×
Ad

ಈದ್ ಆಚರಣೆ ಖಾಝಿ ತೀರ್ಮಾನವೇ ಅಂತಿಮ: ಸೈಯದ್ ಮದನಿ ಸುನ್ನಿ ಸೆಂಟ್ರಲ್ ಕಮಿಟಿ

Update: 2017-06-28 15:35 IST

ಮಂಗಳೂರು, ಜೂ.28: ಈದ್ ಆಚರಣೆಗೆ ಸಂಬಂಧಿಸಿದಂತೆ ಆಯಾ ಮೊಹಲ್ಲಾಗಳ ಖಾಝಿಗಳು ನೀಡುವ ತೀರ್ಮಾನ ಅಂತಿಮವಾಗಿರುತ್ತದೆ.ಉಳ್ಳಾಲದಲ್ಲೂ ಖಾಝಿ ಕೂರತ್ ತಂಙಳ್ ಸೋಮವಾರ ಈದ್ ಆಚರಿಸಲು ಸೂಚಿಸಿರುವುದು ಸರಿಯಾದ ತೀರ್ಮಾನ. ಆ ತೀರ್ಮಾನದಂತೆ ಆಯಾ ಮೊಹಲ್ಲಾದವರು ಈದ್ ಆಚರಣೆ ಮಾಡಿದ್ದರೆ ಸಮಸ್ಯೆಯಾಗುತ್ತಿರಲಿಲ್ಲ ಎಂದು ಸೈಯದ್ ಮದನಿ ಸುನ್ನಿ ಸೆಂಟ್ರಲ್ ಕಮಿಟಿಯ ನಿರ್ದೇಶಕ ಶಿಹಾಬುದ್ದೀನ್ ಸಖಾಫಿ ಹೇಳಿದ್ದಾರೆ.

  ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಳ್ಳಾಲದಲ್ಲಿ ಈದ್ ಆಚರಣೆ ಸಂಬಂಧಿಸಿ ಉಂಟಾಗಿದ್ದ ಗೊಂದಲದ ಕುರಿತಂತೆ ವಿವರಣೆ ನೀಡಿದರು. ಉಳ್ಳಾಲ ದರ್ಗಾದ ಆಡಳಿತ ಸಮಿತಿಯು ಖಾಝಿ ತೀರ್ಮಾನದಂತೆ ನಡೆದು ಕೊಂಡಿದ್ದರೆ ಈದ್ ವಿಚಾರದಲ್ಲಿ ಗೊಂದಲ ಉಂಟಾಗುತ್ತಿರಲಿಲ್ಲ. ಉಳ್ಳಾಲದಲ್ಲಿ ಖಾಝಿ ಅಧಿಕಾರದಲ್ಲಿರುವಾಗ ಸಹಾಯಕ ಖಾಝಿ ಈದ್ ಬಗ್ಗೆ ತೀರ್ಮಾನ ಕೈಗೊಳ್ಳುವ ಅಧಿಕಾರವಿಲ್ಲ. ಖಾಝಿ ಕೂರತ್ ತಂಙಳ್ ಒಂದು ವರ್ಷದಿಂದ ದರ್ಗಾಕ್ಕೆ ಬಂದಿಲ್ಲಾ ಎಂಬುದು ಸುಳ್ಳು.ಅಕ್ಟೋಬರ್ 21, 2016ರಂದು ಉಳ್ಳಾಲ ಕೇಂದ್ರ ಮಸೀದಿಗೆ ಆಗಮಿಸಿದ್ದರು. ಜೂನ್9, 2017ರಂದು ಉಳ್ಳಾಲ ವ್ಯಾಪ್ತಿಯ ದಾರಂದಬಾಗಿಲಿಗೆ ಮತ್ತು ಜೂನ್ 21ರಂದು ದರ್ಗಾ ಅಧೀನದ ಅಲೇಕಳ ಅಲ್ ಅಮೀನ್ ಮಸೀದಿಯಲ್ಲಿ ರಮಝಾನ್ ವಿಶೇಷ ಪ್ರಾರ್ಥನೆ ನೆರವೇರಿಸಿದ್ದರು ಎಂದು ಶಿಹಾಬುದ್ದೀನ್ ಸಖಾಫಿ ತಿಳಿಸಿದ್ದಾರೆ.

ಈದುಲ್ ಪಿತ್ರ್ ಆಚರಣೆಯ ಬಗ್ಗೆ ಉಳ್ಳಾಲ ಜನತೆಯಲ್ಲಿ ಯಾವುದೇ ಗೊಂದಲವಿಲ್ಲ.ರಾಜ್ಯದ ವಿವಿಧ ಕಡೆಗಳಲ್ಲಿ ಆದಿತ್ಯವಾರ ,ಸೋಮವಾರಗಳಲ್ಲಿ ಬೇರೆ ಬೇರೆ ದಿನಗಳಲ್ಲಿ ಈದ್ ಆಚರಿಸಿದ್ದಾರೆ. ಭಟ್ಕಳದಲ್ಲಿ ಆದಿತ್ಯವಾರ ಈದ್ ಆಚರಿಸಿದ್ದರೆ, ಪಕ್ಕದ ಶಿರೂರಿನಲ್ಲಿ ಮರುದಿನ ಸೋಮವಾರ ಈದ್ ಆಚರಿಸಿದ್ದಾರೆ. ಅದು ಸ್ಥಳೀಯ ಖಾಝಿಗಳ ತೀರ್ಮಾನದಂತೆ ನಡೆದಿದೆ. ಉಳ್ಳಾಲದ ದರ್ಗಾ ಸಮಿತಿಯ ಕೆಲವು ಪದಾಧಿಕಾರಿಗಳು ಕೃತಕ ವಿವಾದ ಸೃಷ್ಟಿಸಿದ್ದಾರೆ. ಇಸ್ಲಾಂ ಶರೀಅತ್ ಪ್ರಕಾರ ಈದುಲ್ ಪಿತ್ರ್ ಆಚರಣೆಗೆ ಸಂಬಂಧಿಸಿದಂತೆ ಚಂದ್ರ ದರ್ಶನವಾದರೆ ತೀರ್ಮಾನಿಸಬೇಕಾದ್ದು ಆಯಾ ಮೊಹಲ್ಲಾದ ಖಾಝಿಗಳು ಎಂದು ಅವರು ಹೇಳಿದರು.

ಈದ್ ಕುರಿತಂತೆ ಉಡುಪಿ, ಬೇಕಲ ಉಸ್ತಾದ್ ಹಾಗೂ ಮಂಗಳೂರು ಖಾಝಿಗಳ ತೀರ್ಮಾನ ಅವರನ್ನು ಖಾಝಿಯಾಗಿ ನೇಮಿಸಲ್ಪಟ್ಟ ಮೊಹಲ್ಲಾಗಳಿಗೆ ಮಾತ್ರ ಸೀಮಿತವಾಗುವುದು. ಇತರ ಖಾಝಿಗಳ ತೀರ್ಮಾನ ಕೂರತ್ ತಂಙಳ್ ಖಾಝಿಯಾದ ಮೊಹಲ್ಲಾಗಳಿಗೆ ಅನ್ವಯವಾಗುವುದಿಲ್ಲ. ಈದ್ ಆಚರಣೆ ಯಾವುದೇ ಸಂಘಟನೆಯ ಆದೇಶದಂತೆ ನಡೆಸುವುದು ರೂಢಿಯಲ್ಲ. ವಿವಿಧ ಮೊಹಲ್ಲಾಗಳಲ್ಲಿ ಪ್ರತ್ಯೇಕವಾಗಿ ಈದ್ ಆಚರಿಸುವುದು ತಪ್ಪಲ್ಲ. ಅದನ್ನು ಗುಂಪುಗಾರಿಕೆ ಎನ್ನುವುದು ಸರಿಯಲ್ಲ. ದ.ಕ ಜಿಲ್ಲೆಯ ಉಳ್ಳಾಲ,ಬೆಳ್ತಂಗಡಿ ತಾಲೂಕಿನ 63 ಮೊಹಲ್ಲಾಗಳಲ್ಲಿ ಸುಳ್ಯ ತಾಲೂಕಿನ 11ಮೊಹಲ್ಲಾಗಳಲ್ಲಿ ಮತ್ತು ಮುಡಿಪು ಸಂಯುಕ್ತ ಜಮಾತ್‌ಗೊಳಪಟ್ಟ ಕೆಲವು ಮೊಹಲ್ಲಾಗಳು ಸೇರಿ ಕೂರತ್ ತಂಙಳ್‌ರವರು ಸುಮಾರು 183ಕ್ಕೂ ಅಧಿಕ ಮೊಹಲ್ಲಾಗಳ ಖಾಝಿಗಳಾಗಿದ್ದಾರೆ ಎಂದು ಅವರು ತಿಳಿಸಿದರು.

ತಲೆ ತಲಾಂತರದಿಂದ ಉಳ್ಳಾಲ ಕೇಂದ್ರ ಮಸೀದಿಯಲ್ಲಿ ಈದ್ ಆಚರಿಸಲಾಗುತ್ತದೆ. ಉಳ್ಳಾಲ ಖಾಝಿಗಳು ಸೂಚಿಸುವ ದಿನದಂದು ಈದ್ ಆಚರಿಸುವುದು ಈ ಹಿಂದಿನ ಸಂಪ್ರದಾಯ. ಈ ಬಾರಿಯೂ ಉಳ್ಳಾಲ ಖಾಝಿ ಸಯ್ಯದ್ ಪಝಲ್ ಕೊಯಮ್ಮ ತಂಙಳ್ ಕೂರತ್‌ರವರ ನಿರ್ದೇಶನದಂತೆ ಆದಿತ್ಯವಾರ ಉಪವಾಸ ಆಚರಿಸಿ, ಸೋಮವಾರ ಈದ್ ಆಚರಿಸಲು ತೀರ್ಮಾನಿಸಲಾಗಿತ್ತು. ಈ ಆದೇಶವನ್ನು ಪಾಲಿಸಿ ಈದ್ ಆಚರಿಸಿದ್ದರೆ ಗೊಂದಲ ಇರುತ್ತಿರಲಿಲ್ಲ ಎಂದು ಸಖಾಫಿ ಹೇಳೀದರು.

ಆದರೆ ಖಾಝಿಯವರ ಮಾತನ್ನು ಉಲ್ಲಂಘಿಸಿ ಉಳ್ಳಾಲ ದರ್ಗಾದ ಅಧ್ಯಕ್ಷರು ಆದಿತ್ಯವಾರ ಈದ್ ಎಂದು ಶನಿವಾರ ರಾತ್ರಿ ಉಳ್ಳಾಲ ಕೇಂದ್ರ ಮಸೀದಿಯಲ್ಲಿ ತಕ್‌ಬೀರ್ ಮೂಲಕ ಘೋಷಣೆ ಮಾಡಿದ್ದು ನಿಯಮ ಬಾಹಿರವಾಗಿದೆ. ಇದರಿಂದ ಗೊಂದಲ ಸೃಷ್ಟಿಯಾದ ಬಳಿಕ ಖಾಝಿ ಕೂರತ್ ತಂಙಳ್ ದರ್ಗಾ ಸಮಿತಿಯ ಅಧ್ಯಕ್ಷರನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದಾರೆ. ಬಳಿಕ ಅಧ್ಯಕ್ಷರು ಖಾಝಿಯವರ ಹೇಳಿಕೆಯಂತೆ ಸೋಮವಾರವೇ ಈದ್ ಆಚರಿಸಲು ದರ್ಗಾದ ಮಸೀದಿಯಲ್ಲಿ ರಾತ್ರಿ 1 ಗಂಟೆಗೆ ಧ್ವನಿವರ್ಧಕದ ಮೂಲಕ ಘೋಷಣೆ ಮಾಡಿದ್ದಾರೆ. ಖತೀಬ್ ಸಮೀಮ್ ಮುಸ್ಲಿಯಾರ್ ನೇತೃತ್ವದಲ್ಲಿ ತರಾವೀಹ್ ನಮಾಝ್ ಕೂಡಾ ಮಾಡಿದ್ದಾರೆ.

ಆದರೆ ಮರುದಿನ ಬೆಳಗ್ಗೆ ಆದಿತ್ಯವಾರ ಕೆಲವು ಜನರು ದರ್ಗಾ ಮಸೀದಿಯಲ್ಲಿ ಈದ್ ನಮಾಝ್ ನೆರವೇರಿಸಿದ್ದಾರೆ. ಸೋಮವಾರ ಈದ್ ನಮಾಝ್ ನಿರ್ವಹಿಸಲು ದರ್ಗಾಕ್ಕೆ ಒಳಪಟ್ಟ ಮಸೀದಿಗೆ ಬರುವಾಗ ದರ್ಗಾ ಮಸೀದಿಗೆ ಬೀಗ ಜಡಿಯಲಾಗಿತ್ತು. ದರ್ಗಾದ ಇತಿಹಾಸದಲ್ಲೇ ಈ ರೀತಿ ಮಸೀದಿಗೆ ಬೀಗ ಜಡಿದ ಘಟನೆ ನಡೆದಿಲ್ಲ. ಅಲ್ಲಿ ನೆರೆದಿದ್ದ 2000ಕ್ಕೂ ಅಧಿಕ ಜಮಾತ್ ಬಾಂಧವರ ಬೇಡಿಕೆಯಂತೆ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಮಧ್ಯಪ್ರವೇಶಿಸಿ ಮಸೀದಿಯ ಬೀಗದ ಕೀ ತೆಗೆಸಿ ನಮಾಝ್‌ಗೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಸೀದಿಗೆ ಬೀಗ ಜಡಿದ ಬಗ್ಗೆ ದರ್ಗಾ ಸಮೀಪ ಮಾತಿನ ಚಕಮಕಿ ನಡೆದಿದೆ. ಇದೇ ಸಂದರ್ಭದಲ್ಲಿ ಆಡಳಿತ ಸಮಿತಿಯ ಕೆಲವರು ದೂರಿ ನ ಪ್ರಕಾರ 17ಕ್ಕೂ ಹೆಚ್ಚು ಜನರ ಮೇಲೆ 307 ಸೆಕ್ಷನ್ ಪ್ರಕಾರ ಪೊಲೀಸರು ದೂರು ದಾಖಲು ಮಾಡಿದ್ದಾರೆ. ಈ ಪೈಕಿ ನಮಾಝಿಗೆ ಬಂದ ಅಮಾಯಕರ ಮೇಲೂ ದೂರು ದಾಖಲಾಗಿದೆ. ಪೊಲೀಸರ ಸಮ್ಮಖದಲ್ಲಿಯೇ ಮಸೀದಿಯ ಬೀಗ ತೆಗೆಸಿ ಒಳಗೆ ಪ್ರವೇಶಿಸಿರುವುದು ಹೇಗೆ ಅಕ್ರಮ ಪ್ರವೇಶವಾಗುತ್ತದೆ. ಖಾಝಿಯವರ ಆದೇಶವನ್ನು ಉಲ್ಲಂಘಿಸಿದ ಪ್ರಕರಣ ಉಳ್ಳಾಲದ ಇತಿಹಾಸದಲ್ಲಿ ಮೊದಲ ಬಾರಿಗೆ ನಡೆದಿದೆ. ಈ ನಡುವೆ ದರ್ಗಾ ಸಮಿತಿಯ ಅಧ್ಯಕ್ಷ ರಶೀದ್ ಹಾಜಿ ನೂತನ ಖಾಝಿಯನ್ನು ನೇಮಕ ಮಾಡುವ ಹೇಳಿಕೆಯನ್ನು ಪತ್ರಿಕೆಗಳಿಗೆ ನೀಡಿರುವುದು ಖೇದಕರ. ಈ ರೀತಿಯಾಗಿ ಖಾಝಿಗಳನ್ನು ಬೇಕಾದಂತೆ ನೇಮಕ ಮಾಡುವ ಅಧಿಕಾರ ಇಸ್ಲಾಮಿನ ನಿಯಮಾನುಸಾರ ಸಾಧ್ಯವಿಲ್ಲ.

ಉಳ್ಳಾಲದ ದರ್ಗಾ ಸಮಿತಿಯ ಹಾಲಿ ಆಡಳಿತ ಸಮಿತಿ ರಚನೆಯ ಬಗ್ಗೆ ವಿವಾದ ಇನ್ನೂ ವಕ್ಫ್ ಮಂಡಳಿ ಹಾಗೂ ನ್ಯಾಯಾಲಯದಲ್ಲಿದೆ. ಅಲ್ಲದೆ ಉಳ್ಳಾಲದ ಖಾಝಿಯಾಗಿ ಕೂರತ್ ತಂಙಳ್ ನೇಮಕಗೊಂಡ ಬಳಿಕ ಅವರು ಯಾರನ್ನೂ ಸಹಾಯಕ ಖಾಝಿಯಾಗಿ ನೇಮಿಸಿಲ್ಲ. ಅವರ ಗಮನಕ್ಕೆ ತಾರದೇ ಸಹಾಯಕ ಖಾಝಿಯನ್ನು ನೇಮಿಸಿರುವುದು ಸ್ವೀಕಾರಾರ್ಹವಲ್ಲ ಎಂದು ಶಿಹಾಬುದ್ಧೀನ್ ತಂಙಳ್ ತಿಳಿಸಿದ್ದಾರೆ.

ಉಳ್ಳಾಲ ದರ್ಗಾದ ಬೈಲಾ ಪ್ರಕಾರ ದರ್ಗಾ ವ್ಯಾಪ್ತಿಯ ಅಧೀನದ ಎಲ್ಲಾ ಮೊಹಲ್ಲಾಗಳಿಗೂ ಕ್ರಮ ಬದ್ಧವಾದ ಚುನಾವಣೆ ನಡೆಸಿ. ಕ್ರಮಬದ್ಧವಾದ ಆಡಳಿತ ಸಮಿತಿ ಪುನಾರಚಿಸಲು ವಕ್ಫ್ ಮಂಡಳಿ ಕ್ರಮ ಕೈಗೊಳ್ಳಬೇಕು ಎಂದು ಶಿಹಾಬುದ್ಧೀನ್ ಸಖಾಫಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸಯ್ಯದ ಮದನಿ ಸುನ್ನಿ ಸೆಂಟ್ರಲ್ ಕಮಿಟಿ ಅಧ್ಯಕ್ಷ ಜಮಾಲ್ ಮುಸ್ಲಿಯಾರ್, ಕುಬೈಲ್ ತಂಙಳ್ ಉಳ್ಳಾಲ, ಆಸಿಫ್ ಮದನಿ ನಗರ, ಯು.ಡಿ. ಬದ್ರುದ್ದೀನ್ ಉಳ್ಳಾಲ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News