ಮಸೀದಿಗೆ ನುಗ್ಗಿದವರಿಂದ ಹಲ್ಲೆ, ಸೊತ್ತುಗಳಿಗೆ ಹಾನಿ: ಉಳ್ಳಾಲ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಆರೋಪ

Update: 2017-06-26 16:44 GMT

ಉಳ್ಳಾಲ, ಜೂ.26: ಉಳ್ಳಾಲ ಕೇಂದ್ರ ಜುಮಾ ಮಸೀದಿಗೆ ಸೋಮವಾರ ಅಕ್ರಮ ಪ್ರವೇಶಗೈದ ಕೆಲವರು ಈದ್ ನಮಾಝ್ ಮತ್ತು ಖುತ್ಬಾ ನೆರವೇರಿಸಿದ್ದಲ್ಲದೆ, ಮಸೀದಿಯ ಸೊತ್ತುಗಳಿಗೆ ಹಾನಿ ಮಾಡಿದ್ದಾರೆ ಎಂದು ಆರೋಪಿಸಿರುವ ಉಳ್ಳಾಲ ದಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್, ಇದರಿಂದಾಗಿ ಜನರ ಭಕ್ತಿ ಮತ್ತು ಶ್ರದ್ಧಾ ಕೇಂದ್ರವಾದ ಉಳ್ಳಾಲ ದರ್ಗಾದ ಪ್ರಾವಿತ್ರ್ಯತೆಗೆ ಧಕ್ಕೆಯುಂಟಾಗಿದೆ. ಅಲ್ಲದೆ ಈ ವೇಳೆ ಇಬ್ಬರ ಮೇಲೆ ಹಲ್ಲೆಗೈಯಲಾಗಿದ್ದು, ಈ ಕೃತ್ಯ ಖಂಡನೀಯ ಎಂದಿದ್ದಾರೆ.

ಸೋಮವಾರ ದರ್ಗಾದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಶನಿವಾರ ಚಂದ್ರದರ್ಶನದ ಬಗ್ಗೆ ನಮಗೆ ಮಾಹಿತಿ ಬಂದ ತಕ್ಷಣ ಉಳ್ಳಾಲ ಕೇಂದ್ರ ಮಸೀದಿಯ ಮಾಜಿ ಖತೀಬ್ ಹಾಗೂ ಹಾಲಿ ಸಹಾಯಕ ಖಾಝಿ ಅಬ್ದುಲ್ ರವೂಫ್ ಮುಸ್ಲಿಯಾರ್‌ರ ಬಳಿ ಈ ಬಗ್ಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳುವಂತೆ ಸೂಚಿಸಿದ್ದೆವು. ಅದರಂತೆ ಅವರು ಬೇಕಲ ಉಸ್ತಾದ್, ಜಿಫ್ರಿ ತಂಙಳ್, ಪಲ್ಲಂಗೋಡ್ ಉಸ್ತಾದ್, ಅತ್ತಾವುಲ್ಲ ತಂಙಳ್ ಮುಂತಾದವರ ಜೊತೆ ಚರ್ಚಿಸಿ ತಕ್ಬೀರ್ ಮೊಳಗಿಸಲು ಹೇಳಿದ್ದರು. ತಕ್ಬೀರ್ ಮೊಳಗಿಸಿದ ಬಳಿಕ ಬಶೀರ್ ಉಸ್ತಾದ್‌ರ ನೇತೃತ್ವದ ಒಂದು ತಂಡ ನನ್ನ ಮನೆಗೆ ಬಂದು ಈ ಬಗ್ಗೆ ಪ್ರಶ್ನಿಸಿದ್ದರು. ಚಂದ್ರದರ್ಶನ ಖಚಿತಗೊಂಡ ನಂತರವೇ ತಕ್ಬೀರ್ ಮೊಳಗಿಸಿ ರವಿವಾರ ಹಬ್ಬ ಆಚರಿಸಲಾಗಿದೆ. ಶನಿವಾರ ರಾತ್ರಿ ತಕ್ಬೀರ್ ಹೇಳಿದ ಬಳಿಕ ಒಂದು ಗುಂಪು ಉಳ್ಳಾಲ ದರ್ಗಾದಲ್ಲಿ ತಡರಾತ್ರಿ ಬಂದು ತರಾವೀಹ್ ನಮಾಝ್ ಮಾಡಿದ್ದರು. ಸಮಸ್ಯೆಯ ಗಂಭೀರತೆಯನ್ನು ಅರಿತ ನಾವು ಸೋಮವಾರ ಯಾವುದೇ ಅಹಿತಕರ ಘಟನೆಯಾಗಬಾರದು ಎಂದು ಕೇಂದ್ರ ಮಸೀದಿಯ ಬಾಗಿಲಿಗೆ ಬೀಗ ಹಾಕಿದ್ದೆವು ಎಂದರು.

ಎಲ್ಲ ಮಸೀದಿಗಳಲ್ಲಿ ರಾತ್ರಿ ವೇಳೆ ಒಳಗಡೆ ಬೀಗ ಹಾಕಲಾಗುತ್ತದೆ. ಕೇಂದ್ರ ಮಸೀದಿ-ದರ್ಗಾಕ್ಕೆ ಸದಾ ಜನರು ಆಗಮಿಸುತ್ತಿರುವುದರಿಂದ ಇಲ್ಲಿ ಬೀಗ ಹಾಕಲಾಗುವುದಿಲ್ಲ. ಆದರೆ ನಿನ್ನೆ ಮಸೀದಿಯ ರಕ್ಷಣೆಯ ಹಿನ್ನಲೆಯಲ್ಲಿ ಬೀಗ ಹಾಕಲಾಗಿತ್ತು. ಉಳ್ಳಾಲ ದರ್ಗಾ ಆಡಳಿತಕ್ಕೆ ಒಳಪಟ್ಟ 32 ಮಸೀದಿಗಳ ಪೈಕಿ 24 ಮಸೀದಿಗಳಲ್ಲಿ ಉಡುಪಿ ಖಾಝಿ ಬೇಕಲ ಇಬ್ರಾಹೀಂ ಮುಸ್ಲಿಯಾರ್, ದ.ಕ.ಜಿಲ್ಲಾ ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್, ಉಳ್ಳಾಲ ಸಹಾಯಕ ಖಾಝಿ ಹಾಜಿ ಅಬ್ದುಲ್ ರವೂಫ್ ಮುಸ್ಲಿಯಾರ್‌ರ ಒಕ್ಕೊರಲ ತೀರ್ಮಾನದಂತೆ ರವಿವಾರ ಈದುಲ್ ಫಿತ್ರ್ ಆಚರಿಸಲಾಗಿದೆ.

ಎ.ಪಿ.ಉಸ್ತಾದರ ನೇತೃತ್ವದಲ್ಲಿರುವ ಉಡುಪಿ, ಮಂಗಳೂರು, ಕಾಸರಗೋಡು ಜಿಲ್ಲೆಗಳಲ್ಲಿ ಕೂಡ ರವಿವಾರ ಈದ್ ಆಚರಿಸಲಾಗಿದೆ. ಪೊಸೋಟ್ ತಂಙಳ್, ಅತಾವುಲ್ಲ ತಂಙಳ್, ಆಟಕ್ಕೋಯ ತಂಙಳ್ ಹಾಗೂ ಇ.ಕೆ. ಉಸ್ತಾದ್ ವಿಭಾಗದ ಮಸೀದಿಗಳಲ್ಲೂ ಕೂಡ ರವಿವಾರ ಈದ್ ಆಚರಿಸಲಾಗಿದೆ. ಆದರೆ ಕೂರತ್ ತಂಙಳ್ ಸೋಮವಾರ ಈದ್ ಆಚರಿಸಲು ಕರೆ ಕೊಟ್ಟರು. ಈ ಬಗ್ಗೆ ಅಲ್‌ ಮದೀನಾ ಮಂಜನಾಡಿ ಉಸ್ತಾದ್, ಪಲ್ಲಂಗೋಡ್ ಉಸ್ತಾದ್ ಮತ್ತಿತರ ಧಾರ್ಮಿಕ, ರಾಜಕೀಯ ಮುಖಂಡರು ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದ್ದರೂ ಪಲಫ್ರದವಾಗಲಿಲ್ಲ ಎಂದು ಹಾಜಿ ಅಬ್ದುಲ್ ರಶೀದ್ ಹೇಳಿದರು.

ಸೋಮವಾರ ಈದ್ ಆಚರಿಸಿದ ಗುಂಪೊಂದು ಹೊರಗಿನ ಗೂಂಡಾ ಪ್ರವೃತ್ತಿಯ ಹುಡುಗರನ್ನು ಸೇರಿಸಿಕೊಂಡು ಮಸೀದಿಗೆ ಅಕ್ರಮ ಪ್ರವೇಶಗೈದು, ಅವಾಚ್ಯ ಶಬ್ದಗಳಿಂದ ನಿಂದಿಸಿ ಧ್ವನಿವರ್ಧಕಗಳನ್ನು ಹಾಳುಗೆಡವಿದ್ದಾರೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತೆ ನಮಾಝ್ ಮತ್ತು ಪ್ರಚೋದನಕಾರಿ ಭಾಷಣವನ್ನು ಮಾಡಿದ್ದಾರೆ. ದರ್ಗಾಕ್ಕೆ ಬಂದ ಯಾತ್ರಾರ್ಥಿಗಳು ಸೇರಿದಂತೆ ಹಲವರಿಗೆ ಹಲ್ಲೆ ಮಾಡಿದ್ದಾರೆ. ಇದನ್ನು ಪ್ರಶ್ನಿಸಿದ ಆಡಳಿತ ಸಮಿತಿ ಸದಸ್ಯ ಕೆ.ಎನ್. ಮಹ್ಮೂದ್‌ಗೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಮಾಸ್ತಿಕಟ್ಟೆಯ ನಿವಾಸಿ ರಿಲ್ವಾನ್‌ರ ಮೇಲೂ ಹಲ್ಲೆ ನಡೆಸಿದ್ದಾರೆ. ಗಾಯಗೊಂಡ ಅವರನ್ನು ತೊಕ್ಕೊಟ್ಟುವಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದರ್ಗಾಕ್ಕೆ ಆಗಮಿಸಿ ಹಲವರ ಮೇಲೆ ಹಲ್ಲೆ ನಡೆಸಿ ಕಾನೂನು ಉಲ್ಲಂಘಿಸಿದವರ ವಿರುದ್ಧ ಉಳ್ಳಾಲ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅಬ್ದುಲ್ ರಶೀದ್ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಸೀದಿಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ತ್ವಾಹಾ, ಉಪಾಧ್ಯಕ್ಷ ಯು.ಕೆ. ಮೋನು ಇಸ್ಮಾಯಿಲ್, ಮುಹಮ್ಮದ್ ಬಾವ, ಕೋಶಾಧಿಕಾರಿ ಯು.ಕೆ. ಇಲ್ಯಾಸ್, ಹಾಜಿ ಮುಹಮ್ಮದ್ ಹಳೆಕೋಟೆ ಮತ್ತಿತರರು ಉಪಸ್ಥಿತರಿದ್ದರು.

ಉಳ್ಳಾಲಕ್ಕೆ ನೂತನ ಖಾಝಿ: ಉಳ್ಳಾಲದಲ್ಲಿ ಫಝಲ್ ಕೋಯಮ್ಮ ತಂಙಳ್ ಖಾಝಿಯಾಗಿದ್ದರೂ ಕಳೆದ ಒಂದು ವರ್ಷದಿಂದ ಅವರು ನಮ್ಮ ಸಂಪರ್ಕದಲ್ಲಿ ಇಲ್ಲ. ಮಸೀದಿಗೂ ಬರುತ್ತಿಲ್ಲ. ಇದರಿಂದ ಧಾರ್ಮಿಕ ವಿಧಿ ವಿಧಾನದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ತುಂಬಾ ಕಷ್ಟವಾಗುತ್ತಿದೆ. ಹಾಗಾಗಿ ಒಂದು ವರ್ಷದ ಒಳಗೆ ಸ್ಥಳೀಯರೊಬ್ಬರನ್ನು ಇಲ್ಲವೇ ಅರ್ಹರನ್ನು ಖಾಝಿಯಾಗಿ ನೇಮಿಸಲು ತೀರ್ಮಾನಿಸಲಾಗುವುದು ಎಂದು ಅಬ್ದುಲ್ ರಶೀದ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News