×
Ad

ಜನರ ಮನಸ್ಸನ್ನು ಕದಡಬೇಡಿ: ಮುತಾಲಿಕ್ ಗೆ ಪೇಜಾವರ ಶ್ರೀ ಪ್ರತಿಕ್ರಿಯೆ

Update: 2017-06-26 18:56 IST

ಉಡುಪಿ, ಜೂ.26: ಉಡುಪಿ ಮಠದಲ್ಲಿ ನಡೆದ ಇಫ್ತಾರ್ ಕೂಟದಿಂದ ಹಿಂದೂ ಸಮಾಜಕ್ಕೆ ಅವಮಾನವಾಗಿದೆ ಎನ್ನುವ ಪ್ರಮೋದ್ ಮುತಾಲಿಕ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ, ಇದೊಂದು ಸೌಹಾರ್ದ ಕಾರ್ಯಕ್ರಮವಾಗಿದ್ದು, ಇದಕ್ಕೆ ಹಿಂದೂ-ಮುಸ್ಲಿಂ ಎಂದು ಮತೀಯ ಸ್ವರೂಪ ನೀಡಿ ಅನಾವಶ್ಯವಾಗಿ ಜನರ ಮನಸ್ಸನ್ನು ಕದಡಬಾರದು ಎಂದಿದ್ದಾರೆ. 

ನಮ್ಮದು ಸ್ವಧರ್ಮ ನಿಷ್ಠೆ, ಪರ ಧರ್ಮ ಸಹಿಷ್ಣುತೆ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡ ಅವರು, ನಮಗೆ ಹಿಂದೂ ಧರ್ಮದಲ್ಲಿ ಬಲವಾದ ನಿಷ್ಠೆ ಇದೆ. ಪರ ಧರ್ಮದ ಜೊತೆಗೆ ನಮ್ಮ ತತ್ವ, ಸಿದ್ಧಾಂತವನ್ನು ಬಿಡದೆ, ಸ್ನೇಹ ಸೌಹಾರ್ದ ಉಳಿಸಿಕೊಳ್ಳಲು 1955ರಿಂದಲೂ ಪ್ರಯತ್ನ ಮಾಡುತ್ತಿದ್ದೇವೆ. ಈ ಧೋರಣೆಯಂತೆ ಮುಸ್ಲಿಮರನ್ನು ಹಬ್ಬದ ಸಂದರ್ಭದಲ್ಲಿ ಕರೆದಿದ್ದೇವೆ. ಎರಡು ವರ್ಷಗಳ ಪರ್ಯಾಯ ಕಾಲದಲ್ಲಿ ಮುಸ್ಲಿಮರೂ ನಮ್ಮಿಂದಿಗೆ ಸಹಕರಿಸಿದ್ದಾರೆ. ಉಡುಪಿ ಚಲೋ ಪ್ರಕರಣದಲ್ಲೂ ನಮಗೆ ಬೆಂಬಲ ನೀಡಿದ್ದಾರೆ ಎಂದರು.

"ಇದೊಂದು ಸೌಹಾರ್ದ ಕಾರ್ಯಕ್ರಮ. ಇದಕ್ಕೆ ಹಿಂದೂ- ಮುಸ್ಲಿಂ ಎಂದು ಮತೀಯ ಸ್ವರೂಪ ನೀಡಿ ಅನಾವಶ್ಯವಾಗಿ ಜನರ ಮನಸ್ಸನ್ನು ಕದಡುವ ಕೆಲಸ ಮಾಡಬಾರದು. ಕಾರ್ಯಕ್ರಮದಿಂದ ಹಿಂದೂ ಧರ್ಮದ ಬಗ್ಗೆ ಒಳ್ಳೆಯ ಅಭಿಪ್ರಾಯ ಬಂದಿದೆ. ಜನರಲ್ಲಿ ನಾವು ಉದಾರಿಗಳು, ಸಹಿಷ್ಣುಗಳು, ಅಸಹಿಷ್ಣುಗಳಲ್ಲ ಎಂಬ ಭಾವನೆ ಬೆಳೆಯುತ್ತಿದೆ" ಎಂದರು.

"ಮುಸ್ಲಿಮರು ಮಠದಲ್ಲಿ ನಮಾಝ್ ಮಾಡುವುದಕ್ಕೆ ಆಕ್ಷೇಪ ಬಂದಿದೆ. ನಮಗೆ ನಮಾಝಿನ ವಿಷಯ ಗೊತ್ತಿರಲಿಲ್ಲ. ಆದರೆ ಉಪವಾಸ ಮುಗಿದ ಮೇಲೆ ನಮಾಝ್ ನಿರ್ವಹಿಸಿ ಉಪಾಹಾರ ತೆಗೆದುಕೊಳ್ಳುವುದು ಅವರ ಕ್ರಮ. ನಮಾಝ್ ಮಾಡಿರುವುದು ಉಡುಪಿ ಮಠದೊಳಗೆ ಅಲ್ಲ. ಊಟ ಮಾಡುವ ಭೋಜನ ಶಾಲೆಯಲ್ಲಿ. ದೇವಸ್ಥಾನದ ಹೊರಗಿನ ಭಾಗದಲ್ಲಿ. ಸಾರ್ವಜನಿಕ ಊಟದ ಶಾಲೆಯಲ್ಲಿ ನಮಾಝ್ ಮಾಡಿದ್ದಾರೆ. ಇದರಿಂದ ಧರ್ಮಕ್ಕೆ ಗಂಡಾಂತರವಾಗುವ ಪ್ರಶ್ನೆಯೇ ಇರುವುದಿಲ್ಲ" ಎಂದು ಸ್ವಾಮೀಜಿ ಹೇಳಿದರು.

ಹಿಂದೂಗಳಿಂದಲೂ ಗೋಮಾಂಸ ಭಕ್ಷಣೆ: ಮುಸ್ಲಿಮರು ಗೋಮಾಂಸ ಭಕ್ಷಣೆ ಮಾಡುತ್ತಾರೆ ಎಂದು ಮುತಾಲಿಕ್ ಹೇಳಿದ್ದಾರೆ. ಗೋಮಾಂಸವನ್ನು ಮುಸ್ಲಿಮರು ಮಾತ್ರವಲ್ಲ, ಹಿಂದುಗಳಲ್ಲೂ ಹಲವರು ಭಕ್ಷಿಸುತ್ತಾರೆ. ಹಾಗೆಂದು ಅವರನ್ನು ಧರ್ಮ ದಿಂದಲೇ ಹೊರಹಾಕಲು ಸಾಧ್ಯವಿಲ್ಲ. ಹಿಂದೂಗಳಲ್ಲಿ ಎಷ್ಟೋ ಮಂದಿ ಬಹಿರಂಗವಾಗಿ ತಾವು ಗೋಮಾಂಸ ತಿನ್ನುತ್ತೇವೆ ಎನ್ನುತ್ತಾರೆ. ಅವರನ್ನೆಲ್ಲಾ ಬಹಿಷ್ಕರಿಸಲು ಸಾಧ್ಯವಿಲ್ಲ. ಅವರಿಗೆ ಹೇಳಿ, ಮನವೊಲಿಸಿ ಒಪ್ಪಿಸಬಹುದು. ಮುಸ್ಲಿಮರಿಗೂ ಗೋಮಾಂಸ ಭಕ್ಷಣೆ ಬಿಡಿ ಎಂದು ಹೇಳೋಣ. ಇದಕ್ಕಾಗಿ ಅನಾವಶ್ಯಕವಾಗಿ ಜನರ ಮನಸ್ಸಿನಲ್ಲಿ ಇಲ್ಲದ ಆಕ್ರೋಶ ಎಬ್ಬಿಸಿ ಸಮಾಜದಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಮಾಡಬೇಡಿ ಎಂದು ಮುತಾಲಿಕ್‌ಗೆ ಹೇಳಿದ್ದೇವೆ" ಎಂದರು.

"ನಾನು ನಮಗೆ ಸೂಕ್ತ ನ್ಯಾಯ ಎನಿಸಿದ್ದನ್ನು ಮಾಡುತ್ತಿದ್ದೇನೆ. ಹಿಂದೂ ಧರ್ಮಕ್ಕೆ ನಾನು ಅಪಚಾರ ಮಾಡಿಲ್ಲ. ಹಿಂದೂ ಧರ್ಮ ಏನೆಂಬುದು ಅವರೆಲ್ಲರಿಗಿಂತ ನಾನು ಚೆನ್ನಾಗಿ ತಿಳಿದುಕೊಂಡಿದ್ದೇನೆ. ಧರ್ಮಕ್ಕೆ ಅಪಚಾರವಾಗುವ ಕೆಲಸವನ್ನು ಎಂದೂ ಮಾಡಿಲ್ಲ. ನಮ್ಮ ಪರಮಗುರುಗಳು ಹಾಜಿ ಅಬ್ದುಲ್ಲಾರ ಮನೆಗೆ 1904ರಲ್ಲಿ ಪರ್ಯಾಯದ ಪೂರ್ವಭಾವಿಯಾಗಿ ಹೋಗಿ ಕಾಣಿಕೆ ಸ್ವೀಕಾರ ಮಾಡಿದ್ದಾರೆ. ಅಲ್ಲದೇ 800 ವರ್ಷಗಳ ಹಿಂದೆ ಮಧ್ವಾಚಾರ್ಯರು ಆಗಿನ ಕಾಲದ ಮುಸ್ಲಿಂ ಸುಲ್ತಾನರ ಜೊತೆ ಸಂವಾದ ನಡೆಸಿ ಅವರಿಂದ ಗೌರವ, ಸನ್ಮಾನ ಸ್ವೀಕರಿಸಿದ್ದಾರೆ. ಅದೇ ರೀತಿ ರಾಘವೇಂದ್ರ ಸ್ವಾಮೀಜಿಗಳೂ ಮುಸ್ಲಿಂ ದೊರೆಗಳಿಂದ ಸನ್ಮಾನ ಸ್ವೀಕರಿಸಿದ್ದಾರೆ. ಜಾಗವನ್ನು ಅವರಿಗೆ ನೀಡಿದ್ದು ಸಹ ಮುಸ್ಲಿಂ ಸುಲ್ತಾನರೇ. ಇನ್ನು ಬೇರೆ ಅನೇಕ ಸ್ವಾಮೀಜಿಗಳು ಇದೇ ರೀತಿ ಮಾಡಿದ್ದಾರೆ" ಎಂದು ಪೇಜಾವರಶ್ರೀ ವಿವರಿಸಿದರು.

"ಈಗಿನ ಪ್ರಜಾಪ್ರಭುತ್ವದಲ್ಲಿ ಇದೊಂದು ದೊಡ್ಡ ವಿಷಯವೇ ಅಲ್ಲ. ಇದು ಸಹಜವಾದ ಕಾರ್ಯಕ್ರಮ. ನಮ್ಮನ್ನು ಅನೇಕ ಕಡೆ ಮಸೀದಿಗೆ ಕರೆಸಿದ್ದಾರೆ. ಮಸೀದಿಯಲ್ಲಿ ಉಪನ್ಯಾಸ ಮಾಡಿಸಿದ್ದಾರೆ. ಮಸೀದಿಯನ್ನು ಉದ್ಘಾಟನೆ ಮಾಡಿಸಿದ್ದಾರೆ. ಸತ್ಕರಿಸಿದ್ದಾರೆ. ಇಂತಹ ಅನೇಕ ಸನ್ಮಾನಗಳು ಉಡುಪಿಯಲ್ಲಿ ನಡೆದಿದೆ. ಭಟ್ಕಳದಲ್ಲಿ ದೊಡ್ಡ ಮಟ್ಟದಲ್ಲಿ ಸತ್ಕರಿಸಿದ್ದಾರೆ. ಕಾಸರಗೋಡು, ಉತ್ತರ ಕರ್ನಾಟಕದ ಅನೇಕ ಕಡೆಗಳಲ್ಲಿ ನಮ್ಮನ್ನು ಸನ್ಮಾನಿಸಿದ್ದಾರೆ" ಎಂದು ಸ್ವಾಮೀಜಿ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News