ಚೆನ್ನೈ-ಬೆಂಗಳೂರು-ಮೈಸೂರು ರೈಲುಮಾರ್ಗ ಕುರಿತು ಅಧ್ಯಯನ ನಡೆಸಲಿರುವ ಜರ್ಮನಿ
ಹೊಸದಿಲ್ಲಿ,ಜೂ.28: ಅತಿ ವೇಗದ ರೈಲುಗಳ ವಿಭಾಗದಲ್ಲಿ ತನ್ನ ಪರಿಣತಿಗಾಗಿ ಹೆಸರಾಗಿರುವ ಜರ್ಮನಿಯು 450 ಕಿ.ಮೀ.ಉದ್ದ ಚೆನ್ನೈ-ಬೆಂಗಳೂರು-ಮೈಸೂರು ಮಾರ್ಗದಲ್ಲಿ ಗಂಟೆಗೆ ಸುಮಾರು 300 ಕಿ.ಮೀ.ವೇಗದಲ್ಲಿ ರೈಲುಗಳ ಸಂಚಾರದ ಕಾರ್ಯಸಾಧ್ಯತೆ ಅಧ್ಯಯನವನ್ನು ಕೈಗೊಳ್ಳಲಿದೆ.
ಈ ಅಧ್ಯಯನ ನಡೆಸಲು ಡಿಬಿ ಇ ಆ್ಯಂಡ್ ಸಿ, ಇಂಟ್ರಾಪ್ಲಾನ್ ಕನ್ಸಲ್ಟ್ ಮತ್ತು ಇಂಜಿನಿಯರ್‌ಬುರೊ ವೊಸ್ಸಂಗ್ ಸೇರಿದಂತೆ ಸಲಹೆಗಾರರ ತಂಡವೊಂದನ್ನು ಜರ್ಮನಿಯು ನೇಮಕಗೊಳಿಸಿದೆ.
ಒಂದು ವರ್ಷ ಅವಧಿಯ ಅಧ್ಯಯನದ ವೆಚ್ಚವನ್ನು ಜರ್ಮನಿಯೇ ಭರಿಸಲಿದ್ದು, ತನ್ನ ವರದಿಯನ್ನು ಸರಕಾರಕ್ಕೆ ಸಲ್ಲಿಸಲಿದೆ.
ಜರ್ಮನಿಯು 2016ರಲ್ಲಿ ಈ ವಿಭಾಗದ ಪೂರ್ವ ಕಾರ್ಯಸಾಧ್ಯತೆ ಅಧ್ಯಯನವನ್ನು ಪೂರ್ಣಗೊಳಿಸಿದ್ದು, ಈಗ ಕಾರ್ಯಸಾಧ್ಯತೆ ಅಧ್ಯಯನ ನಡೆಸಲು ಉತ್ಸುಕವಾಗಿದೆ ಎಂದು ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.
ರೈಲ್ವೆ ಸಚಿವ ಸುರೇಶ ಪ್ರಭು ಅವರು 2016,ಎಪ್ರಿಲ್‌ನಲ್ಲಿ ಜರ್ಮನಿಗೆ ಭೇಟಿ ನೀಡಿದ್ದಾಗ ನಡೆಸಿದ್ದ ದ್ವಿಪಕ್ಷೀಯ ಮಾತುಕತೆಯಲ್ಲಿ ಚೆನ್ನೈ-ಬೆಂಗಳೂರು-ಮೈಸೂರು ಮಾರ್ಗದಲ್ಲಿ ಹೈಸ್ಪೀಡ್ ರೈಲುಗಳ ಸಂಚಾರದ ಬಗ್ಗೆ ಜರ್ಮನಿ ತನ್ನ ವೆಚ್ಚದಲ್ಲಿ ಅಧ್ಯಯನ ನಡೆಸುವುದು ನಿರ್ಧಾರವಾಗಿತ್ತು.