ಕೆಸರು ಹೊಂಡವಾದ ಈಶ್ವರಮಂಗಲ ಸುಳ್ಯಪದವು ರಸ್ತೆ

Update: 2017-06-28 12:41 GMT

ಪುತ್ತೂರು,ಜೂ.28: ಗಡಿ ಪ್ರದೇಶವಾದ ತಾಲೂಕಿನ ಈಶ್ವರಮಂಗಲ ಸುಳ್ಯಪದವು ಜಿಲ್ಲಾ ಪಂಚಾಯತ್ ಸಾರ್ವಜನಿಕರ ಸಂಪರ್ಕ ರಸ್ತೆ ತೀರಾ ಹದಗೆಟ್ಟಿದ್ದು, ರಸ್ತೆ ನಡುವೆ ಹಲವಾರು ಹೊಂಡ ಗುಂಡಿಗಳಾಗಿ ವಾಹನ ಸಂಚಾರಕ್ಕೆ ತೊಡಕಾಗಿ ಪರಿಣಮಿಸಿದೆ.

ಈಶ್ವರಮಂಗಲದಿಂದ ಸುಳ್ಯಪದವು ಮೂಲಕ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಅರಣ್ಯ ಪ್ರದೇಶದ ನಡುವೆ ಹಾದು ಹೋಗುವ ಈ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಸಂಚಾರಕ್ಕೆ ಅಯೋಗ್ಯವಾಗಿದೆ. ಈ ರಸ್ತೆ ಡಾಂಬರು ಕಾಣದೆ ಹಲವು ವರ್ಷಗಳೇ ಕಳೆದಿದ್ದು, ಮಳೆನೀರು ಹರಿದು ಹೋಗಲು ಚರಂಡಿ ವ್ಯವಸ್ಥೆಗಳೇ ಇಲ್ಲಿಲ್ಲ. ಹೊಂಡಗುಂಡಿಗಳಿಂದಲೇ ತುಂಬಿಕೊಂಡಿರುವ ರಸ್ತೆಯಲ್ಲಿ ಡಾಂಬರಿನ ಅವಶೇಷಗಳಷ್ಟೇ ಉಳಿದುಕೊಂಡಿದೆ. ವಾಹನ ಸಂಚಾರಕ್ಕೆ ಮಾತ್ರವಲ್ಲದೆ ಜನಸಂಚಾರಕ್ಕೂ ಕ್ಲಿಷ್ಟಕರ ಪರಿಸ್ಥಿತಿ ನಿರ್ಮಾಣವಾಗಿದೆ.

ಕರ್ನಾಟಕ ಕೇರಳ ಗಡಿ ಪ್ರದೇಶವಾದ ನೆಟ್ಟಣಿಗೆ ಮುಡ್ನೂರು ಮತ್ತು ಪಡುವನ್ನೂರು ಗ್ರಾಮ ವ್ಯಾಪ್ತಿಯಲ್ಲಿ ಈಶ್ವರಮಂಗಲ ಸುಳ್ಯಪದವು ರಸ್ತೆ ಹಾದು ಹೋಗುತ್ತಿದ್ದು, ಬ್ರಿಟೀಷರ ಕಾಲದಲ್ಲಿ ಬಸ್ ವ್ಯವಸ್ಥೆ ಇದ್ದ ತಾಲ್ಲೂಕಿನ ಕೆಲವೇ ಕೆಲವು ರಸ್ತೆಗಳಲ್ಲಿ ಇದೂ ಒಂದಾಗಿತ್ತು. ಆದರೆ ಸಂಬಂಧಪಟ್ಟ ಜನಪ್ರತಿನಿಧಿಗಳಲ್ಲಿ ಮತ್ತು ಅಧಿಕಾರಿಗಳಲ್ಲಿ ಈ ಹಳೆಯ ರಸ್ತೆಯ ಅಭಿವೃದ್ಧಿ ಚಿಂತನೆ ಇಲ್ಲದಾಗಿರುವುದೇ ಸಮಸ್ಯೆಗೆ ಕಾರಣವಾಗಿದೆ. ಗಡಿಪ್ರದೇಶದ ಅಭಿವೃದ್ಧಿಗಾಗಿ ಮಳೆನಾಡು ಪ್ರದೇಶಾಭಿವೃದ್ಧಿ ಯೋಜನೆ ಇದ್ದರೂ, ರಸ್ತೆಗಳ ಅಭಿವೃದ್ಧಿಗಾಗಿಯೇ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆ ಜಾರಿಗೊಂಡಿದ್ದರೂ, ಶಾಸಕರ ಪ್ರದೇಶಾಭಿವೃದ್ಧಿ ಅನುದಾನ ಇದ್ದರೂ ಈ ರಸ್ತೆಗೆ ತಟ್ಟಿದ ಶಾಪಕ್ಕೆ ಇನ್ನೂ ವಿಮೋಚನೆ ಸಿಗುವ ಕಾಲ ಕೂಡಿ ಬಂದಿಲ್ಲ.

ಡಾಂಬರು ಎದ್ದು ಹೋಗಿ ಸೃಷ್ಠಿಯಾಗಿರುವ ಈ ರಸ್ತೆಯ ಹೊಂಡ ಗುಂಡಿಗಳಲ್ಲಿ ಮಳೆಗಾಲದಲ್ಲಿ ಮಳೆನೀರು ನೀರು ತುಂಬಿಕೊಂಡಿದ್ದು, ರಸ್ತೆಯಲ್ಲೇ ನೀರು ಹರಿದು ಹೋಗುತ್ತಿರುವುದರಿಂದ ಇದು ರಸ್ತೆ ಎಂದು ಹೇಳಲೂ ಸಾಧ್ಯವಾಗುತ್ತಿಲ್ಲ. ವಾಹನ ಚಾಲಕರು ಸರ್ಕಸ್ ನಡೆಸುತ್ತಾ ತೆರಳಬೇಕಾಗಿದ್ದು, ಈ ರಸ್ತೆಯಲ್ಲಿ ನಡೆದುಕೊಂಡು ಹೋಗುವ ಶಾಲಾ ಮಕ್ಕಳು ನರಕಯಾಚನೆ ಅನುಭವಿಸಬೇಕಾಗಿ ಬಂದಿದೆ. ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿಯೇ ಈ ಸ್ಥಿತಿ ಬಂದಿದೆ ಎಂಬುವುದು ಈ ಭಾಗದ ಜನತೆಯ ಆರೋಪವಾಗಿದೆ.

ಈ ರಸ್ತೆಯ ಅಭಿವೃದ್ಧಿಯ ವಿಚಾರದಲ್ಲಿ ಈ ಹಿಂದಿನ ಶಾಸಕರೂ, ಈಗಿನ ಶಾಸಕರೂ, ಸಂಸದರೂ ಸೇರಿದಂತೆ ಯಾರೊಬ್ಬರೂ ಗಮನಹರಿಸಿಲ್ಲ ಎಂದು ಆರೋಪಿಸುತ್ತಿದ್ದಾರೆ. ಈ ರಸ್ತೆಯ ಅಭಿವೃದ್ಧಿಗೆ ಸಣ್ಣ ಮೊತ್ತದ ಅನುದಾನ ಸಾಕಾಗುವುದಿಲ್ಲ. ರೂ.2 ಕೋಟಿಯಷ್ಟಾದರೂ ಅನುದಾನ ಬೇಕು. ಸಣ್ಣಮೊತ್ತದ ಅನುದಾನವಿಟ್ಟು ಪ್ರಯೋಜನವಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಇದೇ ರಸ್ತೆಯನ್ನು ಸಂಪರ್ಕಿಸುವ ಕುಡ್ಕಾಡಿ ಪದಡ್ಕ ರಸ್ತೆಗೆ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಅನುದಾನ ನೀಡಲಾಗಿದೆ ಎಂದು ಶಾಸಕಿ ಶಕುಂತಳಾ ಶೆಟ್ಟಿ ಹೇಳುತ್ತಾರೆ.

ಈ ರಸ್ತೆಯಲ್ಲಿನ ಗೋಳಿತಡಿ ಎಂಬಲ್ಲಿ ಬೃಹತ್ ಗಾತ್ರದ ಹೊಂಡಗಳಾಗಿದ್ದು, ಇದೇ ಭಾಗದಲ್ಲಿ ಅಳವಡಿಸಲಾಗಿರುವ ಮೋರಿಯ ಮೇಲೆಯೇ ಮಳೆನೀರು ಹರಿದುಹೋಗುತ್ತಿದೆ. ಮಳೆಗಾಲದಲ್ಲಿ ಈ ಭಾಗದ ರಸ್ತೆಯಲ್ಲಿ ತೋಡಿನಂತೆ ನೀರು ಹರಿದು ಹೋಗುತ್ತಿದ್ದು, ಕೆಲವು ವರ್ಷಗಳ ಹಿಂದೆ ಸ್ಥಳೀಯರಾದ ವಿಶ್ವನಾಥ ಶೆಟ್ಟಿ ಎಂಬವರ ಪುತ್ರಿ ನಾಲ್ಕು ವರ್ಷ ಪ್ರಾಯದ ಬಾಲಕಿಯೊಬ್ಬಳು ಈ ಭಾಗದಲ್ಲಿ ಹರಿದುಹೋಗುವ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟ ಘಟನೆ ನಡೆದಿತ್ತು. ಪುತ್ರಿ ಮೃತಪಟ್ಟ ಹಿನ್ನಲೆಯಲ್ಲಿ ಮಾನಸಿಕವಾಗಿ ನೊಂದಿದ್ದ ಆಕೆಯ ತಾಯಿಯೂ ಆ ಬಳಿಕ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆ ಮಾಸುವ ಮುನ್ನವೇ ಇದೀಗ ಇಲ್ಲಿ ಮತ್ತೊಂದು ಅನಾಹುತ ಸಂಭವಿಸಬಹುದಾದ ಅಪಾಯ ಇಲ್ಲಿ ಎದುರಾಗಿದೆ.

ಗೋಳಿತಡಿಯಲ್ಲಿ ರಸ್ತೆಗೆ ಅಳವಡಿಸಿದ ಮೋರಿಯಲ್ಲಿ ತ್ಯಾಜ್ಯಗಳು ತುಂಬಿಕೊಂಡಿರುವ ಪರಿಣಾಮವಾಗಿ ಮಳೆಗಾಲದಲ್ಲಿ ರಸ್ತೆಯ ಈ ಭಾಗದಲ್ಲಿರುವ ಹೊಂಡಗುಂಡಿಗಳ ಮೇಲೆಯೇ ಮಳೆನೀರು ತೋಡಿನಂತೆ ಹರಿದು ಹರಿದು ಹೋಗುತ್ತಿದೆ. ಬಹಳಷ್ಟು ಮಂದಿ ಎಳೆಯ ಪ್ರಾಯದ ವಿದ್ಯಾರ್ಥಿಗಳು ನೀರು ದಾಟಿಕೊಂಡೇ ಶಾಲೆಗೆ ಹೋಗಬೇಕಾದ ಅನಿವಾರ್ಯತೆ ಇರುವುದರಿಂದ ಸಂಬಂಧಪಟ್ಟ ಅಧಿಕಾರಿಗಳು ಅಪಾಯ ಸಂಭವಿಸುವ ಮುನ್ನವೇ ಎಚ್ಚೆತ್ತುಕೊಳ್ಳಬೇಕಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News