ ಸೇರಿದ ಮೇಲೆ ಅದು ತಾಜಾ ನೀರಾಗಿ ಉಳಿಯದಿರಬಹುದು.
ಮಾಂಸ ಅಥವಾ ತರಕಾರಿಗಳಂತೆ ನೀರು ಕೊಳೆಯುವ ಉತ್ಪನ್ನವಲ್ಲ. ನೀರು ಎಂದಿಗೂ ಒಳ್ಳೆಯದೇ ಆಗಿರುತ್ತದೆ, ಆದರೆ ಬಾಟಲ್ ಅದು ಕುಡಿಯಲು ಯೋಗ್ಯವೇ ಅಥವಾ ಅಲ್ಲವೇ ಎಂಬ ವ್ಯತ್ಯಾಸವನ್ನುಂಟು ಮಾಡಬಹುದು.
ಉಷ್ಣತೆ,ರಾಸಾಯನಿಕಗಳು,ದಾಸ್ತಾನು ವಸ್ತುಗಳು ಮತ್ತು ಮಾಲಿನ್ಯಕಾರಕಗಳಿಗೆ ತೆರೆದುಕೊಳ್ಳುವುದು ನೀರಿನ ಶುದ್ಧತೆಯ ಮೇಲೆ ಪರಿಣಾಮ ಬೀರಬಲ್ಲುದು. ಆದ್ದರಿಂದ ಸುರಕ್ಷತೆಯ ದೃಷ್ಟಿಯಿಂದ ಬಾಟಲ್ ಮೇಲಿನ ಎಕ್ಸ್‌ಪೈರಿ ಡೇಟ್‌ಗೆ ಮುನ್ನವೇ ನೀರನ್ನು ಕುಡಿದು ಮುಗಿಸುವುದು ಒಳ್ಳೆಯದು.