‘ಜಿಲ್ಲೆಯ ಸಾಮರಸ್ಯಕ್ಕಾಗಿ ಜನತೆಯ ಒಕ್ಕೂಟ’ ಘೋಷಣೆಯೊಂದಿಗೆ ‘ಕಲ್ಲಡ್ಕ ಚಲೋ’: ಎಸ್‌ಡಿಪಿಐ

Update: 2017-06-28 13:33 GMT

ಮಂಗಳೂರು, ಜೂ.28: ಎಸ್‌ಡಿಪಿಐ ಅಮ್ಮುಂಜೆ ಪ್ರದೇಶದ ವಲಯಾಧ್ಯಕ್ಷ ಹಾಗೂ ಆಟೊ ಚಾಲಕ ಕಲಾಯಿ ಖೈಬರ್‌ನಗರದ ನಿವಾಸಿ ಮುಹಮ್ಮದ್ ಅಶ್ರಫ್ ಕೊಲೆ ಆರೋಪಿಗಳೊಂದಿಗೆ ನೇರ ಸಂಪರ್ಕದಲ್ಲಿದ್ದ ಕಲ್ಲಡ್ಕ ಪ್ರಭಾಕರ ಭಟ್ ಮತ್ತು ಶರಣ್ ಪಂಪ್‌ವೆಲ್‌ರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಆಗ್ರಹಿಸಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಘಟನೆ ನಡೆದ ಮೂರು ದಿನಗಳೊಳಗಾಗಿ ಆರೋಪಿಗಳನ್ನು ಬಂಧಿಸಿ ತಮ್ಮ ಕರ್ತವ್ಯ ನಿಷ್ಠೆಯನ್ನು ತೋರಿಸಿದ್ದಾರೆ. ಪೊಲೀಸರು ಬಂಧಿಸಿರುವ ಆರು ಮಂದಿ ಆರೋಪಿಗಳೆಲ್ಲರೂ ಸಂಘಪರಿವಾರದ ಅಂಗ ಸಂಸ್ಥೆಯಾಗಿರುವ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್‌ನ ಕಾರ್ಯಕರ್ತರಾಗಿದ್ದಾರೆ.

ತಲೆಮರೆಸಿಕೊಂಡಿರುವ ಇನ್ನೋರ್ವ ಆರೋಪಿ ಭರತ್ ಕುಮಾರ್ ಕೂಡ ಬಜರಂಗದಳದ ಕಾರ್ಯಕರ್ತನಾಗಿದ್ದು, ಬಂಟ್ವಾಳ ತಾಲೂಕು ಗೋ ರಕ್ಷಾ ಪ್ರಮುಖ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾನೆ. ಆದ್ದರಿಂದ ಈ ಘಟನೆಯು ಸಂಘಪರಿವಾರ ಪ್ರಾಯೋಜಿತ ಮತ್ತು ಪೂರ್ವ ನಿಯೋಜಿತ ಕೃತ್ಯ ಎಂಬುದು ಸ್ಪಷ್ಟವಾಗುತ್ತದೆ ಎಂದು ಅವರು ಹೇಳಿದರು.

ಕೊಲೆಯ ಹಿಂದೆ ದ.ಕ. ಜಿಲ್ಲೆಯಲ್ಲಿ ಕೋಮು ಜ್ವಾಲೆಯನ್ನು ಹಬ್ಬಿಸಿ, ಮತೀಯ ಸಂಘರ್ಷ ಹುಟ್ಟು ಹಾಕಿ ಚುನಾವಣೆಯಲ್ಲಿ ರಾಜಕೀಯ ಲಾಭ ಪಡೆಯುವ ಹುನ್ನಾರ ಅಡಗಿದೆ. ಆದ್ದರಿಂದ ಈ ಕೊಲೆಯು ಬಂಧಿತ ಆರೋಪಿಗಳು ಮತ್ತು ಭರತ್ ಕುಮಾರ್ ಸೇರಿಕೊಂಡು ಮಾಡಿರುವ ಕೃತ್ಯ ಮಾತ್ರ ಆಗಿರದೆ, ಆರೋಪಿಗಳಿಗೆ ಆರ್ಥಿಕ ಸಹಾಯ, ಕೊಲೆಗೆ ಪ್ರಚೋದನೆ ನೀಡಿದವರು ಕೂಡ ಆರೋಪಿಗಳಾಗಿದ್ದಾರೆ.

ಪ್ರಕರಣದಲ್ಲಿ ಆರು ಮಂದಿ ಆರೋಪಿಗಳನ್ನು ಮಾತ್ರ ಸೀಮಿತಗೊಳಿಸದೆ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿ ಆಳವಾದ ತನಿಖೆಯನ್ನು ಕೈಗೊಂಡು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದೂ ರಿಯಾಝ್ ಫರಂಗಿಪೇಟೆ ಒತ್ತಾಯಿಸಿದರು.

ಅಶ್ರಫ್ ಕೊಲೆಯ ಮೂರು ತಿಂಗಳ ಹಿಂದೆ ಬಂಟ್ವಾಳ ಆಸುಪಾಸಿನಲ್ಲಿ ಮುಸ್ಲಿಮರ ಮೇಲೆ ಹಲವು ದೌರ್ಜನ್ಯಗಳು ನಡೆದಿವೆ. ಪುದು ಗ್ರಾ.ಪಂ.ನ ಮಾಜಿ ಸದಸ್ಯರೊಬ್ಬರಿಗೆ ಬಜರಂಗದಳದಿಂದ ಬೆದರಿಕೆಯ ಪತ್ರ, ಗ್ರಾ.ಪಂ.ನ ವಾಟರ್‌ಮನ್ ಕರೀಂ ಎಂಬವರ ಕೊಲೆಗೆ ಯತ್ನ, ಕಲ್ಲಡ್ಕದಲ್ಲಿ ಎರಡು ಬಾರಿ ಚೂರಿ ಇರಿತ ಪ್ರಕರಣ, ತುಂಬೆಯಲ್ಲಿ ಚೂರಿ ಇರಿತ ಪ್ರಕರಣಗಳ ಬಗ್ಗೆ ದೂರು ದಾಖಲಾಗಿವೆ.

ಪೊಲೀಸರ ನಿಷ್ಕ್ರಿಯತೆ ಮತ್ತು ದ್ವಿಮುಖ ಧೋರಣೆಯಿಂದಾಗಿ ಸಂಘಪರಿವಾರದವರು ಅಶ್ರಫ್‌ರನ್ನು ಕೊಲೆ ಮಾಡುವ ಮೂಲಕ ತಮ್ಮ ಅಜೆಂಡಾವನ್ನು ಪೂರ್ತಿಗೊಳಿಸಿದ್ದಾರೆ. ಈ ಕೊಲೆಯ ಹಿಂದೆ ಸಂಘಪರಿವಾರದ ವ್ಯಕ್ತಿಗಳು ಸೂತ್ರದಾರಿಗಳಾಗಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಅವರು ವಿವರಿಸಿದರು.

ಕೊಲೆ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಪ್ರಮುಖ ಆರೋಪಿ ಭರತ್ ಕುಮಾರ್  ಜೂ.15ರಂದು ನಗರದಲ್ಲಿ ಕಲ್ಲಡ್ಕ ಪ್ರಭಾಕರ ಭಟ್, ಶರಣ್ ಪಂಪ್‌ವೆಲ್, ಪದ್ಮನಾಭ ಕೊಟ್ಟಾರಿ ಮತ್ತು ಇತರ ನಾಯಕರು ಸೇರಿ ಪತ್ರಿಕಾಗೋಷ್ಠಿ ನಡೆಸಿರುವುದನ್ನು ಗಮನಿಸಿದರೆ, ಭರತ್ ಕುಮಾರ್‌ನನ್ನು ಇದೇ ನಾಯಕರು ತಮ್ಮ ಬಣ್ಣ ಬಯಲಾಗಬಹುದೆಂಬ ಭಯದಿಂದ ತಲೆಮರೆಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಾರೆ. ಮಾತ್ರವಲ್ಲದೆ, ಆರೋಪಿಗೆ ಆಶ್ರಯವನ್ನೂ ನೀಡಿದ್ದಾರೆ ಎಂದು ರಿಯಾಝ್ ತಿಳಿಸಿದರು.

ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಯಾವುದೇ ರೀತಿಯ ಪ್ರಭಾವಕ್ಕೆ ಒಳಗಾಗದೆ, ಕೊಲೆ ಆರೋಪಿಯೊಂದಿಗೆ ನೇರ ಸಂಪರ್ಕದಲ್ಲಿದ್ದ ಕಲ್ಲಡ್ಕ ಪ್ರಭಾಕರ ಭಟ್ ಮತ್ತು ಶರಣ್ ಪಂಪ್‌ವೆಲ್‌ರನ್ನು ಕೂಡಲೇ ಬಂಧಿಸಿ ವಿಚಾರಣೆಗೊಳಪಡಿಸಿ ಕೊಲೆಯಲ್ಲಿ ಇವರ ಪಾತ್ರವನ್ನು ಬಹಿರಂಗಪಡಿಸಿ ಕೊಲೆಗೀಡಾದ ಅಶ್ರಫ್ ಅವರ ಕುಟುಂಬಕ್ಕೆ ನ್ಯಾಯ ಒದಗಿಸಿಕೊಂಡಬೇಕೆಂದು ಅವರು ಒತ್ತಾಯಿಸಿದರು.

ಪ್ರಕರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಕೋಮು ದ್ವೇಷವನ್ನು ಕಾರುವ ಸಂಘಪರಿವಾರದ ಕಾರ್ಯಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ವಿಶೇಷ ಕಾನೂನು ಪಾಲನಾ ವ್ಯವಸ್ಥೆಯನು ಜಿಲ್ಲೆಯಲ್ಲಿ ಜಾರಿಗೊಳಿಸಿ ಅಲ್ಪಸಂಖ್ಯಾತರಿಗೆ ರಕ್ಷಣೆಯನ್ನು ಒದಗಿಸಬೇಕು. ಇಲ್ಲದಿದ್ದರೆ ಪಕ್ಷದ ವತಿಯಿಂದ ಎಲ್ಲಾ ಸಂಘ-ಸಂಸ್ಥೆಗಳನ್ನು ಸೇರಿಸಿ ‘ಜಿಲ್ಲೆಯ ಸಾಮರಸ್ಯಕ್ಕಾಗಿ ಜನತೆಯ ಒಕ್ಕೂಟ’ ಎಂಬ ಘೋಷಣೆಯೊಂದಿಗೆ ‘ಕಲ್ಲಡ್ಕ ಚಲೋ’ ಬೃಹತ್ ಜನಾಂದೋಲನವನ್ನು ರೂಪಿಸುವುದಾಗಿ ಮತ್ತು ಹೆದ್ದಾರಿ ಬಂದ್ ಹಾಗೂ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆಯಂತಹ ಪ್ರತಿಭಟನೆಯನ್ನು ಹಮ್ಮಿಕೊಳ್ಳುವುದಾಗಿ ರಿಯಾಝ್ ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ಜಲೀಲ್ ಕೆ., ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಥಾವುಲ್ಲಾ ಜೋಕಟ್ಟೆ, ಮಹಾನಗರ ಪಾಲಿಕೆ ಸದಸ್ಯ ಅಯಾಝ್ ಕೆ., ಬಂಟ್ವಾಳ ಪುರಸಭಾ ಸದಸ್ಯ ಇಕ್ಬಾಲ್ ಐಎಂಆರ್, ಜಿಲ್ಲಾ ಸಮಿತಿ ಸದಸ್ಯ ಸಾಹುಲ್ ಎಸ್.ಎಚ್. ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News