ಸೌಂದರ್ಯ ತಜ್ಞೆಯರಿಗೆ ಬೇಡಿಕೆ ಇದೆ: ರೇಣು ಜಯರಾಂ
ಉಡುಪಿ, ಜೂ.26: ಸೌಂದರ್ಯ ತಜ್ಞರ ವೃತ್ತಿ ವೇಗವಾಗಿ ಅಭಿವೃದ್ಧಿ ಕಾಣುತ್ತಿರುವ ಕ್ಷೇತ್ರವಾಗಿದೆ. ಆದುದರಿಂದ ಅದಕ್ಕೆ ಮಾರುಕಟ್ಟೆ ಸಮಸ್ಯೆ ಎದುರಾ ಗುವುದಿಲ್ಲ. ಪ್ರತಿ ಮಹಿಳೆಗೂ ತಾನು ಸುಂದರವಾಗಿ ಕಾಣಬೇಕೆಂಬ ಬಯಕೆ ಇರುತ್ತದೆ. ಹೀಗಾಗಿ ಸೌಂದರ್ಯ ತಜ್ಞೆಯರಿಗೆ ಸದಾ ಬೇಡಿಕೆ ಇದ್ದೇ ಇರುತ್ತದೆ ಎಂದು ಮಣಿಪಾಲ ‘ಪವರ್’ ಸಂಸ್ಥೆಯ ಸ್ಥಾಪಕಾಧ್ಯಕ್ಷೆ, ಜಯ್‌ದೇವ್ ಮೋಟಾರ್ಸ್‌ನ ಎಂಡಿ ರೇಣು ಜಯರಾಮ್ ಹೇಳಿದ್ದಾರೆ.
ಮಹಿಳಾ ಸೌಂದರ್ಯ ತಜ್ಞೆಯರ ಸಂಘದ ವತಿಯಿಂದ ಕಿದಿಯೂರು ಹೊಟೇಲು ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾದ ಮಹಿಳಾ ಸೌಂದರ್ಯ ತಜ್ಞೆಯರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಸಂಘಸಂಸ್ಥೆಗಳೊಂದಿಗೆ ಬೆರೆತು ಕೆಲಸ ಮಾಡುವುದರಿಂದ ಜೀವನದ ಒತ್ತಡ ಕಡಿಮೆಯಾಗುತ್ತದೆ. ನಮ್ಮತನವನ್ನು ಇನ್ನೊಬ್ಬರಿಗೆ ಕಸಿಯಲು ಸಾಧ್ಯವಿಲ್ಲ. ಆ ಮೂಲಕ ನಾವು ಪ್ರಸಿದ್ಧಿ ಪಡೆಯಬೇಕು ವಿನಾ ಇನ್ನೊಬ್ಬರ ವ್ಯವಹಾರವನ್ನು ದೂಷಿಸುವುದು, ಗ್ರಾಹಕರನ್ನು ವಂಚಿಸುವುದು ಮಾಡಿದರೆ ಅಭಿವೃದ್ಧಿ ಸಾಧ್ಯವಾಗದು ಎಂದು ಕಿವಿಮಾತು ಹೇಳಿದರು.
ವೃತ್ತಿಯಲ್ಲಿ ಸ್ಪರ್ಧೆ ಬೇಕು. ಚಿಂತನೆಗಳು ಗುಣಾತ್ಮಕವಾಗಿರಬೇಕು. ವ್ಯವಹಾರ ದೊಂದಿಗೆ ಗ್ರಾಹಕರಿಗೆ ಉತ್ತಮ ಸಲಹೆಗಳನ್ನು ನೀಡುವುದರ ಮೂಲಕ ಸ್ನೇಹಭಾವದ ಸಂಪರ್ಕ ಬೆಳೆಸಿಕೊಳ್ಳಬೇಕು. ಅದಕ್ಕಾಗಿ ಬ್ಯೂಟಿ ಪಾರ್ಲರ್‌ನಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಬಳಸಬೇಕು ಎಂದರು.
ಉಡುಪಿ ಮಹಿಳಾ ಸೌಂದರ್ಯ ತಜ್ಞೆಯರ ಸಂಘದ ಅಧ್ಯಕ್ಷೆ ರಾಜಲಕ್ಷ್ಮೀ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಣಿಪಾಲ ಆಸ್ಪತ್ರೆಯ ಡೆಂಟಲ್ ಸರ್ಜರಿ ವಿಭಾಗದ ಮುಖ್ಯಸ್ಥೆ ಡಾ. ರಶ್ಮಿ ನಾಯಕ್, ಕಾರ್ಕಳದ ಉದ್ಯಮಿ ಅನಿತಾ ಡಿಸಿಲ್ವ ಮುಖ್ಯ ಅತಿಥಿಗಳಾಗಿದ್ದರು. ಸಂಘದ ಸ್ಥಾಪಕಾಧ್ಯಕ್ಷೆ ಮರಿಯಾ, ಪದಾಧಿಕಾರಿಗಳಾದ ಭಾರತಿ, ಗೀತಾ ದಯಾನಂದ್ ಉಪಸ್ಥಿತರಿದ್ದರು. ಪ್ರಿಯಾ ಉದಯ್ ಸ್ವಾಗತಿಸಿದರು.