ಮಂಗಿಲಪದವು ಕೊರಗರ ಕಾಲನಿಯಲ್ಲಿ "ಎಂ.ಫ್ರೆಂಡ್ಸ್ ಈದ್"

Update: 2017-06-27 11:51 GMT

ವಿಟ್ಲ, ಜೂ.27: ಇಲ್ಲಿನ ಮಂಗಿಲಪದವು ಕೊರಗರ ಕಾಲನಿಯಲ್ಲಿ ಮಂಗಳೂರಿನ ಎಂ.ಫ್ರೆಂಡ್ಸ್ ಟ್ರಸ್ಟ್ ವತಿಯಿಂದ ಈದುಲ್ ಫಿತ್ರನ್ನು ಮಾಂಕು ಕೊರಗರ ಮನೆಯಂಗಳದಲ್ಲಿ ಹಮ್ಮಿಕೊಳ್ಳಲಾಯಿತು.

ಕೊರಗ ಮಹಿಳೆಯರ ಪಾಡ್ದನದೊಂದಿಗೆ ಕಾಲನಿ ಸುತ್ತಿದ ಸಚಿವರಿಗೆ ಮುಟ್ಟಾಳೆಯ ಸ್ವಾಗತ ಕೋರಲಾಯಿತು. ಪತ್ರಕರ್ತ ಶಂಸುದ್ದೀನ್ ಸಂಪ್ಯ ಕೊರಗ ಜನಾಂಗದ ಅಳಿವು-ಉಳಿವಿನ ಬಗ್ಗೆ ವಿವರಿಸಿ ಈದ್ ಸಂದೇಶ ನೀಡಿದರು.

ಬಳಿಕ ಮಾತನಾಡಿದ ಆಹಾರ ಸಚಿವ, ಎಂ.ಫ್ರೆಂಡ್ಸ್ ಗೌರವಾಧ್ಯಕ್ಷ ಯು.ಟಿ.ಖಾದರ್, ಕೊರಗರೊಂದಿಗೆ ಸೇರಿ ಈದ್ ಆಚರಿಸುವುದು ನನ್ನ ಪಾಲಿಗೆ ದೊರೆತ ಸುಯೋಗ ಎಂದರು. ಎಂ.ಫ್ರೆಂಡ್ಸ್ ಅಧ್ಯಕ್ಷ ಮಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಕಾಲನಿಯ ಮೂಲಭೂತ ರಹಿತ ಕೊರಗರಿಗೆ ಶೌಚಾಲಯ ನಿರ್ಮಿಸಿಕೊಡುವ ಭರವಸೆ ನೀಡಿದರು.

ಕಾರ್ಯಕ್ರಮದ ಪ್ರಾಯೋಜಕರಾದ ಅಬೂಬಕರ್ ಸಿದ್ದೀಕ್ ಮಸ್ಕತ್, ಎಂ.ಫ್ರೆಂಡ್ಸ್ ಕಾರ್ಯದರ್ಶಿ ರಶೀದ್ ವಿಟ್ಲ, ಮುಸ್ತಫಾ ಇರುವೈಲು, ತಾಪಂ ಮಾಜಿ ಸದಸ್ಯೆ ಜೂಲಿಯಾನಾ ಮೇರಿ ಲೋಬೊ, ವೀರಕಂಭ ಗ್ರಾಪಂ ಸದಸ್ಯರಾದ ಅಬ್ಬಾಸ್ ಕೆಲಿಂಜ, ಉಬೈದ್, ಶೀಲಾ ವೇಗಸ್, ಕೊರಗರ ಕಾಲನಿಯ ಮಾಂಕು, ಸಲೀಂ, ರಫೀಕ್ ಅಂಬ್ಲಮೊಗರು, ಲಿಬ್ ಝತ್, ವಿ.ಎಚ್.ಅಶ್ರಫ್, ಕೆ.ಪಿ.ಸಾದಿಕ್ ಹಾಜಿ ಕುಂಬ್ರ, ಶಾಕಿರ್ ಹಾಜಿ ಪುತ್ತೂರು, ಡಿ.ಎಂ.ರಶೀದ್ ಉಕ್ಕುಡ, ಹನೀಫ್ ಅಲ್ ಫಲಾಹ್, ಅಬ್ಬಾಸ್ ಟಿ.ಎಚ್.ಎಂ.ಎ, ಇರ್ಶಾದ್ ವೇಣೂರು, ಕಲಂದರ್ ಪರ್ತಿಪ್ಪಾಡಿ, ಅನ್ಸಾರ್ ಬೆಳ್ಳಾರೆ, ಇರ್ಶಾದ್ ಮಂಗಳೂರು, ಆರಿಫ್ ಬೆಳ್ಳಾರೆ, ಇಸ್ಮಾಯಿಲ್ ಕೋಲ್ಪೆ, ಅಬೂಬಕರ್ ನೋಟರಿ, ಆಶಿಕ್ ಕುಕ್ಕಾಜೆ, ಅಬೂಬಕರ್ ಅನಿಲಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.

ವಿದ್ಯುತ್ ಸಂಪರ್ಕವಿಲ್ಲದ ಮನೆ: ಕೊರಗರ ಸಮಸ್ಯೆಗೆ ತಕ್ಷಣ ಪರಿಹಾರ ಸೂಚಿಸಿದ ಸಚಿವ ಖಾದರ್
ಕೊರಗರ ಕಾಲನಿಯ ಎರಡು ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡದ ಮೆಸ್ಕಾಂ ಬಗ್ಗೆ ಕೊರಗರು ಮತ್ತು ಆದಿ ದ್ರಾವಿಡ ಸಮುದಾಯದವರು ಆಹಾರ ಸಚಿವರ ಗಮನಕ್ಕೆ ತಂದರು. ಈ ಸಂದರ್ಭ ಸಚಿವರು ಕೂಡಲೇ ಮೆಸ್ಕಾಂ ಅಧಿಕಾರಿಗೆ ಫೋನ್ ಮಾಡಿ ಸ್ಥಳಕ್ಕೆ ಕರೆಸಿದರು. ಕೊರಗರಿಗೆ ಕೂಡಲೇ ವಿದ್ಯುತ್ ಸಂಪರ್ಕ ನೀಡಲು ಆದೇಶಿಸಿದರಲ್ಲದೆ ತಪ್ಪಿದರೆ, ಕಾರಣ ನೀಡಿ ಪತ್ರ ನೀಡಬೇಕೆಂದು ಹೇಳಿದರು.

ಜಾನಪದ ಹಾಡು ಹಾಡಿದ ಅಂಧ ಕೊರಗನಿಗೆ ಸಚಿವರಿಂದ ಪ್ರೋತ್ಸಾಹಧನ: ಸೌಹಾರ್ದತೆಯ ಕುರಿತು ಅರ್ಥಪೂರ್ಣ ಜಾನಪದ ಹಾಡು ಹಾಡಿದ ಕುರುಡ ವಿಕಲಾಂಗ ಸೀತಾರಾಮ ಕೊರಗ ಅವರಿಗೆ ಸಚಿವ ಯು.ಟಿ.ಖಾದರ್ ಸಾವಿರ ರೂ. ನೀಡಿ ಪ್ರೋತ್ಸಾಹಿಸಿದರು. ಇದೇ ಸಂದರ್ಭ ಸಚಿವರು ಮತ್ತು ಎಂ.ಫ್ರೆಂಡ್ಸ್ ಸದಸ್ಯರು ಕೊರಗರು ಮತ್ತು ಆದಿ ದ್ರಾವಿಡ ಸಮುದಾಯದ ಜೊತೆ ಈದ್ ಭೋಜನ ನಡೆಸಿದರು.

Writer - ರಶೀದ್ ವಿಟ್ಲ

contributor

Editor - ರಶೀದ್ ವಿಟ್ಲ

contributor

Similar News