ಮುಂಬೈನಲ್ಲಿ ಮಳೆರಾಯನ ಅಬ್ಬರ: ಹಲವಾರು ಪ್ರದೇಶಗಳು ಜಲಾವ್ರತ

Update: 2017-06-27 13:40 GMT

ಮುಂಬೈ,ಜೂ.27: ಸೋಮವಾರ ರಾತ್ರಿಯಿಂದಲೂ ಮುಂಬೈ ಮಹಾನಗರದಲ್ಲಿ ಭಾರೀ ಮಳೆಯಾಗುತ್ತಿದೆ. ನಗರದ ಹೆಚ್ಚಿನ ಭಾಗಗಳು ಜಲಾವ್ರತಗೊಂಡಿದ್ದು, ಸಾಮಾನ್ಯ ಜನಜೀವನವು ಅಸ್ತವ್ಯಸ್ತಗೊಂಡಿದೆ.

ತಗ್ಗು ಪ್ರದೇಶಗಳಲ್ಲಿ ತುಂಬಿಕೊಂಡಿರುವ ನೀರನ್ನು ತೆಗೆಯಲು ಒಟ್ಟು 79 ಪಂಪ್‌ಗಳನ್ನು ಕಾರ್ಯಾಚರಣೆಯಲ್ಲಿ ತೊಡಗಿಸಲಾಗಿದೆ. ಬಿಎಂಸಿ ನಗರದ ವಿವಿಧೆಡೆಗಳಲ್ಲಿ ಇಂತಹ 313 ಪಂಪ್‌ಗಳನ್ನು ಸಜ್ಜಾಗಿರಿಸಿದ್ದು, ನಿರ್ದಿಷ್ಟ ಸ್ಥಳದಲ್ಲಿ ನೀರು ಜಮಾವಣೆಗೊಂಡರೆ ತೆರವುಗೊಳಿಸಲು ಇವುಗಳನ್ನು ಬಳಸಲಾಗುತ್ತದೆ.

ಲೋಕಲ್ ರೈಲುಗಳ ಸಂಚಾರಕ್ಕೆ ವ್ಯತ್ಯಯವುಂಟಾಗಿದ್ದು, 20 ನಿಮಿಷಗಳವರೆಗೆ ನಿಧಾನವಾಗಿ ಚಲಿಸುತ್ತಿವೆ. ಹಾರ್ಬರ್ ಮತ್ತು ಸೆಂಟ್ರಲ್ ಮಾರ್ಗಗಳಲ್ಲಿ ನಿತ್ಯ ಪ್ರಯಾಣಿಕರು ಸಸೂತ್ರ ರೈಲುಗಳಿಲ್ಲದೆ ಪರದಾಡುವಂತಾಗಿತ್ತು.

 ಹಲವು ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ಸಾರ್ವಜನಿಕ ಸಾರಿಗೆ ಬೆಸ್ಟ್‌ನ ಕೆಲವು ಬಸ್‌ಗಳ ಮಾರ್ಗಗಳನ್ನು ಬದಲಿಸಲಾಗಿತ್ತು. ಕಳೆದ ರಾತ್ರಿಯಿಂದ ನಗರದ ವಿವಿಧೆಡೆಗಳಲ್ಲಿ ಆರು ಮರಗಳು ಉರುಳಿಬಿದ್ದಿವೆ.

ಮುಂದಿನ 24 ಗಂಟೆಗಳಲ್ಲಿ ಮಹಾನಗರದ ಅಲ್ಲಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯು ತಿಳಿಸಿದೆ.
ಸಮುದ್ರದಲ್ಲಿ ಎತ್ತರದ ಅಲೆಗಳ ಎಚ್ಚರಿಕೆಯನ್ನು ಹೊರಡಿಸಲಾಗಿದ್ದು, ಸಮುದ್ರ ತೀರಗಳಿಂದ ದೂರವಿರುವಂತೆ ಜನರಿಗೆ ಎಚ್ಚರಿಕೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News