ಯುಪಿಎಸ್‌ಸಿ: ನಕಲಿ ಪ್ರಮಾಣಪತ್ರ ಸಲ್ಲಿಸಿ ರ‍್ಯಾಂಕ್ !

Update: 2017-06-27 16:26 GMT

ಹೈದರಾಬಾದ್, ಜೂ. 27: ಕೇಂದ್ರ ಲೋಕಸೇವಾ ಆಯೋಗ ನಡೆಸಿದ ಪರೀಕ್ಷೆ ಸಂದರ್ಭ ಸಲ್ಲಿಸಲಾದ ವಿಕಲಾಂಗ ಪ್ರಮಾಣಪತ್ರದ ಸಾಚಾತನವನ್ನು ದೃಡೀಕರಿಸುವಂತೆ ಈ ವರ್ಷ ಯುಪಿಎಸ್‌ಸಿ ಪರೀಕ್ಷೆಯಲ್ಲಿ 3ನೇ ರ‍್ಯಾಂಕ್ ಗಳಿಸಿದ ಗೋಪಾಲಕೃಷ್ಣ ರೋನಾಂಕಿಗೆ ಹೈದರಾಬಾದ್ ಉಚ್ಚ ನ್ಯಾಯಾಲಯ ನೋಟಿಸು ಜಾರಿ ಮಾಡಿದೆ.

ನ್ಯಾಯಾವಾದಿ ಮುರಳಿಕೃಷ್ಣ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ದಾವೆ ವಿಚಾರಣೆ ನಡೆಸಿದ ಉಚ್ಚ ನ್ಯಾಯಾಲಯ ಈ ನಿರ್ದೇಶ ನೀಡಿದೆ. ಪ್ರಮಾಣ ಪತ್ರದ ಬಗ್ಗೆ ವರದಿ ನೀಡುವಂತೆ ಆದೇಶಿಸಿ ಆಂಧ್ರಪ್ರದೇಶ ಸರಕಾರ ಹಾಗೂ ಯುಪಿಎಸ್‌ಸಿಗೂ ನ್ಯಾಯಮೂರ್ತಿ ರಮೇಶ್ ರಂಗನಾಥನ್ ನೇತೃತ್ವದ ವಿಬಾಗೀಯ ನ್ಯಾಯಪೀಠ ನೋಟೀಸು ಜಾರಿ ಮಾಡಿದೆ.

 ರೋನಾಂಕಿ ಒಬಿಸಿ ವರ್ಗಕ್ಕೆ ಸೇರಿದವರು. ಕಳೆದ ವರ್ಷ ಯುಪಿಎಸ್‌ಸಿ ಉದ್ಯೋಗಕ್ಕೆ ಅರ್ಜಿ ಹಾಕುವ ಸಂದರ್ಭ ಶೇ. 45 ಅಂಗವಿಕಲತೆ ಇರುವುದಾಗಿ ನಕಲಿ ಪ್ರಮಾಣಪತ್ರ ಸಲ್ಲಿಸಿದ್ದರು ಎಂದು ಮುರಳೀಕೃಷ್ಣ ಹೇಳಿದ್ದಾರೆ. ಅಂಗವಿಕಲರಲ್ಲಿ ಕಟ್‌ಆಫ್ ಮಾಕ್ಸ್ 75.34. ರೋನಾಂಕಿ ಅಂಗವಿಕಲ ಪ್ರಮಾಣ ಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಅವರು ಮುಖ್ಯ ಪರೀಕ್ಷೆಗೆ ಹಾಜರಾಗಲು ಅರ್ಹರಾಗಿದ್ದರು ಎಂದು ಮುರಳೀಕೃಷ್ಣ ದಾವೆಯಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News