ಬಿಹಾರದಲ್ಲಿ ವಾಮಾಚಾರದ ಶಂಕೆಯಿಂದ ವೃದ್ಧೆಯ ಹತ್ಯೆ

Update: 2017-06-27 12:46 GMT

ಕೈಮುರ್,ಜೂ.27: ವಾಮಾಚಾರವನ್ನು ಮಾಡುತ್ತಿದ್ದಳೆಂಬ ಶಂಕೆಯಿಂದ ಗಿರಿಜನ ಮಹಿಳೆಯನ್ನು ಕೊಡಲಿಯಿಂದ ಕೊಚ್ಚಿ ಕೊಲೆಗೈದಿರುವ ಘಟನೆ ಸೋಮವಾರ ಕೈಮುರ್ ಜಿಲ್ಲೆಯ ಸೋಧಾ ಗ್ರಾಮದ ಸಮೀಪ ದುಮರಪಾನ್ ಅರಣ್ಯದಲ್ಲಿ ನಡೆದಿದೆ.

ಸರಸ್ವತಿ ದೇವಿ(65) ಅರಣ್ಯದಲ್ಲಿ ಇಪ್ಪೆ ಹಣ್ಣಿನ ಬೀಜಗಳನ್ನು ಸಂಗ್ರಹಿಸುತ್ತಿದ್ದಾಗ ಲಾಲ್ಕೇಶ್ ಖರ್ವಾರ್ ಎಂಬಾತ ಆಕೆಯನ್ನು ಕೊಡಲಿಯಿಂದ ಕಡಿದಿದ್ದು, ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ. ನದಿಯಾಚೆ ಬೀಜಗಳನ್ನು ಸಂಗ್ರಹಿಸುತ್ತಿದ್ದ ಆಕೆಯ ಗಂಡ ಪ್ರಹ್ಲಾದ್ ಖರ್ವಾರ್‌ನ ಕಣ್ಣೆದುರೇ ಈ ಬರ್ಬರ ಹತ್ಯೆ ನಡೆದಿದೆ. ಆತ ಘಟನಾ ಸ್ಥಳಕ್ಕೆ ತಲುಪಲು ನದಿಯನ್ನು ದಾಟುವಷ್ಟರಲ್ಲಿ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ.

ಲಾಲ್ಕೇಶ್‌ನ ಪತ್ನಿ ಮತ್ತು ಮಗು ಮೃತಪಟ್ಟಿದ್ದು, ಇದಕ್ಕೆ ಸರಸ್ವತಿ ದೇವಿಯ ವಾಮಾಚಾರವೇ ಕಾರಣವೆಂದು ಮಂತ್ರವಾದಿಯೋರ್ವ ಆತನಿಗೆ ತಿಳಿಸಿದ್ದ. ಹೀಗಾಗಿ ಕಳೆದ ವಾರ ಎರಡೂ ಕುಟುಂಬಗಳ ನಡುವೆ ಜಗಳ ನಡೆದಿತ್ತು ಎಂದು ಪೊಲೀಸರು ತಿಳಿಸಿದರು. ಲಾಲ್ಕೇಶ್ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು, ತಲೆಮರೆಸಿಕೊಂಡಿರುವ ಆತನಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಎಸ್‌ಪಿ ಹರ್ಪ್ರೀತ್ ಕೌರ್ ತಿಳಿಸಿದರು.

ಮಹಿಳೆಯರಿಗೆ ಮಾಟಗಾತಿಯರೆಂಬ ಹಣೆಪಟ್ಟಿ ಹಚ್ಚಿ ಹಿಂಸಿಸುವುದು ಬಿಹಾರದ ಗ್ರಾಮೀಣ ಪ್ರದೇಶಗಳಲ್ಲಿ ಎಗ್ಗಿಲ್ಲದೆ ಮುಂದುವರಿದಿದೆ. ಕಳೆದೆರಡು ವರ್ಷಗಳಲ್ಲಿ ವಾಮಾಚಾರವನ್ನು ನಡೆಸುತ್ತಿದ್ದರೆಂಬ ಶಂಕೆಯಿಂದ 250ಕ್ಕೂ ಅಧಿಕ ಮಹಿಳೆಯರು ಹಿಂಸೆಗೊಳಗಾಗಿದ್ದು,ಹಲವರು ಪ್ರಾಣವನ್ನು ಕಳೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News