ನಿಗೂಢ ಕುರಿ ಹಂತಕನ ಪತ್ತೆಗೆ ಪೊಲೀಸ್ ತಂಡ ರಚನೆ

Update: 2017-06-26 13:12 GMT

ಭುವನೇಶ್ವರ, ಜೂ.26: ಕಟಕ್ ಬಳಿಯ ನಿಯಾಲಿ ಎಂಬಲ್ಲಿ ಕಳೆದೆರಡು ತಿಂಗಳಲ್ಲಿ ಭಾರೀ ಪ್ರಮಾಣದಲ್ಲಿ ಕುರಿಗಳನ್ನು ಹತ್ಯೆ ಮಾಡಿರುವ ಘಟನೆ ವರದಿಯಾಗಿದ್ದು ಇದರ ಬಗ್ಗೆ ವರದಿ ಸಲ್ಲಿಸುವಂತೆ ಒಡಿಶಾ ಸರಕಾರ ಜಿಲ್ಲೆಯ ಪ್ರಧಾನ ಪಶುವೈದ್ಯಕೀಯ ಅಧಿಕಾರಿಗೆ ಸೂಚಿಸಿದೆ.

ಎರಡು ತಿಂಗಳೊಳಗೆ ಸುಮಾರು 150 ಕುರಿಗಳನ್ನು ಹತ್ಯೆ ಮಾಡಲಾಗಿದೆ ಎಂಬ ಮಾಹಿತಿ ದೊರೆತಿದ್ದು ಇದರ ಬಗ್ಗೆ ವರದಿ ನೀಡುವಂತೆ ಅಧಿಕಾರಿಗೆ ಸೂಚಿಸಲಾಗಿದೆ ಎಂದು ರಾಜ್ಯದ ಮೀನುಗಾರಿಕೆ ಮತ್ತು ಪಶು ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಸಚಿವ ದಾಮೋದರ್ ರಾವತ್ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ , ತಂಡವೊಂದನ್ನು ರಚಿಸಿ ತನಿಖೆ ನಡೆಸುವಂತೆ ಕಟಕ್ ಜಿಲ್ಲಾಧಿಕಾರಿ ನಿರ್ಮಲ್ ಮಿಶ್ರ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಸ್ಥಳೀಯ ತಹಶೀಲ್ದಾರ್, ಸ್ಥಳೀಯ ಪೊಲೀಸ್ ಅಧಿಕಾರಿ, ಅರಣ್ಯ ಅಧಿಕಾರಿಗಳು ತಂಡದಲ್ಲಿರುತ್ತಾರೆ. ಕೆಲವು ಸ್ಥಳೀಯರನ್ನೂ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಸಮೀಪದ ಭರ್ನ ಅರಣ್ಯದಲ್ಲಿರುವ ಕಿರುಬ ಅಥವಾ ತೋಳಗಳು ಈ ಕೃತ್ಯ ನಡೆಸಿರುವ ಸಾಧ್ಯತೆಯಿದೆ . ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರ ಅಳವಡಿಸಲಾಗುವುದು ಎಂದು ಮಿಶ್ರ ತಿಳಿಸಿದ್ದಾರೆ.

   ಹತ್ಯೆ ಮಾಡಲಾದ ಕುರಿಗಳ ಪಿತ್ತಜನಕಾಂಗ ಮಾತ್ರ ತಿನ್ನಲಾಗುತ್ತಿದೆ ಎಂದು ಸುದ್ದಿ ಹಬ್ಬಿದೆ. ಆದರೆ ಇದು ಸತ್ಯವಲ್ಲ ಎಂದು ಪಶುವೈದ್ಯಾಧಿಕಾರಿ ಪತ್ರ ಬರೆದಿದ್ದಾರೆ ಎಂದು ಸಚಿವ ರಾವತ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News