×
Ad

ಭ್ರಷ್ಟಾಚಾರ ಆರೋಪ: 39 ಐಎಎಸ್ ಅಧಿಕಾರಿಗಳ ತನಿಖೆ

Update: 2017-06-27 18:17 IST

ಹೊಸದಿಲ್ಲಿ, ಜೂ.27: ಭ್ರಷ್ಟಾಚಾರ ಮತ್ತಿತರ ಅಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ ಎನ್ನಲಾಗಿರುವ 39 ಐಎಎಸ್ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಐಎಎಸ್ ಅಧಿಕಾರಿಗಳ ನೋಡಲ್ ಪ್ರಾಧಿಕಾರವಾಗಿ ಕಾರ್ಯನಿರ್ವಹಿಸುವ ಸಿಬ್ಬಂದಿ ಮತ್ತು ತರಬೇತಿ ವಿಭಾಗ(ಡಿಒಪಿಟಿ) ಈ ಕುರಿತ ಪ್ರಕ್ರಿಯೆಗಳನ್ನು ನಡೆಸುತ್ತಿದೆ. 30 ಐಎಎಸ್ ಅಧಿಕಾರಿಗಳಲ್ಲದೆ, ಕೇಂದ್ರ ಸಚಿವಾಲಯ ಸೇವೆಯ 29 ಅಧಿಕಾರಿಗಳನ್ನೂ ತನಿಖೆಗೆ ಒಳಪಡಿಸಲಾಗಿದೆ.

ಆಡಳಿತ ವ್ಯವಸ್ಥೆ ಹಾಗೂ ಸಿಬ್ಬಂದಿಗಳ ಸೇವಾ ವಿಧಾನವನ್ನು ಸುಧಾರಿಸಲು ಕೈಗೊಂಡಿರುವ ಉಪಕ್ರಮದ ಅಂಗವಾಗಿ ಕೇಂದ್ರ ಸರಕಾರ ತನ್ನ ಸಿಬ್ಬಂದಿವರ್ಗದ ಸೇವಾ ದಾಖಲೆಯನ್ನು ಅವಲೋಕಿಸಿ ವಿಮರ್ಶೆ ಮಾಡುತ್ತಿದೆ. ಸೇವೆಗೆ ಅರ್ಹತೆ ಪಡೆದ 15 ವರ್ಷದ ಬಳಿಕ ಹಾಗೂ 25 ವರ್ಷದ ಸೇವೆಯ ಬಳಿಕ- ಹೀಗೆ ಕಾನೂನಿನ ಪ್ರಕಾರ ಸರಕಾರಿ ನೌಕರರ ಸೇವೆಯನ್ನು ಎರಡು ಬಾರಿ ವಿಮರ್ಶಿಸಲಾಗುತ್ತಿದೆ.

 ಕರ್ತವ್ಯ ಲೋಪ ಎಸಗಿದ ಕಾರಣಕ್ಕೆ ಕಳೆದ ಒಂದು ವರ್ಷದಲ್ಲಿ 129 ಸಿಬ್ಬಂದಿಗಳನ್ನು ಕಡ್ಡಾಯವಾಗಿ ನಿವೃತ್ತಿಗೊಳಿಸಲಾಗಿದೆ. ಅಲ್ಲದೆ ಸುಮಾರು 67,000 ಸಿಬ್ಬಂದಿಗಳ ಸೇವಾ ದಾಖಲೆಯನ್ನು ಪರಿಶೀಲಿಸುವ ಕಾರ್ಯ ಕೈಗೊಳ್ಳಲಾಗಿತ್ತು. ಇವರಲ್ಲಿ ಸುಮಾರು 25,000 ಸಿಬ್ಬಂದಿಗಳು ಐಐಎಸ್, ಐಪಿಎಸ್, ಐಆರ್‌ಎಸ್(ಇಂಡಿಯನ್ ರೆವೆನ್ಯೂ ಸರ್ವಿಸ್)ಗೆ ಸೇರಿದವರು. ಇತ್ತೀಚಿನ ಮಾಹಿತಿ ಪ್ರಕಾರ ದೇಶದಲ್ಲಿ ಒಟ್ಟು 48.85 ಲಕ್ಷ ಕೇಂದ್ರ ಸರಕಾರಿ ನೌಕರರು ಇದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News