ಬಂಟ್ವಾಳ ಪುರಸಭೆಯಲ್ಲಿ ಕುಂದು ಕೊರತೆಗಳ ಸಭೆ

Update: 2017-06-28 14:00 GMT

ಬಂಟ್ವಾಳ, ಜೂ. 28: ದಲಿತರ ಸಮಸ್ಯೆಗಳ ಬಗ್ಗೆ ಕುಂದು ಕೊರತೆ ಸಭೆಯಲ್ಲಿ ಬಂದು ಚರ್ಚಿಸಿ ಸಮಯ ವ್ಯರ್ಥ ಮಾಡುವುದಕ್ಕಿಂತ ಇತರ ಸಮಯದಲ್ಲಿ ಅಧಿಕಾರಿಗಳನ್ನು ಸಂಪರ್ಕಿಸಿ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನ ಮಾಡಿ ಎಂದು ಬಂಟ್ವಾಳ ಪುರಸಭೆಯಲ್ಲಿ ನಡೆದ ಎಸ್ಸಿ-ಎಸ್ಟಿ ಕುಂದು ಕೊರತೆ ಸಭೆಯಲ್ಲಿ ದಲಿತ ಮುಖಂಡ ಜನಾರ್ದನ ಚೆಂಡ್ತಿಮಾರ್ ಸಲಹೆ ನೀಡಿದರು.

ಸಭೆಯ ಆರಂಭದಲ್ಲಿ ಬಿ.ಮೂಡ ಗ್ರಾಮದ ಪಲ್ಲಮಜಲು ಪರಾರಿ ಎಸ್ಸಿ-ಎಸ್ಟಿ ಮನೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಅಭಿವೃದ್ಧಿ ಪಡಿಸದಿರುವ ಬಗ್ಗೆ ಗಂಭಿರ ಚರ್ಚೆ ನಡೆಯಿತು.

ಈ ವೇಳೆ ಮಧ್ಯ ಪ್ರವೇಶಿಸಿದ ಜನಾರ್ದನ ಚೆಂಡ್ತಿಮಾರ್, ಟಿವಿ ಮತ್ತು ಪತ್ರಿಕೆಗಳಲ್ಲಿ ಪ್ರಚಾರ ಪಡೆಯಲು ಬರೇ ಕುಂದು ಕೊರತೆ ಸಭೆಯಲ್ಲಿ ಬಂದು ಸಮಸ್ಯೆಗಳ ಬಗ್ಗೆ ತಾಸುಗಳ ಕಾಲ ಚರ್ಚಿಸಿ ಸಮಯ ವ್ಯರ್ಥ ಮಾಡಬೇಡಿ. ಇತರ ಸಮಯದಲ್ಲಿಯೂ ಅಧಿಕಾರಿಗಳು ಮತ್ತು ಸ್ಥಳೀಯ ಪ್ರತಿನಿಧಿಗಳನ್ನು ಭೇಟಿ ಮಾಡಿ ಸಮಸ್ಯೆ ಪರಿಹರಿಸಲು ಪ್ರಯತ್ನಿಸಿ ಎಂದು ಹೇಳಿದರು.

ಪಲ್ಲಮಜಲು ಪರಾರಿ ಎಸ್ಸಿ-ಎಸ್ಟಿ ಮನೆಗಳಿಗೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಪಡಿಸುವ ಬಗ್ಗೆ ಹಲವು ಸಭೆಗಳಲ್ಲಿ ಭರವಸೆ ನೀಡಿದ್ದರೂ ಇನ್ನೂ ಅಭಿವೃದ್ಧಿ ಪಡಿಸದಿರುವ ಬಗ್ಗೆ ಸ್ಥಳೀಯ ನಿವಾಸಿ ಗಂಗಾಧರ ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಸುದೀರ್ಘ ಚರ್ಚೆಯ ಬಳಿಕ ಸಭಾಧ್ಯಕ್ಷತೆ ವಹಿಸಿದ್ದ ಪುರಸಭಾ ಅಧ್ಯಕ್ಷ ರಾಮಕೃಷ್ಣ ಆಳ್ವ ಪ್ರತಿಕ್ರಿಯಿಸಿ ಮುಂದಿನ ಸಭೆಯೊಳಗೆ ಈ ರಸ್ತೆಯನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿ ಚರ್ಚೆಗೆ ತೆರೆ ಎಳೆದರು.

ಎಸ್ಸಿ-ಎಸ್ಟಿ ವಿಶೇಷ ಅನುದಾನದಲ್ಲಿ ಹೆಚ್ಚಿನ ಹಣವನ್ನು ರಸ್ತೆ ನಿರ್ಮಾಣಕ್ಕೆ ಬಳಸುವುದಕ್ಕೆ ಜನಾರ್ದನ ಚೆಂಡ್ತಿಮಾರ್ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಸುಧಾಕರ್, ವಿಶೇಷ ಅನುದಾನವನ್ನು ಮೂಲಭೂತ ಸೌಕರ್ಯಕ್ಕೆ ಮೊದಲ ಆದ್ಯತೆ ನೀಡುವಂತೆ ಸರಕಾರದ ನಿಯಮ ಇದೆ. ಅದರಂತೆ ವಿಶೇಷ ಅನುದಾನವನ್ನು ಬಳಸಲಾಗುತ್ತಿದೆ ಎಂದು ಉತ್ತರಿಸಿದರು.

ಸಭೆಯಲ್ಲಿ ಎಸ್ಸಿ-ಎಸ್ಟಿ ಸಮುದಾಯ ಎದುರಿಸುತ್ತಿರುವ ಹಲವು ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು. ಯೋಜನ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಬಂಗೇರ, ಸಮುದಾಯ ಅಧಿಕಾರಿ ಮತ್ತಡಿ, ಪುರಸಭಾ ಸದಸ್ಯರಾದ ವಸಂತಿ ಚಂದಪ್ಪ, ಪ್ರವೀಣ್ ಬಿ., ಗಂಗಾಧರ, ಜೆಸಿಂತಾ, ವಾಸು ಪೂಜಾರಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News