ಮೀರಾ ಕುಮಾರ್ ಸ್ಪರ್ಧೆ ಸಾಂಕೇತಿಕವಲ್ಲ: ಸಿಪಿಐ
ಹೈದರಾಬಾದ್,ಜೂ.26: ರಾಷ್ಟ್ರಪತಿ ಚುನಾವಣೆಗೆ ಪ್ರತಿಪಕ್ಷಗಳ ಅಭ್ಯರ್ಥಿ ಮೀರಾ ಕುಮಾರ್ ಅವರ ಸ್ಪರ್ಧೆ ಸಾಂಕೇತಿಕವಲ್ಲ, ಅವರು ಪ್ರಬಲ ಸ್ಪರ್ಧೆ ನೀಡಲಿದ್ದಾರೆ ಮತ್ತು ಪ್ರತಿಪಕ್ಷಗಳು ಕುಮಾರ್ ಅವರಿಗೆ ಬೆಂಬಲ ಕೋರಿ ಎನ್‌ಡಿಎ ಮಿತ್ರಪಕ್ಷಗಳನ್ನು ಸಂಪರ್ಕಿಸಲು ಯತ್ನಿಸಲಿವೆ ಎಂದು ಸಿಪಿಐ ಪ್ರಧಾನ ಕಾರ್ಯದರ್ಶಿ ಸುರವರಂಸುಧಾಕರ ರೆಡ್ಡಿ ಅವರು ಸೋಮವಾರ ಇಲ್ಲಿ ತಿಳಿಸಿದರು.
ಒಟ್ಟು 10,98,903 ಮತಗಳ ಪೈಕಿ ಈಗಾಗಲೇ 3.5-4 ಲಕ್ಷ ಮತಗಳ ಬಗ್ಗೆ ಭರವಸೆ ಪಡೆದಿದ್ದೇವೆ. ಈ ಚುನಾವಣೆಗಾಗಿ ರಾಜಕೀಯ ಪಕ್ಷಗಳು ಸಚೇತಕಾಜ್ಞೆಯನ್ನು ಹೊರಡಿಸುವಂತಿಲ್ಲ. ಎನ್‌ಡಿಎದ ಕೆಲವು ಪಕ್ಷಗಳೂ ನಮ್ಮ ಅಭ್ಯರ್ಥಿ ಪರ ಮತಗಳನ್ನು ಚಲಾಯಿಸಬಹುದು. ಏನಾಗುತ್ತದೋ ನೋಡೋಣ ಎಂದು ಸುದ್ದಿಗಾರರೊಡನೆ ಮಾತನಾಡಿದ ಅವರು ಹೇಳಿದರು.
ರಾಷ್ಟ್ರಪತಿ ಹುದ್ದೆಗೆ ಎನ್‌ಡಿಎ ಅಭ್ಯರ್ಥಿ ರಾಮನಾಥ ಕೋವಿಂದ್ ಅವರನ್ನು ಬೆಂಬಲಿಸುವ ಬಿಹಾರದ ಮುಖ್ಯಮಂತ್ರಿ ನಿತೀಶ ಕುಮಾರ್ ಅವರ ನಿರ್ಧಾರವು ದುರದೃಷ್ಟಕರ ಎಂದು ರೆಡ್ಡಿ ಬಣ್ಣಿಸಿದರು.
ರಾಷ್ಟ್ರಪತಿ ಹುದ್ದೆಗೆ ಚುನಾವಣೆ ಜುಲೈ 17ರಂದು ನಡೆಯಲಿದ್ದು, ಜುಲೈ 20ರಂದು ಮತಎಣಿಕೆ ನಡೆಯಲಿದೆ.