ಪಳ್ಳತ್ತೂರು ಸೇತುವೆ ಮುಳುಗಡೆ: ತ್ಯಾಜ್ಯಗಳ ತೆರವು
ಪುತ್ತೂರು, ಜೂ. 26: ಕಳೆದೆರಡು ದಿನಗಳಿಂದ ಎಡಬಿಡದೆ ಧಾರಾಕಾರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕರ್ನಾಟಕ ಕೇರಳ ಗಡಿಪ್ರದೇಶದಲ್ಲಿ ಬರುವ ಅಂತರ್‌ರಾಜ್ಯ ಸಂಪರ್ಕ ರಸ್ತೆಯ ಪಳ್ಳತ್ತೂರು ಸೇತುವೆ ಜಲಾವೃತಗೊಂಡಿದೆ. ಸ್ಥಳೀಯರ ಸಹಕಾರದಲ್ಲಿ ಸೋಮವಾರ ಜೆಸಿಬಿ ಮೂಲಕ ಸೇತುವೆಯಲ್ಲಿ ತುಂಬಿದ್ದ ತ್ಯಾಜ್ಯಗಳನ್ನು ತೆರವುಗೊಳಿಸಲಾಯಿತು.
ಮಾಣಿ ಮೈಸೂರು ರಾಜ್ಯ ಹೆದ್ದಾರಿಯ ಕಾವು ಎಂಬಲ್ಲಿಂದ ಈಶ್ವರಮಂಗಲ ಮೂಲಕವಾಗಿ ಕಾಸರಗೋಡು-ಜಾಲ್ಸೂರು ರಸ್ತೆಯ ಕೊಟ್ಯಾಡಿ ಎಂಬಲ್ಲಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿರುವ ಪಳ್ಳತ್ತೂರು ಸೇತುವೆ ಮುಳುಗಡೆಯಾದ ಹಿನ್ನೆಲೆ ಯಲ್ಲಿ ಕೆಲಕಾಲ ಸಂಚಾರಕ್ಕೆ ಅಡ್ಡಿಯಾಯಿತು. ಮಳೆನೀರಿನಲ್ಲಿ ಕೊಚ್ಚಿಕೊಂಡು ಬಂದ ಮರದ ಕೊಂಬೆಗಳು ಸೇರಿದಂತೆ ತ್ಯಾಜ್ಯಗಳು ಸೇತುವೆಯಲ್ಲಿ ಸಿಲುಕಿಕೊಂಡ ಕಾರಣ ನೀರಿನ ಮಟ್ಟದಲ್ಲಿ ಏರಿಕೆಯಾಗಿ ಸೇತುವೆ ಮುಳುಗಡೆಯಾದ ಹಿನ್ನಲೆಯಲ್ಲಿ ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಸದಸ್ಯ ಇಬ್ರಾಹಿಂ ಹಾಗೂ ಸ್ಥಳೀಯರು ಸೇರಿಕೊಂಡು ಜೆಸಿಬಿ ಮೂಲಕ ತ್ಯಾಜ್ಯ ತೆರವು ಕಾರ್ಯಾಚರಣೆ ನಡೆಸಿದರು.
ಈಶ್ವರಮಂಗಲ ಹೊರ ಠಾಣೆಯ ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದರು. ಕಳೆದ ಎರಡು ವರ್ಷಗಳ ಹಿಂದೆ ಇಲ್ಲಿ ಸೇತುವೆ ಮುಳುಗಡೆಯಾಗಿದ್ದ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಸೇತುವೆ ಮೇಲೆ ಬೈಕ್ ದಾಟಿಸಲು ಪ್ರಯತ್ನಿಸಿ ನೀರು ಪಾಲಾಗಿದ್ದರು.