ಕಾರ್ಕಳದ ಜೆಸಿಂತಾರನ್ನು ಕೂಡಲೇ ಭಾರತಕ್ಕೆ ಕಳುಹಿಸಲು ಸುಶ್ಮಾ ಸ್ವರಾಜ್ ಆದೇಶ

Update: 2017-06-27 16:39 GMT

ಉಡುಪಿ, ಜೂ.27: ಅನಧಿಕೃತ ಏಜೆಂಟರನ್ನು ನಂಬಿ ಸೌದಿ ಅರೇಬಿಯಾಕ್ಕೆ ತೆರಳಿ, ಕಳೆದೊಂದು ವರ್ಷದಿಂದ ನರಕಯಾತನೆ ಅನುಭವಿಸುತ್ತಿರುವ ಕಾರ್ಕಳದ ಜೆಸಿಂತಾರನ್ನು ಕೂಡಲೇ ಭಾರತಕ್ಕೆ ಕಳುಹಿಸಬೇಕೆಂದು ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್ ಆದೇಶಿಸಿದ್ದಾರೆ ಎಂದು ಆಕೆಯ ಬಿಡುಗಡೆ ಮತ್ತು ಭಾರತಕ್ಕೆ ಮರಳಿ ಕರೆತರುವ ಬಗ್ಗೆ ಹೋರಾಡುತ್ತಿರುವ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ ಶ್ಯಾನುಭಾಗ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ರಿಯಾದ್‌ನ ಭಾರತೀಯ ದೂತವಾಸದ ಅಧಿಕಾರಿ ಜಾವೇದ್ ‘ಜೆಸಿಂತಾಳ ಬಿಡುಗಡೆಗೆ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು’ ಎಂದು ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನಕ್ಕೆ ಭರವಸೆ ನೀಡಿದ್ದಾರೆ ಎಂದವರು ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ: ಉಡುಪಿ ಜಿಲ್ಲೆಯ ಕಾರ್ಕಳದ ಜೆಸಿಂತಾರ ಗಂಡ ಕಳೆದ ವರ್ಷ ತೀರಿಕೊಂಡಾಗ ತನ್ನ ಮೂರು ಮಕ್ಕಳ ಪಾಲನೆ ಹಾಗೂ ಅವರ ವಿದ್ಯಾಭ್ಯಾಸಕ್ಕ್ಕಾಗಿ ಆಕೆ ಉದ್ಯೋಗದ ಹುಡುಕಾಟದಲ್ಲಿದ್ದಳು. ಕತಾರ್‌ನಲ್ಲಿ ಭಾರತೀಯ ಕುಟುಂಬವೊಂದಕ್ಕೆ ಮಕ್ಕಳ ಪಾಲನೆಗಾಗಿ ಮಹಿಳೆಯೋರ್ವಳ ಅಗತ್ಯವಿದೆ ಎಂದು ತಿಳಿಸಿದ ಮಂಗಳೂರಿನ ಏಜೆಂಟ್ ಜೇಮ್ಸ್ ಎನ್ನುವವ ತಿಂಗಳಿಗೆ 25,000 ರೂ. ಸಂಬಳದ ಕೆಲಸ ಕೊಡುವುದಾಗಿ ನಂಬಿಸಿದ.
ಯಾವುದೇ ಖರ್ಚುಗಳನ್ನು ತೆಗೆದುಕೊಳ್ಳದೇ ಪ್ರಯಾಣಕ್ಕೆ ಬೇಕಾಗಿರುವ ಪಾಸ್‌ಪೋರ್ಟ್, ವೀಸಾಗಳನ್ನು ಆತನೇ ಏರ್ಪಾಡು ಮಾಡಿದುದರಿಂದ ಜೆಸಿಂತಾಗೆ ಆತನ ಮೇಲೆ ಅತೀವ ನಂಬಿಕೆಯುಂಟಾಯಿತು. ಮುಂಬೈಗೆ ತೆರಳಿದ ಜೆಸಿಂತಾ ಕಳೆದ ವರ್ಷದ ಜೂ.19ರಂದು ಮಧ್ಯಪ್ರಾಚ್ಯದ ವಿಮಾನ ವನ್ನೇರಿದಳು. ಮರುದಿನ ಯಾವುದೋ ಒಂದು ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ತಾನು ಬಂದಿದ್ದು ಕತಾರ್ ದೇಶಕ್ಕಲ್ಲ, ಸೌದಿ ಅರೇಬಿಯಾಕ್ಕೆ ಎಂದು ತಿಳಿದಾಗ ಆಕೆಗೆ ಆಕಾಶವೇ ಕಳಚಿಬಿದ್ದಂತಾಗಿತ್ತು.

ಅಲ್ಲಿನ ಯಂಬು ಎಂಬ ಊರಿನ ಉದ್ಯೋಗದಾತನ ಬೃಹತ್ ಬಂಗ್ಲೆಯಲ್ಲಿ ದಿನದ 16 ಗಂಟೆಗಳ ಕಾಲ ದುಡಿಯುವ ಅನಿವಾರ್ಯತೆ. ಊರು, ಭಾಷೆ ಯಾವುದೂ ಜೆಸಿಂತಾರಿಗೆ ಎದುರಾಯಿತು. ಈ ನಡುವೆ ಆಕೆಯ ಆರೋಗ್ಯ ವಿಷಮಿಸಿ ಊರಿಗೆ ಕಳುಹಿಸುವಂತೆ ಮಾಡಿದ ಮನವಿ ವ್ಯರ್ಥವಾಯಿತು. ಆಕೆಯ ದೈಹಿಕ ಹಿಂಸೆ ಆರಂಭಗೊಂಡಿತು.

ಕಳೆದ ಡಿಸೆಂಬರ್‌ನಲ್ಲಿ ಅದೇ ಊರಿನಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಕಾರು ಚಾಲಕರೊರ್ವರ ಮೂಲಕ ಜೆಸಿಂತಾ ಕಾರ್ಕಳದಲ್ಲಿರುವ ತನ್ನ ಮಕ್ಕಳನ್ನು ಸಂಪರ್ಕಿಸಿ ತಾನು ಮೋಸ ಹೋಗಿರುವ ಕುರಿತು ಮಾಹಿತಿ ನೀಡಿದರು. ಅವರು ಗಣ್ಯರೊಬ್ಬರ ನೆರವಿನಿಂದ ಭಾರತ ದೂತಾವಾಸವನ್ನು ಸಂಪರ್ಕಿಸಿದರೂ ತಾಯಿಯ ಸಂಪರ್ಕ ಸಾಧ್ಯವಾಗಲೇ ಇಲ್ಲ. ಬಳಿಕ ಅವರು ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನವನ್ನು ಸಂಪರ್ಕಿಸಿ ತಾಯಿಯನ್ನು ರಕ್ಷಿಸುವಂತೆ ಮನವಿ ಮಾಡಿದರು.

ಪ್ರತಿಷ್ಠಾನದ ಸತತ ಪ್ರಯತ್ನದಿಂದ ಹಾಗೂ ಕೊಲ್ಲಿ ರಾಷ್ಟ್ರದಲ್ಲಿರುವ ಕನ್ನಡಿಗರ ನೆರವಿನಿಂದ ಜೆಸಿಂತಾ ಬಿಡುಗಡೆಗೆ ಪ್ರಯತ್ನಿಸಿ ಸಾಧ್ಯವಾಗದಿದ್ದಾಗ ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್‌ರನ್ನು ಸಂಪರ್ಕಿಸಿ ಅವರ ನೆರವು ಪಡೆಯಲಾಯಿತು. ಇದೀಗ ಸುಶ್ಮಾ, ಜೆಸಿಂತಾ ಬಿಡುಗಡೆ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಡಾ.ಶ್ಯಾನುಭಾಗ್ ತಿಳಿಸಿದ್ದಾರೆ. ಪ್ರತಿಷ್ಠಾನದ ಸತತ ಪ್ರಯತ್ನದಿಂದ ಹಾಗೂ ಕೊಲ್ಲಿ ರಾಷ್ಟ್ರದಲ್ಲಿರುವ ಕನ್ನಡಿಗರ ನೆರವಿನಿಂದ ಜೆಸಿಂತಾ ಬಿಡುಗಡೆಗೆ ಪ್ರಯತ್ನಿಸಿ ಸಾಧ್ಯವಾಗದಿದ್ದಾಗ ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್‌ರನ್ನು ಸಂಪರ್ಕಿಸಿ ಅವರ ನೆರವು ಪಡೆಯಲಾಯಿತು. ಇದೀಗ ಸುಶ್ಮಾ,ಜೆಸಿಂತಾ ಬಿಡುಗಡೆ ಕ್ರಮಗಳನ್ನುಕೈಗೊಂಡಿದ್ದಾರೆ ಎಂದು ಡಾ.ಶ್ಯಾನುಭಾಗ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News