ಥೈಲ್ಯಾಂಡ್, ಮ್ಯಾನ್ಮಾರ್‌ನಲ್ಲಿ 1 ಬಿಲಿಯ ಡಾಲರ್ ಮೌಲ್ಯದ ಮಾದಕದ್ರವ್ಯ ಬೆಂಕಿಗಾಹುತಿ

Update: 2017-06-26 17:20 GMT

ಯಾಂಗೊನ್,ಜೂ.26: ಮಾದಕದ್ರವ್ಯ ಪಿಡುಗಿನ ವಿರುದ್ಧ ಸಮರಸಾರಿರುವ ಮ್ಯಾನ್ಮಾರ್ ಹಾಗೂ ಥೈಲ್ಯಾಂಡ್ ವಿಶ್ವಸಂಸ್ಥೆಯ ಮಾದಕದ್ರವ್ಯ ವಿರೋಧಿ ದಿನಾಚರಣೆಯ ಹಿನ್ನೆಲೆಯಲ್ಲಿ ಸೋಮವಾರ 800 ಕೋಟಿ ಡಾಲರ್‌ಗೂ ಅಧಿಕ ವೌಲ್ಯದ ಮಾದಕದ್ರವ್ಯವನ್ನು ಸುಟ್ಟುಹಾಕಿವೆ.

 ಥೈಲ್ಯಾಂಡ್‌ನ ಆಯುಥಾಯ ಪ್ರಾಂತದಲ್ಲಿ, 590 ದಶಲಕ್ಷ ಡಾಲರ್‌ಗೂ ಅಧಿಕ ವೌಲ್ಯದ 9 ಟನ್ ಮಾದಕದ್ರವ್ಯಗಳನ್ನು ಇಂದು ಬೆಂಕಿಗಾಹುತಿ ಮಾಡಲಾಯಿತು.
ಮಲೇಶ್ಯ ಮತ್ತಿತರ ದೇಶಗಳಿಂದ ಮಾದಕದ್ರವ್ಯಗಳನ್ನು ಕಳ್ಳಸಾಗಣೆ ಮಾಡುತ್ತಿರುವ ಹಲವಾರು ಜಾಲಗಳನ್ನು ಮಟ್ಟಹಾಕುವಲ್ಲಿ ಥೈಲ್ಯಾಂಡ್ ಸಫಲವಾಗಿದೆಯೆಂದು ದೇಶದ ಮಾದಕದ್ರವ್ಯ ನಿಯಂತ್ರಣ ಮಂಡಳಿಯ ಪ್ರಧಾನ ಕಾರ್ಯದರ್ಶಿ ಸಿರಿನ್ಯ ಸಿತಿಚಾಯ್ ತಿಳಿಸಿದ್ದಾರೆ.

 ನೆರೆಯ ರಾಷ್ಟ್ರವಾದ ಮ್ಯಾನ್ಮಾರ್‌ನಲ್ಲೂ ವಶಪಡಿಸಿಕೊಳ್ಳಲಾದ 217 ದಶಲಕ್ಷ ಡಾಲರ್ ವೌಲ್ಯದ ಡ್ರಗ್ಸ್‌ಗಳನ್ನು ಸುಟ್ಟುಹಾಕಿರುವುದಾಗಿ ಅಲ್ಲಿನ ಪೊಲೀಸರು ತಿಳಿಸಿದ್ದಾರೆ.

ಮ್ಯಾನ್ಮಾರ್, ಲಾವೊಸ್, ದಕ್ಷಿಣ ಚೀನಾ ಹಾಗೂ ಉತ್ತರಥಾಯ್ಲೆಂಡ್‌ಗಳಲ್ಲಿ ಕಳೆದೊಂದು ವರ್ಷದಲ್ಲಿ ದಾಖಲೆ ಪ್ರಮಾಣದ ಮಾದಕದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಮ್ಯಾನ್ಮಾರ್, ಜಗತ್ತಿನಲ್ಲೇ ಅತ್ಯಧಿಕ ಪ್ರಮಾಣದ ಮಾದಕದ್ರವ್ಯ ಉತ್ಪಾದಕ ರಾಷ್ಟ್ರಗಳಲ್ಲೊಂದೆಂಬ ಕುಖ್ಯಾತಿಯನ್ನು ಪಡೆದಿದೆ.

    ಆಗ್ನೇಯ ಏಶ್ಯದಲ್ಲಿ ಹೆರಾಯಿನ್ ಹಾಗೂ ಮೆಥಾಂಫೆಟಾಮೈನ್‌ನಂತಹ ಮಾದಕದ್ರವ್ಯಗಳ ಅಕ್ರಮ ಮಾರಾಟ ವ್ಯಾಪಕವಾಗಿ ಹೆಚ್ಚುತ್ತಿರುವುದಾಗಿ ವಿಶ್ವಸಂಸ್ಥೆ ಆತಂಕ ವ್ಯಕ್ತಪಡಿಸಿದೆ. 2013ರಲ್ಲಿ ಆಗ್ನೇಯ ಏಶ್ಯದಲ್ಲಿ 31 ಶತಕೋಟಿ ಡಾಲರ್ ವೌಲ್ಯದ ಹೆರಾಯಿನ್ ಹಾಗೂ ಮೆಥಾಂಫೆಟಾಮೈನ್ ಕಾಳಸಂತೆಯಲ್ಲಿ ಮಾರಾಟವಾಗಿರುವುದಾಗಿ ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News