ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಉಳಿವಿಗಾಗಿ ಹೋರಾಟ: ವಸಂತ ಆಚಾರಿ

Update: 2017-06-27 13:38 GMT

ಮಂಗಳೂರು, ಜೂ. 27: ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಮಂಗಳೂರು ನಗರ ಸಮ್ಮೇಳನವು ಸಮಿತಿಯ ಅಧ್ಯಕ್ಷ ಸಂತೋಷ್ ಶಕ್ತಿನಗರ ಅವರ ಅಧ್ಯಕ್ಷತೆಯಲ್ಲಿ ರವಿವಾರ ನಗರದ ಎನ್‌ಜಿಒ ಹಾಲ್‌ನಲ್ಲಿ ನಡೆಯಿತು. ಸಮ್ಮೇಳನವನ್ನು ಸಿಐಟಿಯು ರಾಜ್ಯ ಉಪಾಧ್ಯಕ್ಷ ಕಾಂ.ವಸಂತ ಆಚಾರಿ ಉದ್ಘಾಟಿಸಿದರು.

1986ರಿಂದಲೇ ದೇಶ ಮಟ್ಟದಲ್ಲಿ ಹೋರಾಟ ಸಂಘಟಿಸಿ 2006ರಲ್ಲಿ ಕರ್ನಾಟಕ ರಾಜ್ಯದಲ್ಲಿ ಕಲ್ಯಾಣ ಮಂಡಳಿ ರಚನೆಯಾಯಿತು. 5,600 ಕೋಟಿ ರೂ. ನಿಧಿ ಹೊಂದಿ ಬಲಾಢ್ಯತೆಯಿಂದ ಇರುವ ಕಲ್ಯಾಣ ಮಂಡಳಿಯನ್ನು ರಾಜಕಾರಣಿಗಳಿಂದ ಉಳಿಸಬೇಕಾದ ಅಗತ್ಯ ಇದೆ. ದೇಶ ಪ್ರವೇಶ, ಕಲ್ಯಾಣ ಮಂಟಪ, ಕೌಶಲ್ಯ ಭವನಗಳ ಹೆಸರಿನಲ್ಲಿ ಕಲ್ಯಾಣ ಮಂಡಳಿ ನಿಧಿಯನ್ನು ದುರ್ಬಳಕೆ ಮಾಡಲು ಹುನ್ನಾರ ನಡೆಸಲಾಗಿದೆ. ಇದರ ವಿರುದ್ಧ ಸಂಘಟಿತ ಹೋರಾಟದಿಂದ ತಾತ್ಕಾಲಿಕ ತಡೆಯೊಡ್ಡಲಾಗಿದೆ. ಇಂತಹ ಕಾರ್ಮಿಕ ವಿರೋಧಿ ಸರಕಾರದ ನೀತಿಗಳಿಂದ ಕಲ್ಯಾಣ ಮಂಡಳಿಯನ್ನು ರಕ್ಷಿಸಬೇಕಾದ ಅನಿವಾರ್ಯತೆ ಬಂದಿದೆ. ಕಟ್ಟಡ ಕಾರ್ಮಿಕರು ಒಗ್ಗಟ್ಟಿನಿಂದ ಹೋರಾಟ ಸಂಘಟಿಸುವ ಮೂಲಕ ಇದನ್ನು ಹಿಮ್ಮೆಟ್ಟಿಸಬೇಕು ಎಂದು ಹೇಳಿದರು.

ಸುನೀಲ್ ಕುಮಾರ್ ಬಜಾಲ್ ಮಾತನಾಡಿ, ದೇಶದಲ್ಲಿ ಕಾರ್ಮಿಕ ವರ್ಗ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದೆ. ದೇಶ ಕಟ್ಟುವ ಕಟ್ಟಡ ಕಾರ್ಮಿಕರು ದೇಶದಲ್ಲಿ ಅತಂತ್ರ ಸ್ಥಿತಿಯಲ್ಲಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಬದುಕಲು ಅಸಾಧ್ಯವಾದ ಸ್ಥಿತಿಯಲ್ಲಿ ಕಾರ್ಮಿಕರಿದ್ದಾರೆ ಎಂದು ಹೇಳಿದರು.

ವೇದಿಕೆಯಲ್ಲಿ ಸಿಐಟಿಯು ನಗರಾಧ್ಯಕ್ಷ ಜಯಂತಿ ಬಿ. ಶೆಟ್ಟಿ, ನಗರ ಪ್ರಧಾನ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು, ಸಿಡಬ್ಲುಎಫ್‌ಐ ನಗರಾಧ್ಯಕ್ಷ ಸಂತೋಷ್ ಶಕ್ತಿನಗರ, ಪ್ರೇಮನಾಥ ಜಲ್ಲಿಗುಡ್ಡೆ, ದಿನೇಶ್ ಶೆಟ್ಟಿ ಉಪಸ್ಥಿತರಿದ್ದರು.

ಪದಾಧಿಕಾರಿಗಳ ಆಯ್ಕೆಸಮ್ಮೇಳನದಲ್ಲಿ ಮುಂದಿನ ಅಧ್ಯಕ್ಷರಾಗಿ ಪ್ರೇಮನಾಥ ಜಲ್ಲಿಗುಡ್ಡೆ, ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ್ ಶಕ್ತಿನಗರ, ಖಜಾಂಚಿ ದಿನೇಶ್ ಶೆಟ್ಟಿ ಅವರನ್ನು ಒಳಗೊಂಡು 9 ಜನ ಪದಾಧಿಕಾರಿ ಹಾಗೂ 12 ಮಂದಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News