×
Ad

ಗಿಡ ನೆಟ್ಟರೆ ದೇವರ ಮೂರ್ತಿ ಪ್ರತಿಷ್ಠಾಪಿಸಿದ ಪುಣ್ಯ: ಪೇಜಾವರ ಶ್ರೀ

Update: 2017-06-27 18:53 IST

ಉಡುಪಿ, ಜೂ.27: ಗಿಡ ನೆಡುವುದರಿಂದ ದೇವಸ್ಥಾನದಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಿದಷ್ಟೆ ಪುಣ್ಯ ಸಿಗುತ್ತದೆ. ಆದುದರಿಂದ ಹೆಚ್ಚು ಹೆಚ್ಚು ಪುಣ್ಯ ಗಳಿಸಲು ಗಿಡಗಳನ್ನು ನೆಡುವ ಕೆಲಸ ಮಾಡಬೇಕು ಎಂದು ಪರ್ಯಾಯ ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾದ ಕರ್ನಾಟಕ ರಾಜ್ಯಾದ್ಯಂತ ಒಂದು ಕೋಟಿ ಗಿಡ ನೆಡುವ ಬೃಹತ್ ಅಭಿಯಾನವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಮರ ಮತ್ತು ಗೋವು ಎಲ್ಲ ರೀತಿಯಲ್ಲಿಯೂ ಮಾನವ ಉಪಯೋಗಕ್ಕೆ ಬರುತ್ತದೆ. ಮರದ ಪ್ರತಿಯೊಂದು ಅಂಗಗಳನ್ನು ಮತ್ತು ಗೋವುಗಳ ಪ್ರತಿ ಯೊಂದು ಅಂಶಗಳನ್ನು ಕೂಡ ಉಪಯೋಗಿಸಬಹುದು. ಇಂದು ಮರಗಳ ನಾಶದಿಂದ ಎಲ್ಲ ರೀತಿಯ ಸಂಕಟಗಳನ್ನು ಎದುರಿಸುತ್ತಿದ್ದೇವೆ. ಅವುಗಳ ಬಗ್ಗೆ ಯಾರು ಗಮನ ಕೊಡುತ್ತಿಲ್ಲ. ಅತ್ಯಂತ ಉಪಯುಕ್ತ ಸ್ಥಾವರ ಮರ, ಅತಿ ಮುಖ್ಯ ಜಂಗಮ ಗೋವು ಎಂದು ಅವರು ತಿಳಿಸಿದರು.

ಅದಾನಿ ಗ್ರೂಪ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಕಿಶೋರ ಆಳ್ವ ಮಾತ ನಾಡಿ, ಯುಪಿಸಿಎಲ್ ಸ್ಥಾಪನೆ ಸಂದರ್ಭದಲ್ಲಿ ಸಾಕಷ್ಟು ಮರಗಳನ್ನು ತೆಗೆಯ ಬೇಕಾಗಿತ್ತು. ಹಲವು ನಾಗಬನಗಳು ನಾಶವಾಗಿವೆ. ಆದುದರಿಂದ ನಮಗೆ 10 ಎಕರೆ ಭೂಮಿ ನೀಡಿದರೆ ಅಲ್ಲಿ ಗಿಡಗಳನ್ನು ನೆಟ್ಟು ಐದು ವರ್ಷಗಳ ಕಾಲ ನಾವೇ ನಿರ್ವಹಣೆ ಮಾಡುತ್ತೇವೆ. ಇದಕ್ಕೆ 50 ಲಕ್ಷ ರೂ. ದೇಣಿಗೆ ನೀಡಲಾಗುವುದು ಎಂದರು.

ಪೇಜಾವರ ಕಿರಿಯ ಯತಿ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿದರು. ಆರ್‌ಎಸ್‌ಎಸ್ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಪರ್ಕ ಪ್ರಮುಖ್ ಪಿ.ಎಸ್.ಪ್ರಕಾಶ್ ಶುಭಾಶಂಸನೆಗೈದರು. ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ಮುಖ್ಯ ಅತಿಥಿಯಾಗಿದ್ದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಜಗ ದೀಶ್ ಅಲ್ಸೆ, ಉಡುಪಿ ಮಹಿಳಾ ಸರಕಾರಿ ಕಾಲೇಜಿನ ಎನ್‌ಎಸ್‌ಎಸ್ ಯೋಜನಾಧಿಕಾರಿ ಪ್ರಕಾಶ್ ಕ್ರಮಧಾರಿ, ವಿಎಚ್‌ಪಿ ಪ್ರಾಂತ ಕಾರ್ಯಾಧ್ಯಕ್ಷ ಎಂ.ಬಿ.ಪುರಾಣಿಕ್, ಅಭಿಯಾನದ ಜಿಲ್ಲಾ ಸಂಯೋಜಕ ಟಿ.ಶಂಭು ಶೆಟ್ಟಿ ಉಪಸ್ಥಿತರಿದ್ದರು. ತಾಲೂಕು ಸಂಯೋಜಕ ಬೈಕಾಡಿ ಸುಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ತಾರಾ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಾರ್ವಜನಿಕರಿಗೆ 700 ವಿವಿಧ ಜಾತಿಯ ಗಿಡಗಳನ್ನು ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News