ಜೈಲಿನಲ್ಲಿ ಕುಳಿತು ತನ್ನ ನೆನಪುಗಳನ್ನು ಪುಸ್ತಕವಾಗಿಸಲಿರುವ ನ್ಯಾ.ಕರ್ಣನ್

Update: 2017-06-27 13:14 GMT

ಕೋಲ್ಕತಾ,ಜೂ.27: ನ್ಯಾಯಾಂಗ ನಿಂದನೆಗಾಗಿ ಸರ್ವೋಚ್ಚ ನ್ಯಾಯಾಲಯದಿಂದ ಆರು ತಿಂಗಳ ಶಿಕ್ಷೆಗೆ ಗುರಿಯಾಗಿ ಇಲ್ಲಿಯ ಪ್ರೆಸಿಡೆನ್ಸಿ ಜೈಲು ಸೇರಿರುವ ಕಲಕತ್ತಾ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಸಿ.ಎಸ್.ಕರ್ಣನ್ ಅವರು ತನ್ನ ನೆನಪುಗಳನ್ನು ಅಕ್ಷರರೂಪಕ್ಕಿಳಿಸಲು ಯೋಜಿಸಿದ್ದಾರೆ ಎಂದು ಅವರ ವಕೀಲ ಮ್ಯಾಥ್ಯೂ ಜೆ. ನೆಡುಂಪಾರಾ ಅವರು ಇಲ್ಲಿ ಸುದ್ದಿಸಂಸ್ಥೆಗೆ ತಿಳಿಸಿದರು.

  ನ್ಯಾ.ಕರ್ಣನ್ ಅವರು ಪುಸ್ತಕ ರಚನೆಯ ತನ್ನ ಯೋಜನೆಯನ್ನು ತಮಗೆ ತಿಳಿಸಿದ್ದಾರೆ. ಆದರೆ ಅದಕ್ಕೆ ಸಜ್ಜಾಗಲು ಅವರಿಗೆ ಓದಿಕೊಳ್ಳಲು ಪುಸ್ತಕಗಳು ಜೈಲಿನಲ್ಲಿ ಲಭ್ಯವಿಲ್ಲದಿರಬಹುದು. ಅದನ್ನು ಅವರು ತನ್ನ ವಕೀಲರಿಂದ ತರಿಸಿಕೊಳ್ಳಬೇಕಾಗಬಹುದು ಎಂದು ಜೈಲು ಮೂಲಗಳು ತಿಳಿಸಿವೆ.
ತನ್ನ ಬಂಧನ ಮತ್ತು ಜೈಲುವಾಸಕ್ಕೆ ಕಾರಣವಾದ ಸಂಪೂರ್ಣ ಬೆಳವಣಿಗೆಗಳ ಕುರಿತು ಬರೆಯಲು ನ್ಯಾಕರ್ಣನ್ ಬಯಸಿದ್ದಾರೆ ಎಂದು ನೆಡುಂಪಾರಾ ತಿಳಿಸಿದರು.

ಜೂ.21ರಂದು ಕರ್ಣನ್ ಜೈಲು ಸೇರಿದ ತಕ್ಷಣ ಅಧೀಕ್ಷಕರ ಕಚೇರಿಯಲ್ಲಿ ಅವರನ್ನು ಭೇಟಿಯಾಗಿದ್ದ ಜೈಲು ಗ್ರಂಥಾಲಯದ ಗ್ರಂಥಪಾಲಕರು ಅವರಿಗೆ ಓದಲು ಅಗತ್ಯ ಪುಸ್ತಕಗಳ ಬಗ್ಗೆ ವಿಚಾರಿಸಿದ್ದರು. ಆದರೆ ಯಾವುದೇ ಪುಸ್ತಕದ ಹೆಸರು ಹೇಳದ ಕರ್ಣನ್ ಸುಮ್ಮನೆ ಒಂದು ‘ಥ್ಯಾಂಕ್ಯೂ’ ಹೇಳಿದ್ದರು.
 ಪೆರೋಲ್‌ನಲ್ಲಿ ಬಿಡುಗಡೆಯನ್ನು ಕೋರಿ ನ್ಯಾ.ಕರ್ಣನ್ ಅವರು ಈಗಾಗಲೇ ಪ.ಬಂಗಾಳ ರಾಜ್ಯಪಾಲರಿಗೆ ಅರ್ಜಿ ಸಲ್ಲಿಸಿದ್ದಾರೆ. ಅವರು ಅದನ್ನು ಮಂಜೂರು ಮಾಡುತ್ತಾರೆ ಎಂಬ ಆಶಯವಿದೆ. ಕರ್ಣನ್‌ಗೆ ಪೆರೋಲ್ ದೊರೆತರೆ ಮನೆಗೆ ತಲುಪಿದ ತಕ್ಷಣ ಪುಸ್ತಕ ರಚನೆಯನ್ನು ಅವರು ಆರಂಭಿಸಲಿದ್ದಾರೆ ಎಂದು ನೆಡುಂಪಾರಾ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News