"ವೀಕೆಂಡ್ ವಿತ್ ರಮೇಶ್"ನಲ್ಲಿ ಸಿಎಂ: ಸೂಪರ್ ಹಿಟ್ ಎಪಿಸೋಡ್ ಹಿಂದಿನ ಕುತೂಹಲಕಾರಿ ಅಂಶಗಳು
Update: 2017-06-26 17:34 IST
ಬೆಂಗಳೂರು, ಜೂ.26: ಖಾಸಗಿ ವಾಹಿನಿ "ಝೀ ಕನ್ನಡ"ದಲ್ಲಿ ಪ್ರಸಾರವಾಗುವ ಜನಪ್ರಿಯ ಕಾರ್ಯಕ್ರಮ "ವೀಕೆಂಡ್ ವಿತ್ ರಮೇಶ್" ನಲ್ಲಿ ಕಳೆದ ವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದರು. ತಮ್ಮ ಹಳೆಯ ನೆನಪುಗಳು, ಬಾಲ್ಯ, ರಾಜಕೀಯ ಹಾಗೂ ವೈಯಕ್ತಿಕ ಜೀವನದ ಹಲವಾರು ವಿಚಾರಗಳನ್ನು ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದರು. ಸಿಎಂ ಭಾಗವಹಿಸಿದ್ದ ಎಪಿಸೋಡ್ ಸೂಪರ್ ಹಿಟ್ ಆಗಿದ್ದು, ಇದನ್ನು ವೀಕ್ಷಿಸಿದ ಬಳಿಕ ಹಲವರು ಮುಖ್ಯಮಂತ್ರಿಯವರ ನೇರ ನಡೆ-ನುಡಿಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದರೆ, ಇನ್ನೂ ಕೆಲವರು ಈ ಹಿಂದೆ ತಾವು ಸಿದ್ದರಾಮಯ್ಯರನ್ನು ಟೀಕಿಸಿದ ಕಾರಣಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕ್ಷಮೆ ಕೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದ "ವೀಕೆಂಡ್ ವಿತ್ ರಮೇಶ್" ಕಾರ್ಯಕ್ರಮದ ತೆರೆಯಾಚೆಗಿನ ಕೆಲವು ಕುತೂಹಲಕಾರಿ ಅಂಶಗಳನ್ನು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದು, ಈ ಕೆಳಗಿನಂತಿವೆ.
- ಇದರ ಶೂಟಿಂಗ್ ಕಳೆದ ಗುರುವಾರ ಬೆಳಗ್ಗೆ 11:30ಕ್ಕೆ ಪ್ರಾರಂಭವಾಗಿ ಸಂಜೆ 4 ಗಂಟೆಗೆ ಮುಗಿದಿತ್ತು. ನಡುವೆ ಅರ್ಧ ಗಂಟೆ ಊಟದ ಸಮಯವನ್ನು ಲೆಕ್ಕಕ್ಕೆ ಹಿಡಿದರೆ ಶೂಟಿಂಗ್ ನಡೆದಿದ್ದು ಸುಮಾರು ನಾಲ್ಕು ಗಂಟೆ. Not a single retake. ಅದರಲ್ಲಿ ಮೂರುವರೆ ಗಂಟೆಗೂ ಹೆಚ್ಚು ಅವಧಿಯ ಕಾರ್ಯಕ್ರಮ ಪ್ರಸಾರವಾಗಿದೆ.
- ಶೂಟಿಂಗ್ ವೇಳೆ ಅಲ್ಲಿದ್ದ ನಾನು ಮತ್ತು ಕೆ.ವಿ.ಪ್ರಭಾಕರ್ ಎರಡು ದೃಶ್ಯಗಳನ್ನು ಎಡಿಟ್ ಮಾಡಲು ಸೂಚಿಸಿದ್ದೆವು. ಮೊದಲನೆಯದು ಶ್ರೀಮತಿ ಇಂದಿರಾಗಾಂಧಿಯವರ ವಿರುದ್ಧದ ಪ್ರತಿಭಟನೆಯ ಘಟನೆ. ಇನ್ನೊಂದು ಅವರ ನಿದ್ದೆಯ ಫೋಟೋಗಳು. ಇದನ್ನು ಸಿಎಂ ಗಮನಕ್ಕೆ ತಂದಾಗ ಯಾವುದನ್ನೂ ಎಡಿಟ್ ಮಾಡಲು ಹೇಳುವುದು ಬೇಡ ಎಂದರು.
- ಕೆಲವರು ದೀರ್ಘವಾಗಿ ಮಾತನಾಡಿದ್ದನ್ನು ಎಡಿಟ್ ಮಾಡಿದ್ದು (ಸುಮಾರು 20-30 ನಿಮಿಷ) ಹೊರತುಪಡಿಸಿ ಉಳಿದೆಲ್ಲವೂ ಪ್ರಸಾರವಾಗಿದೆ. (ಎಚ್.ಡಿ.ದೇವೆಗೌಡರ wwr ಶೂಟಿಂಗ್ ಸುಮಾರು ಹತ್ತು ಗಂಟೆ ಕಾಲ ನಡೆದಿತ್ತೆಂದು ಝೀ ಸಿಬ್ಬಂದಿ ಹೇಳುತ್ತಿದ್ದರು.)
- ಕಳೆದೆರಡು ಸೀಸನ್ ಗಳಿಂದ ಝೀ ಟಿವಿಯವರು ಈ ಕಾರ್ಯಕ್ರಮಕ್ಕಾಗಿ ಬೆನ್ನುಹತ್ತಿದ್ದರೂ ಸಿಎಂ ಒಪ್ಪಿರಲಿಲ್ಲ. ಈ ಬಾರಿ ನಮ್ಮೆಲ್ಲರ ಒತ್ತಾಯಕ್ಕೆ ಮಣಿದು ಒಪ್ಪಿದ್ದರು. ಯಾರನ್ನು ಕರೆಯಬೇಕೆಂಬ ಬಗ್ಗೆ ನಾವು ಕೇಳಿಕೊಂಡರೂ ಅವರು ಸೂಚನೆ ನೀಡಿರಲಿಲ್ಲ. ಡಾ.ಯತೀಂದ್ರ ಅವರು ಮಾತನಾಡಲು ಹಿಂಜರಿದಾಗ ಮಾತ್ರ ಅವರೇ ಮಗನನ್ನು ಮಾತನಾಡಲು ಹೇಳಿದ್ದರು. ಉಳಿದುದೆಲ್ಲವೂ ನಿಜವಾದ Surprise.
- ಕೆಲವರ ಜತೆ ಮಾತನಾಡಿಸಲಿಕ್ಕೆ ಆಗಲಿಲ್ಲ. ಅವರಲ್ಲೊಬ್ಬರು ಜೆಡಿ (ಯು) ಅಧ್ಯಕ್ಷ ಶರದ್ ಯಾದವ್. 1996ರಲ್ಲಿ ಮುಖ್ಯಮಂತ್ರಿ ಆಯ್ಕೆಯ ವೀಕ್ಷಕರಾಗಿ ಶರದ್ ಯಾದವ್ ಬಂದಿದ್ದರಂತೆ. ಮುಖ್ಯಮಂತ್ರಿ ಸ್ಥಾನಕ್ಕೆ ಬಹುಸಂಖ್ಯೆಯ ಶಾಸಕರ ಬೆಂಬಲ ಹೊಂದಿದ್ದ ಸಿದ್ದರಾಮಯ್ಯ ಹೆಸರನ್ನೇ ಅವರು ಸೂಚಿಸಿದ್ದರಂತೆ. ಇದನ್ನು ಅವರಿಂದಲೇ ಹೇಳಿಸಬೇಕೆಂದಿತ್ತು. ಅವರೂ ಒಪ್ಪಿಕೊಂಡಿದ್ದರು. ಆದರೆ ಪ್ರವಾಸದಲ್ಲಿದ್ದ ಶರದ್ ಯಾದವ್ ಅವರಿಗೆ ರೆಕಾರ್ಡಿಂಗ್ ಗೆ ಸಮಯ ಹೊಂದಿಸಲು ಸಾಧ್ಯವಾಗಲಿಲ್ಲ.