ಪೇಜಾವರ ಶ್ರೀ ಇಫ್ತಾರ್ ಕೂಟ ದೇಶಕ್ಕೆ ಮಾದರಿ: ಹುಸೈನ್ ದಾರಿಮಿ

Update: 2017-06-27 13:46 GMT

 ಪುತ್ತೂರು, ಜೂ. 27: ಇಫ್ತಾರ್ ಕೂಟ ನಡೆಸುವ ಮೂಲಕ ಸಮಾಜಕ್ಕೆ ಹೊಸ ಸಂದೇಶವನ್ನು ನೀಡಿದ ಉಡುಪಿಯ ಪೇಜಾವರ ಮಠದ ಸ್ವಾಮೀಜಿ ಅವರು ಹಿಂದೂ-ಮುಸ್ಲಿಂ ಸಹೋದರತೆಗೆ ಒತ್ತು ನೀಡುವ ಕೆಲಸ ಮಾಡಿದ್ದಾರೆ. ಇದರಲ್ಲಿ ಯಾವುದೇ ತಪ್ಪಿಲ್ಲ. ದೇಶಕ್ಕೆ ಮಾದರಿಯಾಗುವ ಸಂದೇಶವನ್ನು ಸ್ವಾಮೀಜಿ ನೀಡಿರುವುದನ್ನು ಮುಸ್ಲಿಂ ಸಮಾಜದ ಪರವಾಗಿ ಮುಕ್ತಕಂಠದಿಂದ ಶ್ಲಾಘಿಸುವುದಾಗಿ ಧಾರ್ಮಿಕ ವಿದ್ವಾಂಸ, ಕರ್ನಾಟಕ ಇಸ್ಲಾಮಿಕ್ ಸೆಂಟರ್‌ನ ವ್ಯವಸ್ಥಾಪಕ ಕೆ.ಆರ್. ಹುಸೈನ್ ದಾರಿಮಿ ತಿಳಿಸಿದ್ದಾರೆ.

ಪುತ್ತೂರಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸೌಹಾರ್ದತೆಗೆ ಮತ್ತೊಂದು ಆಯಾಮವನ್ನು ಪೇಜಾವರ ಸ್ವಾಮೀಜಿ ನೀಡಿದ್ದಾರೆ. ಆದರೆ ಪೇಜಾವರ ಸ್ವಾಮೀಜಿ ಅವರು ನಡೆಸಿದ ಇಪ್ತಾರ್ ಕೂಟದ ಬಗ್ಗೆ ಅನಗತ್ಯ ಚರ್ಚೆಗಳು ನಡೆಯುತ್ತಿವೆ. ಆದರೆ ಇದು ಯಾಕೆ ನಡೆಯುತ್ತದೆ ಎಂದೇ ಅರ್ಥವಾಗುತ್ತಿಲ್ಲ. ಭಾರತದ ಇತಿಹಾಸವನ್ನು ನೋಡಿದರೂ ಇಲ್ಲಿ ಎಲ್ಲಾ ಧರ್ಮಗಳ ಹಬ್ಬಗಳಲ್ಲೂ ಸಹೋದರತ್ವವನ್ನು ಮೆರೆದ ಸಾಕ್ಷಿಗಳಿವೆ. ಸೌದಿ, ಮಕ್ಕಾ ಗಳಿಂದ ಭಾರತಕ್ಕೆ ಬಂದ ಮುಸ್ಲಿಂ ಸಮಾಜಕ್ಕೆ ಇಲ್ಲಿನ ಹಿಂದೂ ಬಾಂಧವರು ತಮ್ಮ ದೇವಾಲಯಗಳ ಪಕ್ಕದಲ್ಲೇ ಧಾರ್ಮಿಕ ಚಟುವಟಿಕೆ ನಡೆಸಲು ಜಾಗ ಕೊಟ್ಟು ಸೌಹಾರ್ದತೆ ಮೆರೆದಿದ್ದಾರೆ. ಆ ಕುಟುಂಬಗಳಿಂದ ಮದುವೆಯಾಗಿ ಧಾರ್ಮಿಕ ಬಾಂಧವ್ಯವನ್ನು ಉದ್ದೀಪನಗೊಳಿಸಿದ್ದಾರೆ. ದೀಪಾವಳಿ ಹಬ್ಬವನ್ನು ಎಲ್ಲಾ ಧರ್ಮದವರು ಒಗ್ಗೂಡಿ ಆಚರಣೆ ನಡೆಸಿದ ಉದಾಹರಣೆಗಳಿವೆ. ಪೇಜಾವರ ಸ್ವಾಮೀಜಿ ಮಾಡಿದಂತಹ ಕೆಲಸಗಳೇ ಇಂದು ಭಾರತಕ್ಕೆ ಬೇಕಾಗಿದೆ ಎಂದವರು ಹೇಳಿದರು.

ಶಾಂತಿ ಸೌಹಾರ್ದತೆ ಕಾಪಾಡಲು ಪೇಜಾವರ ಸ್ವಾಮೀಜಿ ತಮ್ಮ ಕೊಡುಗೆಯನ್ನು ಇಫ್ತಾರ್ ಕೂಟ ನಡೆಸುವ ಮೂಲಕ ಸಮಾಜಕ್ಕೆ ನೀಡಿದ್ದಾರೆ. ಇಂತಹ ಚಿಂತನೆಗಳು ಸಮಾಜಕ್ಕೆ ಅಗತ್ಯ. ಕ್ರೈಸ್ತ, ಮುಸ್ಲಿಂ ಹಾಗೂ ಹಿಂದೂ ಧರ್ಮಗಳ ಜನತೆಯ ಬದುಕಿಗೆ ಹೊಸ ಅರ್ಥ ನೀಡಿದ ಸ್ವಾಮೀಜಿ ಅವರನ್ನು ನಾವೆಲ್ಲರೂ ಒಂದಾಗಿ ಶ್ಲಾಘಿಸಬೇಕಾಗಿದೆ. ಬದಲಿಗೆ ಅನಗತ್ಯವಾದ ಚರ್ಚೆಯ ಅಗತ್ಯವಿಲ್ಲ ಎಂದವರು ಹೇಳಿದರು.

ಎಲ್ಲಾ ಧರ್ಮಗಳಲ್ಲೂ ಹಬ್ಬಗಳ ಮೂಲಕ ಇಂತಹ ಸಂದೇಶ ಸಮಾಜದಲ್ಲಿ ಹರಡಬೇಕಾಗಿದೆ. ಹಿಂದೂ ಸಮಾಜದ ಸ್ವಾಮೀಜಿಗಳು, ಕ್ರೈಸ್ತ ಧರ್ಮದ ಪಾದ್ರಿಗಳು ಹಾಗೂ ಮುಸ್ಲಿಂ ಸಮಾಜದ ಉಲಮಾಗಳು ಒಂದೆಡೆ ಕುಳಿತು ಧರ್ಮಗಳ ಆಚರಣೆಯ ನಡುವೆ ಇರುವ ಕೆಡುಕುಗಳನ್ನು ನಿವಾರಿಸುವ ಕೆಲಸ ಭಾರತದಲ್ಲಿ ನಡೆಯಬೇಕಾಗಿದೆ ಎಂದಿರುವ ಅವರು ಭಾರತ ದೇಶದ ಎಲ್ಲಾ ಮಂದಿಯೂ ಸಹೋದರರಾಗಿ ಬಾಳುವ ವಾತಾವರಣ ನಿರ್ಮಾಣ ಮಾಡುವಲ್ಲಿ ಪೇಜಾವರ ಸ್ವಾಮೀಜಿ ಮಾಡಿರುವಂತಹ ಅತ್ಯುತ್ತಮ ಹಾಗೂ ಕ್ರೀಯಾತ್ಮಕ ಚಟುವಟಿಕೆಗಳನ್ನು ಎಲ್ಲರೂ ಮಾಡಬೇಕಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News