ಅಶ್ರಫ್ ಕಲಾಯಿ ಕೊಲೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ
ಬಂಟ್ವಾಳ, ಜೂ. 26: ರಿಕ್ಷಾ ಚಾಲಕ, ಎಸ್‌ಡಿಪಿಐ ಮುಖಂಡ ಮುಹಮ್ಮದ್ ಅಶ್ರಫ್ ಕಲಾಯಿ ಕೊಲೆ ಪ್ರಕರಣ ಆರೋಪಿ ದಿವ್ಯರಾಜ್ ಶೆಟ್ಟಿ ಎಂಬಾತನನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಈ ಮೂಲಕ ಅಶ್ರಫ್ ಕೊಲೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಆರುಕ್ಕೇರಿದೆ.
ದಿವ್ಯರಾಜ್ ಶೆಟ್ಟಿ ಅಡ್ಯಾರ್ ಕರ್ಮಾರ್ ನಿವಾಸಿಯಾಗಿದ್ದು, ಪ್ರಕರಣದ ಮತ್ತೋರ್ವ ಪ್ರಮುಖ ಆರೋಪಿ ಪುದು ಗ್ರಾಮದ ಭರತ್ ಕುಮ್ಡೆಲು ರೂಪಿಸಿದ್ದ ಸಂಚಿನಂತೆ ಅಶ್ರಫ್ ರನ್ನು ಹತ್ಯೆ ನಡೆಸಲಾಗಿದೆ. ದಿವ್ಯರಾಜ್‌ನನ್ನು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಭರತ್ ಕುಮ್ಡೆಲು ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಬ್ರಾಹೀಂ ಖಲೀಲ್‌ಗೆ ನ್ಯಾಯಾಂಗ ಬಂಧನ:
ಕಲ್ಲಡ್ಕದಲ್ಲಿ ಜೂನ್ 13ರಂದು ನಡೆದ ಚೂರಿ ಇರಿತ ಪ್ರಕರಣದ ಆರೋಪಿ ಇಬ್ರಾಹೀಂ ಖಲೀಲ್‌ಗೆ ನ್ಯಾಯಾಂಗ ಬಂಧನ ವಿಧಿಸಿದೆ. ಖಲೀಲ್ ವಿರುದ್ಧ ಹಿಂದೂ ಜಾಗರಣ ವೇದಿಕೆಯ ಮುಖಂಡ ರತ್ನಾಕರ್ ಶೆಟ್ಟಿ ಬಂಟ್ವಾಳ ನಗರ ಠಾಣೆಗೆ ಕೊಲೆಯತ್ನ ದೂರು ನೀಡಿರುವ ಆರೋಪದಲ್ಲಿ ಬಂಧನವಾಗಿದೆ. ಖಲೀಲ್‌ಗೂ ಚೂರಿ ಇರಿತವಾಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು ಅಲ್ಲಿಂದ ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.