ಸಚಿವ ರಮಾನಾಥ ರೈ ಕಾಂಗ್ರೆಸ್ ಪಕ್ಷದ ಡಾನಾ?
ಮಂಗಳೂರು, ಜೂ.28: ಹಿರಿಯ ಕಾಂಗ್ರೆಸ್ಸಿಗ, ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರನ್ನು ಖಾಸಗಿ ಕಾರ್ಯಕ್ರಮವೊಂದರಲ್ಲಿ ನೂರಾರು ಜನರೆದುರು ಸಚಿವ ರಮಾನಾಥ ರೈ ಅತ್ಯಂತ ತುಚ್ಛವಾಗಿ, ಅವಹೇಳನಕಾರಿಯಾಗಿ ನಿಂದಿಸಿದ್ದಾರೆ ಎಂದು ಮಾಜಿ ಕಾಂಗ್ರೆಸ್ಸಿಗ, ಸಾಮಾಜಿಕ ಮುಂದಾಳು ಹರಿಕೃಷ್ಣ ಬಂಟ್ವಾಳ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಸಚಿವ ರೈ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಹರಿಕೃಷ್ಣ ಬಂಟ್ವಾಳ್, ಫೆಬ್ರವರಿ 6ರಂದು ನಡೆದ ವಿವಾಹ ಕಾರ್ಯಕ್ರಮವೊಂದರಲ್ಲಿ ಸಚಿವ ರೈ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅರುಣ್ ಕುವೆಲ್ಲೊ ಹಾಗೂ ಯುವ ಕಾಂಗ್ರೆಸ್ ನಾಯಕ ತೇಜಸ್ವಿರಾಜ್ ಎದುರು ಜನಾರ್ದನ ಪೂಜಾರಿ ಹಾಗೂ ಕಳ್ಳಿಗೆ ತಾರನಾಥ ಶೆಟ್ಟಿ ಬಗ್ಗೆ ಅತ್ಯಂತ ಕೆಟ್ಟ ಪದಗಳನ್ನು ಪ್ರಯೋಗಿಸಿದ್ದಾರೆ ಎಂದು ದೂರಿದರು.
ರಾಜಕೀಯವಾಗಿ ಅತ್ಯಂತ ಪ್ರಾಮಾಣಿಕನಾಗಿ ಹೆಸರು ಪಡೆದಿರುವ, ಕೇಂದ್ರದ ಸಚಿವರಾಗಿದ್ದ ಮಾತ್ರವಲ್ಲದೆ, ರಮಾನಾಥ ರೈ ರಾಜಕೀಯವಾಗಿ ಬೆಳೆಯುವಲ್ಲಿ, ಗುರುತಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಪೂಜಾರಿಯವರನ್ನು ಈ ರೀತಿ ಅವಮಾನಿಸಿರುವುದು ನೋವು ತಂದಿದೆ ಎಂದು ಹರಿಕೃಷ್ಣ ಕಣ್ಣೀರಿಟ್ಟರು.
ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರಿಗೆ ಜನಾರ್ದನ ಪೂಜಾರಿ ಬಗ್ಗೆ ಚೆನ್ನಾಗಿ ತಿಳಿದಿದೆ. ಆದ್ದರಿಂದ ಈ ಪ್ರಕರಣದ ಕುರಿತಂತೆ ಪಕ್ಷದ ಯುವ ನಾಯಕರೂ ಆಗಿರುವ ಅರುಣ್ ಕುವೆಲ್ಲೋ ಅವರನ್ನು ಕರೆಸಿಕೊಂಡು ತನಿಖೆ ನಡೆಸಬೇಕು. ಕಾಂಗ್ರೆಸ್ ಜಾತ್ಯತೀತ ನೆಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ, ಈ ಮಣ್ಣಿನ ಸಂಸ್ಕೃತಿಯನ್ನು ಹೊಂದಿರುವ ಪಕ್ಷವಾದ್ದರಿಂದ ಇಂತಹ ಕೀಳು ಭಾಷೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಾತನಾಡಿದ ಸಚಿವ ರೈಯವರನ್ನು ಉಚ್ಛಾಟಿಸಿ, ಮಂತ್ರಿ ಹುದ್ದೆಯಿಂದ ಕೆಳಗಿಳಿಸಬೇಕು ಎಂದು ಆಗ್ರಹಿಸಿದರು.
ನನ್ನ 42 ವರ್ಷಗಳ ರಾಜಕೀಯ ಜೀವನದಲ್ಲಿ 34 ವರ್ಷಗಳ ಕಾಲ ಜನಾರ್ದನ ಪೂಜಾರಿ ಜತೆ ರಾಜಕೀಯವಾಗಿ ಗುರುತಿಸಿಕೊಂಡಿದ್ದೇನೆ. ಅವರು ಈವರೆಗೂ ಯಾರನ್ನೂ ಏಕವಚನದಲ್ಲಿ ನಿಂದಿಸಿದವರಲ್ಲ. ಪಕ್ಷಕ್ಕೆ ತೊಂದರೆಯಾಗುತ್ತದೆ ಎನ್ನುವ ನೆಲೆಯಲ್ಲಿ ಮುಖ್ಯಮಂತ್ರಿಯ ಕಾರ್ಯವೈಖರಿಯನ್ನು ಪ್ರಶ್ನಿಸಿ ಟೀಕಿಸಿರಬಹುದೇ ಹೊರತು ಯಾರನ್ನೂ ಉದ್ದೇಶಪೂರ್ವಕವಾಗಿ ನಿಂದಿಸಿದವರಲ್ಲ. ಇಂತಹ ಮೇರು ವ್ಯಕ್ತಿತ್ವದ ಜನಾರ್ದನ ಪೂಜಾರಿ ಜತೆ ಗುರುತಿಸಿಕೊಳ್ಳುವವರತ್ತ ರಮಾನಾಥ ರೈ ತೀಕ್ಷ್ಣ ದೃಷ್ಟಿ ಬೀರುತ್ತಾರೆ. ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ನೇರವಾಗಿ ಹೇಳುತ್ತಾರೆ. ಹಾಗಾದರೆ ಸಚಿವ ರೈ ಕಾಂಗ್ರೆಸ್ ಪಕ್ಷದ ಡಾನಾ? ಎಂದು ಹರಿಕೃಷ್ಣ ಬಂಟ್ವಾಳ ಪ್ರಶ್ನಿಸಿದರು.
1981ರಲ್ಲಿ ಪೂಜಾರಿ ಸಂಸದರಾಗಿದ್ದನಿಂದ ಸಚಿವ ರೈಯವರು ಜನಾರ್ದನ ಪೂಜಾರಿ ಜತೆ ಗುರುತಿಸಿಕೊಂಡು ಅವರ ಶಿಫಾರಸಿನ ಮೇರೆಗೆ ಶಾಸಕ ಸ್ಥಾನಕ್ಕೆ ಟಿಕೆಟ್ ಗಿಟ್ಟಿಸಿಕೊಂಡವರು. ರೈ ಆರಂಭದಲ್ಲಿ ಶಾಸಕ ಆಗಿರುವುದು ಪೂಜಾರಿಯವರ ಕೊಡುಗೆ ಎಂದವರು ಹೇಳಿದರು.
ತಾನು ಸರ್ವಧರ್ಮ ಪ್ರೇಮಿ ಎಂದು ಹೇಳುವ ಸಚಿವ ರಮಾನಾಥ ರೈ, ವಾಸ್ತವದಲ್ಲಿ ಹೃದಯದಿಂದ ಯಾರನ್ನೂ ಪ್ರೀತಿಸುವುದಿಲ್ಲ. ಸಾಮರಸ್ಯವನ್ನು ಬಯಸುವುದಿಲ್ಲ. ಒಂದು ವೇಳೆ ಎಲ್ಲರನ್ನೂ ಪ್ರೀತಿಸಿ, ಸಾಮರಸ್ಯ ಬಯಸುವವರಾಗಿದ್ದರೆ ನಾಲ್ಕು ವರ್ಷದ ಅವಧಿಯಲ್ಲಿ ಎಲ್ಲಾ ಧರ್ಮಗಳ ದರ್ಮಗುರುಗಳನ್ನು ಕರೆಸಿ ಸಾಮರಸ್ಯ ಸಭೆ ನಡೆಸುತ್ತಿದ್ದರು. ಆದರೆ ಅವರು ಧರ್ಮಗುರುಗಳ ಬಳಿ ಹೋಗುವುದು ಓಟಿಗಾಗಿ ಮಾತ್ರ ಎಂದು ಅವರು ಟೀಕಿಸಿದರು.