ಮಂಜುಳಾ ಕತ್ತಿನ ಸುತ್ತ ಶಾಲು ಬಿಗಿದು ನೆಲದಲ್ಲಿ ಎಳೆದೊಯ್ದ ಪೊಲೀಸರು: ಇಂದ್ರಾಣಿ ಮುಖರ್ಜಿ ಹೇಳಿಕೆ

Update: 2017-06-28 13:29 GMT

ಮುಂಬೈ, ಜೂ.28: ಜೈಲು ಅಧಿಕಾರಿಗಳು ಮಹಿಳೆಯೋರ್ವಳು ಕತ್ತಿನ ಸುತ್ತ ಧರಿಸಿಕೊಂಡಿದ್ದ ಶಾಲನ್ನು ಹಿಡಿದು ಆಕೆಯನ್ನು ನೆಲದ ಮೇಲೆ ಎಳೆದುಕೊಂಡು ಹೋಗಿ ಆಕೆಯನ್ನು ಥಳಿಸಿರುವುದನ್ನು ತಾನು ಮತ್ತು ಸಹ ಖೈದಿಗಳು ಕಣ್ಣಾರೆ ಕಂಡಿರುವುದಾಗಿ ಇಂದ್ರಾಣಿ ಮುಖರ್ಜಿ ಸ್ಥಳೀಯ ನ್ಯಾಯಾಲಯವೊಂದರಲ್ಲಿ ಹೇಳಿಕೆ ನೀಡಿದ್ದಾರೆ.

ಸಂತ್ರಸ್ತ ಮಹಿಳೆ ಮಂಜುಳಾ ಶೆಟ್ಯೆ ಎಂಬಾಕೆಯ ಗುಪ್ತಾಂಗದಲ್ಲಿ ಲಾಠಿಯನ್ನು ತೂರಿಸಿ ದೌರ್ಜನ್ಯ ಎಸಗಲಾಗಿದೆ ಎನ್ನಲಾಗಿದೆ. ಕೆಲ ಗಂಟೆಗಳ ಬಳಿಕ ಮಂಜುಳಾ ಮೃತಪಟ್ಟಿದ್ದಳು.

 ಮಾಜಿ ಮಾಧ್ಯಮ ಉದ್ಯಮಿ ಇಂದ್ರಾಣಿ ಮುಖರ್ಜಿ ತನ್ನ ಮಗಳು ಶೀನಾ ಬೋರಳ ಕೊಲೆಪ್ರಕರಣದಲ್ಲಿ ಆರೋಪಿಯಾಗಿದ್ದು 2015ರಿಂದ ಜೈಲಿನಲ್ಲಿದ್ದಾರೆ. ಮಂಜುಳಾ ಮೇಲೆ ಪೊಲೀಸರು ಕೋಣೆಯೊಂದರಲ್ಲಿ ಹಲ್ಲೆ ನಡೆಸುತ್ತಿರುವುದನ್ನು ತಾನು ಬಾಗಿಲಿನಲ್ಲಿದ್ದ ರಂದ್ರದ ಮೂಲಕ ನೋಡಿರುವುದಾಗಿ ಇಂದ್ರಾಣಿ ಹೇಳಿದ್ದಾರೆ.

ತಮ್ಮ ವಿರುದ್ಧ ಹೇಳಿಕೆ ನೀಡಿದರೆ ನಿನಗೂ ಇದೇ ಗತಿಯಾಗುತ್ತದೆ ಎಂದು ಪೊಲೀಸರು ತನಗೆ ಎಚ್ಚರಿಕೆ ನೀಡಿರುವುದಾಗಿ ಮುಖರ್ಜಿ ನ್ಯಾಯಾಲಯಕ್ಕೆ ತಿಳಿಸಿದರು. ನ್ಯಾಯಾಲಯದೆದುರು ಹೇಳಿಕೆ ನೀಡಿ ಹೊರಬರುವಾಗ - ಹೇಗಿದ್ದೀರಿ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ- ಇನ್ನೂ ಜೀವಂತವಾಗಿದ್ದೇನೆ ಎಂದು ಇಂದ್ರಾಣಿ ಉತ್ತರಿಸಿದರು.

  ತನ್ನ ಹಾಗೂ ಇತರ ಸಹಖೈದಿಗಳ ಮೇಲೆ ಪುರುಷ ಅಧಿಕಾರಿಗಳು ವಿದ್ಯುತ್‌ದೀಪ ಆರಿಸಿ ಲಾಠಿಯಿಂದ ಮನಬಂದಂತೆ ಹಲ್ಲೆ ನಡೆಸಿದ್ದಾರೆ ಎಂದು ನ್ಯಾಯಾಲಯದಲ್ಲಿ ಅವರು ಆರೋಪಿಸಿದರು. ಬಳಿಕ ಇಂದ್ರಾಣಿಯ ಆರೋಗ್ಯ ಪರೀಕ್ಷೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು.

ಮಂಜುಳಾ ಶೆಟ್ಯೆ ಹತ್ಯೆಯನ್ನು ಖಂಡಿಸಿ ಇಂದ್ರಾಣಿ ಸೇರಿದಂತೆ ಸುಮಾರು 200 ಮಂದಿ ಖೈದಿಗಳು ಶನಿವಾರ ಜೈಲಿನ ಛಾವಣಿಯನ್ನು ಹತ್ತಿ ಪ್ರತಿಭಟನೆ ನಡೆಸಿದ್ದರು. ಮಂಜುಳಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಜೈಲಿನ ಆರು ಅಧಿಕಾರಿಗಳನ್ನು ಅಮಾನತಗೊಳಿಸಲಾಗಿದೆ ಮತ್ತು ಇವರಲ್ಲಿ ಓರ್ವ ಅಧಿಕಾರಿಯನ್ನು ಪ್ರಕರಣದಲ್ಲಿ ಆರೋಪಿ ಎಂದು ಹೆಸರಿಸಲಾಗಿದೆ. ಜೈಲಿನಲ್ಲಿ ಖೈದಿಗಳಿಗೆ ಅಲ್ಪಪ್ರಮಾಣದಲ್ಲಿ ಆಹಾರ ಒದಗಿಸಲಾಗುತ್ತಿದೆ ಎಂದು ದೂರು ನೀಡಿದ ಕಾರಣ ಮಂಜುಳಾರನ್ನು ಥಳಿಸಲಾಗಿತ್ತು ಎನ್ನಲಾಗಿದೆ.

      

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News