ನಾನು ಯಾವೊಬ್ಬ ಕೊಲೆಗಾರನಿಗೂ ಆಶ್ರಯ ಕೊಟ್ಟವನಲ್ಲ: ಸಚಿವ ರೈ

Update: 2017-06-27 09:49 GMT

ಮಂಗಳೂರು, ಜೂ.27: ನಾನು ಯಾವೊಬ್ಬ ಕೊಲೆಗಾರನಿಗೂ ಆಶ್ರಯ ಕೊಟ್ಟವನಲ್ಲ. ಪ್ರಚೋದನಕಾರಿ ಭಾಷಣವನ್ನೂ ಮಾಡಿದವನಲ್ಲ. ಕೊಲೆಗಾರರಿಗೆ ಆಶ್ರಯ ಕೊಟ್ಟವರು, ಪ್ರಚೋದನಕಾರಿ ಭಾಷಣ ಮಾಡಿದವರನ್ನು ಬಂಧಿಸುವ ಬಗ್ಗೆ ತಾನು ಮುಖ್ಯಮಂತ್ರಿ, ಡಿಜಿಪಿ ಮತ್ತಿತರ ಹಿರಿಯ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದರು.

ದ.ಕ.ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಎಲ್ಲ ಜಾತಿ, ಧರ್ಮದ ಜೊತೆ ಅನ್ಯೋನ್ಯತೆಯಿಂದಿದ್ದೇನೆ. ಅಲ್ಲದೆ ಕ್ಷೇತ್ರದಲ್ಲೂ ಸಾಕಷ್ಟು ಅಭಿವೃದ್ಧಿ ಕಾರ್ಯ ಆಗಿದೆ. ಇದನ್ನು ಸಹಿಸದ ಮತೀಯ ಶಕ್ತಿಗಳು ನನ್ನನ್ನು ಗುರಿಯಾಗಿಸಿಕೊಂಡಿವೆ ಎಂದು ಆಪಾದಿಸಿದರು.

ಜಿಲ್ಲೆಯ ಶಾಂತಿ, ಸುವ್ಯವಸ್ಥೆಯ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವನಾಗಿ ನಾನು ಜಿಲ್ಲಾ ಎಸ್ಪಿ ಜೊತೆ ಮಾತನಾಡಿದ್ದರಲ್ಲಿ ತಪ್ಪಿಲ್ಲ. ಅದನ್ನು ನಾನು ಈಗಲೂ ಸಮರ್ಥಿಸುತ್ತಿದ್ದೇನೆ. ನಾನು ಬಂಟ್ವಾಳ ಐಬಿಯಲ್ಲಿ ಎಸ್ಪಿ ಜೊತೆ ಮಾತನಾಡಿದ ಒಂದು ಭಾಗವನ್ನು ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದು ಬಿಡಲಾಗಿದೆ. ಅದನ್ನೇ ಮುಂದಿಟ್ಟುಕೊಂಡು ಕೆಲವರು ವಿರೋಧ ವ್ಯಕ್ತಪಡಿಸತೊಡಗಿದರು. ಆದರೆ ವಾಸ್ತವ ವಿಚಾರವನ್ನು ಮರೆಮಾಚಲಾಗಿದೆ ಎಂದು ರೈ ಹೇಳಿದರು.

ಅಪ್ಪಟ ಜಾತ್ಯತೀತ: ನನ್ನನ್ನು ಹಿಂದು ಮತ್ತು ಮುಸ್ಲಿಂ ಮತೀಯವಾದಿಗಳು ಟೀಕಿಸುತ್ತಲೇ ಇದ್ದಾರೆ. ಆ ಮೂಲಕ ನಾನು ಅಪ್ಪಟ ಜಾತ್ಯತೀತ ಎಂಬುದು ಸಾಬೀತಾಗಿದೆ ಎಂದು ಸಚಿವ ರೈ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಡಿಸಿಸಿ ನೂತನ ಅಧ್ಯಕ್ಷ ಬೆಳ್ತಂಗಡಿಯ ಹರೀಶ್ ಕುಮಾರ್, ಶಾಸಕ ಜೆ.ಆರ್.ಲೋಬೊ, ಇಬ್ರಾಹೀಂ ಕೋಡಿಜಾಲ್, ಬಿ.ಎಚ್.ಖಾದರ್, ಉಪಮೇಯರ್ ರಜನೀಶ್ ಕಾಪಿಕಾಡ್, ಪದ್ಮನಾಭ ನರಿಂಗಾನ, ಶಾಲೆಟ್ ಪಿಂಟೋ, ಮಿಥುನ್ ರೈ, ಶಶಿಧರ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News