ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿಯಿಂದ ದೂರು

Update: 2017-06-27 12:01 GMT

ಬಂಟ್ವಾಳ, ಜೂ. 27: ಸಾಮಾಜಿಕ ಜಾಲತಾಣಗಳಲ್ಲಿ ಹಾನಿಕಾರ ಹಾಗೂ ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣವಾದ ವಾಟ್ಸಪ್‌ನಲ್ಲಿ ತನ್ನ ಬಗ್ಗೆ ಆಕ್ಷೇಪಾರ್ಹ, ಅವಹೇಳನಕಾರಿ ಸುಳ್ಳು ಸುದ್ದಿಗಳನ್ನು ಕಿಡಿಗೇಡಿಗಳು ಹರಡುತ್ತಿದ್ದಾರೆ. ಸಾಮಾಜಿಕ ಶಾಂತಿಗೆ ಭಂಗವಾಗುವ ರೀತಿಯಲ್ಲಿ, ಕೋಮು ಗಲಭೆಗಳನ್ನು ಪ್ರಚೋದಿಸುವ ಸುದ್ದಿಗಳನ್ನು ರವಾನಿಸಿ ಮಾನಹಾನಿ ಮಾಡುತ್ತಿದ್ದಾರೆ. ಸಾರ್ವಜನಿಕರಲ್ಲಿ ತಪ್ಪು ಭಾವನೆಯನ್ನು ಮೂಡಿಸುವ ಒಳಸಂಚಿನ ಕೃತ್ಯ ಇದಾಗಿದೆ. ಈ ಬಗ್ಗೆ ಸುಳ್ಳು ಸುದ್ದಿ ಹರಡುವವರ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಪೊಲೀಸ್ ಠಾಣೆಗೆ ನೀಡಿರುವ ಲಿಖಿತ ದೂರಿನಲ್ಲಿ ಒತ್ತಾಯಿಸಿದ್ದಾರೆ.

ಬೆಂಜನಪದವಿನಲ್ಲಿ ನಡೆದ ಅಶ್ರಫ್ ಕಲಾಯಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಸಂದೇಶಗಳನ್ನು ರವಾನಿಸುತ್ತಿರುವುದು ಬೇಸರ ತಂದಿದೆ. ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಪೊಲೀಸರು ಆರೋಪಿಗಳನ್ನು ಬಂಧಿಸಿ ಪ್ರಧಾನ ಆರೋಪಿಯ ಹುಡುಕಾಟದಲ್ಲಿದ್ದಾರೆ. ಹೀಗಿರುವಾಗ ರಾಜಕೀಯ ದುರುದ್ದೇಶಕ್ಕಾಗಿ ಕೆಲ ವ್ಯಕ್ತಿಗಳು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬುತ್ತಿದ್ದಾರೆ. ಇಂತಹ ಕೃತ್ಯದಲ್ಲಿ ತೊಡಗಿಸಿರುವ ವ್ಯಕ್ತಿಗಳ ದೂರವಾಣಿ ಸಹಿತ ಪೊಲೀಸ್ ಠಾಣೆಗೆ ದೂರು ನೀಡಿಲಾಗಿದ್ದು ತಕ್ಷಣ ಕ್ರಮ ಜರುಗಿಸಲು ಪೊಲೀಸರನ್ನು ಆಗ್ರಹಿಸಲಾಗಿದೆ ಎಂದು ಪತ್ರಿಕೆಗಳಿಗೆ ಚಂದ್ರಪ್ರಕಾಶ್ ಶೆಟ್ಟಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News