ಗಂಗೊಳ್ಳಿ: ಕಡಲು ಕೊರೆತ ಪ್ರದೇಶಕ್ಕೆ ಸಿಪಿಎಂ ಭೇಟಿ

Update: 2017-06-27 13:26 GMT

ಕುಂದಾಪುರ, ಜೂ.27: ಗಂಗೊಳ್ಳಿ ಗ್ರಾಮದ ಸಾಂತನ ಕೇರಿಯ ಬ್ಯಾಲಿ ಕೊಡೇರಿ ಮನೆಯ ಬಳಿ ತೀವ್ರವಾಗಿ ಕಂಡು ಬಂದಿರುವ ಕಡಲು ಕೊರೆತ ಪ್ರದೇಶಕ್ಕೆ ಸಿಪಿಎಂ ಪಕ್ಷದ ನಿಯೋಗ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಕಡಲ್ಕೊರೆತದಿಂದ ಈ ಪ್ರದೇಶದಲ್ಲಿ ಈಗಾಗಲೇ ತೆಂಗಿನ ಮರ ಸಮುದ್ರ ಪಾಲಾಗಿದ್ದು, ಹತ್ತಿರದಲ್ಲೇ ಇರುವ ದೊಡ್ಡ ಗಾತ್ರದ ಬಾದಾಮಿ ಮರವು ನಿರಂತರ ಮಳೆಯಿಂದಾಗಿ ಧರಾಶಾಹಿಯಾಗಿದೆ. ಬಹುತೇಕ ತೆಂಗಿನ ಮರಗಳು ಹಾಗೂ ಸಾಂತನಕೇರಿಯ 8 ಮನೆಗಳು ಅಪಾಯದ ಸ್ಥಿತಿಯಲ್ಲಿವೆ.
 
ಈ ಬಗ್ಗೆ ಸ್ಥಳೀಯರು ನೀಡಿದ ದೂರಿನ ಹಿನ್ನೆಲೆಯಲ್ಲಿ ಸಿಪಿಎಂ ನಿಯೋಗ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಕಳೆದ 2-3 ವರ್ಷಗಳಿಂದ ಮಳೆ ಗಾಲದಲ್ಲಿ ಈ ಕುಟುಂಬಗಳು ಆತಂಕದ ಪರಿಸ್ಥಿತಿ ಎದುರಿಸುತ್ತಿದ್ದರೂ ಸ್ಥಳೀಯ ಆಡಳಿತ ಪ್ರತಿ ಬಾರಿಯೂ ಸ್ಥಳಕ್ಕೆ ಬಂದು ಆಶ್ವಾಸನೆ ನೀಡುವುದನ್ನು ಬಿಟ್ಟು ಪರಿಹರಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಆದುದರಿಂದ ಈ ಬಗ್ಗೆ ಜಿಲ್ಲಾಡಳಿತ ಕೂಡಲೇ ಗಮನ ಹರಿಸಬೇಕು ಎಂದು ನಿಯೋಗ ಆಗ್ರಹಿಸಿದೆ.

ಗ್ರಾಪಂ ಅಭಿವೃದ್ಧಿ ಅಧಿಕಾರಿಗೆ ತಡೆಗೋಡೆ ನಿರ್ಮಿಸುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು. ಮರಗಳನ್ನು ಕಳೆದುಕೊಂಡವರಿಗೆ ಪರಿಹಾರ ಒದಗಿಸಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ನಿಯೋಗ ತೀರ್ಮಾನಿಸಿತು. ಸಮಸ್ಯೆ ಬಗೆಹಿಸದಿದ್ದರೆ ಗ್ರಾಪಂ ಎದುರು ಸ್ಥಳೀಯರೊಂದಿಗೆ ಪ್ರತಿಭಟನೆ ನಡೆಸಲಾಗುವುದು ಎಂದು ಸಿಪಿಎಂ ಎಚ್ಚರಿಕೆ ನೀಡಿದೆ.

ನಿಯೋಗದಲ್ಲಿ ಸಿಪಿಎಂ ಹಿರಿಯ ಮುಖಂಡರಾದ ಕೆ.ಶಂಕರ್, ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಕುಂದಾಪುರ ಕಾರ್ಯದರ್ಶಿ ಎಚ್.ನರಸಿಂಹ, ಕಟ್ಟಡ ಕಾರ್ಮಿಕ ಸಂಘದ ಮುಖಂಡರಾದ ಅರುಣ್ ಕುಮಾರ್ ಗಂಗೊಳ್ಳಿ, ಸುಶೀಲಾ ಗಂಗೊಳ್ಳಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News