ಜುನೈದ್ ಹತ್ಯೆ ಹೇಯ ಕೃತ್ಯ: ಇದನ್ನು ಸರಕಾರ ಸಹಿಸದು; ಕೇಂದ್ರ ಸಚಿವ

Update: 2017-06-26 15:43 GMT

  ಹೊಸದಿಲ್ಲಿ, ಜೂ.26: ರೈಲಿನಲ್ಲಿ ಗೋಮಾಂಸ ಕೊಂಡೊಯ್ಯುತ್ತಿದ್ದ ಆರೋಪದಡಿ 16ರ ಹರೆಯದ ಬಾಲಕನನ್ನು ಥಳಿಸಿ ಹತ್ಯೆ ಮಾಡಿರುವುದು ಅತ್ಯಂತ ಹೇಯ ಮತ್ತು ನೋವಿನ ಘಟನೆಯಾಗಿದೆ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದು, ಸರಕಾರ ಇಂತಹ ಘಟನೆಗಳನ್ನು ಸಹಿಸದು ಎಂದಿದ್ದಾರೆ.

   ಬಾಲಕ ಜುನೈದ್‌ನನ್ನು ಥಳಿಸಿ ಹತ್ಯೆಗೈದ ದುಷ್ಕರ್ಮಿಗಳ ಪತ್ತೆ ಕಾರ್ಯ ಮುಂದುವರಿದಿದೆ. ತನಿಖೆಗೆ ನೆರವಾಗುವಂತಹ ಮಾಹಿತಿ ನೀಡುವವರಿಗೆ ಬಹುಮಾನ ನೀಡಲಾಗುವುದು. ಮದ್ಯದ ಅಮಲೇರಿದ ವ್ಯಕ್ತಿ ನಡೆಸಿದ ಈ ಹೀನ ಕೃತ್ಯವನ್ನು ಸರಕಾರ ಸಹಿಸುವುದಿಲ್ಲ. ಕೊಲೆ ಮಾಡಿದವರಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು ಎಂದು ಕಾನೂನು ತಿಳಿಸಿದೆ. ಪ್ರಾಮಾಣಿಕವಾಗಿ ಕಾನೂನು ಕ್ರಮ ಜಾರಿಗೊಳಿಸುವುದು ಈಗಿನ ಅಗತ್ಯವಾಗಿದೆ ಎಂದವರು ಹೇಳಿದರು. ಅಲ್ಲದೆ ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಗುಂಪೊಂದು ಪೊಲೀಸ್ ಅಧಿಕಾರಿಯನ್ನು ಥಳಿಸಿ ಹತ್ಯೆಗೈದಿರುವುದನ್ನೂ ಸಚಿವರು ಖಂಡಿಸಿದರು.

 ನಕಲಿ ಗೋರಕ್ಷಕರಿಗೆ ಗೋವುಗಳ ಬಗ್ಗೆ ಕಾಳಜಿ ಇಲ್ಲ. ಸಮಾಜದಲ್ಲಿ ಉದ್ವಿಗ್ನತೆಯ ಪರಿಸ್ಥಿತಿ ಹುಟ್ಟುಹಾಕುವುದು ಅವರ ಉದ್ದೇಶವಾಗಿದೆ. ಇಂತವರನ್ನು ಕಂಡುಹಿಡಿದು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರಧಾನಿ ಮೋದಿ ಈ ಹಿಂದೆಯೇ ಹೇಳಿದ್ದಾರೆ ಎಂದು ಸಚಿವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News