×
Ad

ವಾಹನ ಕಳವು ಪ್ರಕರಣ: ಆರೋಪಿಗಳು ಸೆರೆ

Update: 2017-06-26 20:22 IST

ಪಡುಬಿದ್ರೆ, ಜೂ. 26: ವಾಹನ ಚೋರರ ತಂಡವನ್ನು ಪಡುಬಿದ್ರೆ ಪೊಲೀಸರು ಬಂಧಿಸಿದ್ದು, ಬಂಧಿತರಿಂದ 4 ಲಕ್ಷ ರೂ ಮೌಲ್ಯದ ಸ್ಕಾರ್ಪಿಯೋ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ಬಂಟ್ವಾಳ ಇರಾ ಗ್ರಾಮದ ಬಡದಲ ಮನೆಯ ಮುಹಮ್ಮದ್ ಹನೀಫ್ (42), ಕೃಷ್ಣಾಪುರ ನಿವಾಸಿ ಕಿಶೋರ್ ಕುಮಾರ್ (24), ಬಂಟ್ವಾಳ ತುಂಬೆ ನಿವಾಸಿ ಅಬ್ದುಲ್ ರೆಹಮಾನ್ (37), ಸುರತ್ಕಲ್ ಚೊಕ್ಕಬೆಟ್ಟು ನಿವಾಸಿ ಅಫ್ರಿದ್ (20), ಮೈಸೂರು ಉದಯಗಿರಿ ವಾಸಿ ಫೈರೋಝ್ ಖಾನ್ (45) ಮತ್ತು ಬಂಟ್ವಾಳ ತುಂಬೆ ನಿವಾಸಿ ಆಸಿಫ್ ಇಕ್ಬಾಲ್(38) ಎಂದು ಗುರುತಿಸಲಾಗಿದೆ.

ಪಡುಬಿದ್ರೆ ಠಾಣಾ ವ್ಯಾಪ್ತಿಯ ಕಾಂಜರಕಟ್ಟೆಯ ಗುತ್ತಿಗೆದಾರ ಕೆ.ಸಿ.ಕಾಮತ್‌ರವರ ಟಾಟಾ ಎಸ್‌ಸಿ ಲಾರಿಯನ್ನು ಜೂನ್ ಎರಡರಂದು ಅಪಹರಿಸಲಾಗಿತ್ತು. ಈ ಬಗ್ಗೆ ಪಡುಬಿದ್ರೆ ಠಾಣೆಗೆ ಜೂನ್ 4 ರಂದು ದೂರು ನೀಡಲಾಗಿತ್ತು.
ಖಚಿತ ಮಾಹಿತಿ ಮೇರೆಗೆ ಜೂನ್ 25ರಂದು ಸುರತ್ಕಲ್ ಕೃಷ್ಣಾಪುರ ಮಠದಕಾಡು ಬಳಿ ಆರೋಪಿಗಳು ಇರುವ ಬಗ್ಗೆ ತಿಳಿದ ತಂಡವು ಕಾಯಾಚರಣೆ ನಡೆಸಿದ ಸಂದರ್ಭ ಪ್ರಮುಖ ನಾಲ್ವರು ಆರೋಪಿಗಳಾದ ಮೊಹಮ್ಮದ್ ಹನೀಫ್, ಕಿಶೋರ್ ಕುಮಾರ್, ಅಬ್ದುಲ್ ರೆಹಮಾನ್, ಅಫ್ರಿದ್‌ರವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಲಾರಿ ಕಳವು ಬಗ್ಗೆ ಮಾಹಿತಿ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

 ಬಂಧಿತ ಆರೋಪಿಗಳು ತಿಳಿಸಿದ ಮೇರೆಗೆ ಪೊಲೀಸ್ ತಂಡ ಮೈಸೂರಿಗೆ ತೆರಳಿ ಪರಿಶೀಲಿಸಿದಾಗ ಇನ್ನೋರ್ವ ಆರೋಪಿ ಆಸಿಫ್ ಇಕ್ಬಾಲ್ ಕೇರಳದಿಂದ ಕಳವು ಮಾಡಿದ ಸ್ಕಾರ್ಪಿಯೋ ವಾಹನವನ್ನು ಮಾರಾಟ ಮಾಡಲು ಅಲ್ಲಿಗೆ ಬಂದಿದ್ದರು ಎನ್ನಲಾಗಿದ್ದು, ಈ ವೇಳೆ ಪೊಲೀಸರು ಬಂಧಿಸಿದ್ದರು. ಪ್ರಕರಣದಲ್ಲಿ 6 ಅರೋಪಿಗಳನ್ನು ಬಂಧಿಸಿದ್ದು, ಉಳಿದ ಮೂವರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಆರೋಪಿ ಗಳನ್ನು ಕಾರ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News