ಕರ್ತವ್ಯಕ್ಕೆ ತಡೆಯೊಡ್ಡಿದ ಆರೋಪ: ಓರ್ವ ಸೆರೆ

Update: 2017-06-27 16:22 GMT

ಮಂಗಳೂರು, ಜೂ. 27: ಅಶ್ರಫ್ ಕೊಲೆ ನಡೆದ ಬಳಿಕ ಅವರ ಮೃತದೇಹವನ್ನು ದಫನ್ನಕ್ಕಾಗಿ ಕಣ್ಣೂರು ಮಸೀದಿಗೆ ಸಾಗಿಸುತ್ತಿದ್ದ ಸಂದರ್ಭದಲ್ಲಿ ಪೊಲೀಸ್ ಕರ್ತವ್ಯಕ್ಕೆ ತಡೆಯೊಡ್ಡಿದ ಹಾಗೂ ಪೊಲೀಸ್ ವಾಹನವನ್ನು ಜಖಂಗೊಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಗ್ರಾಮಾಂತರ ಠಾಣಾ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಬಂಧಿತನನ್ನು ಅಡ್ಯಾರ್‌ನ ನಿವಾಸಿ ಸರ್ಫರಾಝ್ (28) ಎಂದು ಗುರುತಿಸಲಾಗಿದೆ.

ಕಳೆದ ವಾರ ಬೆಂಜನಪದವು ಎಂಬಲ್ಲಿ ದುಷ್ಕರ್ಮಿಗಳು ಅಶ್ರಫ್ ಎಂಬವರನ್ನು ಕೊಲೆ ಮಾಡಿದ್ದರು. ಈ ಸಂದರ್ಭದಲ್ಲಿ ಮರಣೋತ್ತರ ಪರೀಕ್ಷೆಗಾಗಿ ಅವರ ಮೃತದೇಹವನ್ನು ನಗರದ ಖಾಸಗಿ ಆಸ್ಪತ್ರೆಗೆ ತರಲಾಗಿತ್ತು. ಬಳಿಕ ದಫನಕ್ಕಾಗಿ ಕಣ್ಣೂರಿನ ಮಸೀದಿಗೆ ಕೊಂಡೊಯುತ್ತಿದ್ದಾಗ ಮಸೀದಿ ಬಳಿಯಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಾಗೂ ವಾಹನವನ್ನು ಜಖಂಗೊಳಿಸಿದ್ದ ಬಗ್ಗೆ ಪ್ರಕರಣ ದಾಖಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿ ಸರ್ಫರಾಝ್‌ನನ್ನು ಮಂಗಳವಾರ ಬೆಳಗ್ಗೆ ಪೊಲೀಸರು ಅಡ್ಯಾರ್‌ಕಟ್ಟೆಯಿಂದ ವಶಕ್ಕೆ ಪಡೆದಿದ್ದಾರೆ. ಸರ್ಫರಾಝ್‌ನನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News