ಆಂಧ್ರದ ಬುಡಕಟ್ಟು ಗ್ರಾಮದಲ್ಲಿ ಎರಡು ವಾರಗಳಲ್ಲಿ 15 ಸಾವು,ವಿಷಾಹಾರದ ಶಂಕೆ

Update: 2017-06-26 15:01 GMT

ಹೈದರಾಬಾದ್,ಜೂ.26: ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ವೈ.ರಾಮಾವರಂ ಮಂಡಲ ವ್ಯಾಪ್ತಿಯ ಬುಡಕಟ್ಟು ಜನರ ಪ್ರಾಬಲ್ಯವಿರುವ ಚವರೀ ಗ್ರಾಮದಲ್ಲಿ ಕಳೆದೆರಡು ವಾರಗಳಲ್ಲಿ 15 ಜನರು ಮೃತಪಟ್ಟಿದ್ದು, ವಿಷಾಹಾರ ಸೇವನೆ ಈ ಸಾವುಗಳಿಗೆ ಸಂಭಾವ್ಯ ಕಾರಣವೆಂದು ಶಂಕಿಸಲಾಗಿದೆ.

ಅರಣ್ಯದ ನಡುವೆಯಿರುವ ಈ ಗ್ರಾಮದ ಇತರ 24 ಜನರು ಅಸ್ವಸ್ಥಗೊಂಡಿದ್ದು, ರವಿವಾರ ರಾತ್ರಿ ಅವರ ಸ್ಥಿತಿ ಬಿಗಡಾಯಿಸಿದ ಬಳಿಕ ರಾಜಮಹೇಂದ್ರವರಂ ಮತ್ತು ಕಾಕಿನಾಡಾ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಮೇ 29ರಂದು ಸಮೀಪದ ಮರದುಮಿಲಿ ಗ್ರಾಮದಲ್ಲಿ ನಡೆದಿದ್ದ ಮದುವೆಯಲ್ಲಿ ಪಾಲ್ಗೊಂಡ ಎರಡು ದಿನಗಳ ಬಳಿಕ ಈ ಗ್ರಾಮದ ಹಲವರು ಶಂಕಿತ ವಿಷಾಹಾರ ಸೇವನೆಯಿಂದ ಅಸ್ವಸ್ಥಗೊಂಡಿದ್ದರು ಎಂದು ಸಮಗ್ರ ಗಿರಿಜನ ಅಭಿವೃದ್ಧಿ ಸಂಸ್ಥೆಯ ಯೋಜನಾಧಿಕಾರಿ ಎ.ಎನ್.ದಿನೇಶಕುಮಾರ್ ತಿಳಿಸಿದರು.

ಸಾವುಗಳ ಸುದ್ದಿ ಕೇಳಿ ಗ್ರಾಮಕ್ಕೆ ಧಾವಿಸಿದ ಜಿಲ್ಲಾಧಿಕಾರಿ ಕಾರ್ತಿಕೇಯ ಮಿಶ್ರಾ ಅವರು, ಮೃತರ ಕುಟುಂಬಗಳಿಗೆ ಎರಡು ಲ.ರೂ.ಆರ್ಥಿಕ ನೆರವು ಒದಗಿಸಲಾಗುವುದು ಎಂದು ತಿಳಿಸಿದರು.

ಉಪ ಮುಖ್ಯಮಂತ್ರಿ ಎನ್.ಚಿನ್ನರಾಜಪ್ಪ ಅವರು ರವಿವಾರ ರಾತ್ರಿ ಗ್ರಾಮಕ್ಕೆ ಭೇಟಿ ನೀಡಿದ್ದರು. ದೂರವಾಣಿಯಲ್ಲಿ ಅಧಿಕಾರಿಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು, ಸೂಕ್ತ ಪರಿಹಾರವನ್ನು ಕಲ್ಪಿಸಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶ ನೀಡಿದ್ದಾರೆ.

ಗ್ರಾಮಕ್ಕೆ ವೈದ್ಯಕೀಯ ತಂಡಗಳನ್ನು ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News