ಉದ್ಯಾವರ ಪಡುಕೆರೆಯಲ್ಲಿ ತೀವ್ರಗೊಂಡ ಕಡಲ್ಕೊರೆತ

Update: 2017-06-28 14:15 GMT

ಉಡುಪಿ, ಜೂ.28: ಉದ್ಯಾವರ ಪಡುಕೆರೆಯಲ್ಲಿ ಕಡಲು ಪ್ರಕ್ಷುಬ್ದಗೊಂಡ ಪ್ರರಿಣಾಮ ಈ ಪ್ರದೇಶದಲ್ಲಿ ಕೊರೆತ ತೀವ್ರಗೊಂಡಿದ್ದು, ಕಾಂಕ್ರೀಟ್ ರಸ್ತೆಯ ಅಡಿ ಭಾಗ ಕೊರತೆಕ್ಕೆ ಒಳಗಾಗಿ ಅಪಾಯದ ಅಂಚಿನಲ್ಲಿದೆ. ಇದರಿಂದ ಪಡು ಕೆರೆಗೆ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಉದ್ಯಾವರ ಪಡುಕೆರೆ ಪಂಡರೀನಾಥ ಭಜನಾ ಮಂದಿರದ ಬಳಿ ನಿನ್ನೆಯಿಂದ ಕಡಲ್ಕೊರೆತ ತೀವ್ರವಾಗಿದೆ. ರಕ್ಕಸ ಗಾತ್ರದ ಅಲೆಗಳು ತಡೆಗೋಡೆಗಳನ್ನು ದಾಟಿ ತೀರಕ್ಕೆ ಬಡಿಯುತ್ತಿದೆ. ಅದೇ ರೀತಿ ಕುತ್ಪಾಡಿ ಪಡುಕೆರೆಯಲ್ಲಿ ಕಾಂಕ್ರೀಟ್ ರಸ್ತೆಯ ಅಡಿ ಭಾಗ ಕೊರೆತದಿಂದ ಕುಸಿಯುವ ಭೀತಿಯಲ್ಲಿದೆ. ಈ ಹಿನ್ನೆಲೆ ಯಲ್ಲಿ ಮಲ್ಪೆ ಪಡುಕೆರೆ ಮಾರ್ಗವಾಗಿ ಕಾಪು ಕೈಪುಂಜಾಲು ಹೋಗುವ ಬಸ್ ಗಳ ಸಂಚಾರವನ್ನು ಕಡೆಕಾರ್‌ನಲ್ಲಿಯೇ ಮೊಟಕುಗೊಳಿಸಲಾಗಿದೆ.

ಉದ್ಯಾವರ ಪಡುಕೆರೆಯಲ್ಲಿ ಕಡಲ್ಕೊರೆತ ತೀವ್ರವಾಗಿರುವ ಹಿನ್ನೆಲೆಯಲ್ಲಿ ನಿನ್ನೆಯಿಂದ ತಾತ್ಕಾಲಿಕ ತಡೆಗೋಡೆ ನಿರ್ಮಾಣ ಕೆಲಸ ನಡೆಯುತ್ತಿದೆ. ಈ ವರೆಗೆ 10 ಲೋಡ್ ಕಲ್ಲುಗಳನ್ನು ಹಾಕಿ ತಾತ್ಕಾಲಿಕ ತಡೆ ಮಾಡಲಾಗಿದೆ. ಅದೇ ರೀತಿ ಗಂಗೊಳ್ಳಿ ಖಾರ್ವಿಕೇರಿ ಹಾಗೂ ಬೇಲಿಕೇರಿ ಎಂಬಲ್ಲಿಯೂ ಸಮುದ್ರ ಕೊರೆತ ಕಾಣಿಸಿಕೊಂಡಿದ್ದು, ಇದೀಗ ಅಲ್ಲಿಯೂ ತರ್ತು ಕ್ರಮವಾಗಿ ಕಲ್ಲು ಹಾಕಿ ತಾತ್ಕಾಲಿಕ ತಡೆಗೋಡೆ ನಿರ್ಮಿಸಲಾಗುತ್ತಿದೆ. ಮೂಳೂರಿ ನಲ್ಲಿಯೂ ಕಡಲ್ಕೊರೆತ ತೀವ್ರಗೊಂಡಿದೆಂದು ಉಡುಪಿ ಬಂದರು ಇಲಾಖೆಯ ಸಹಾಯಕ ಅಭಿಯಂತರ ಜಗದೀಶ್ ತಿಳಿಸಿದ್ದಾರೆ.

ಶಾಶ್ವತ ತಡೆಗೋಡೆಗೆ ಟೆಂಡರ್:
ಉಡುಪಿ ಜಿಲ್ಲೆಯಲ್ಲಿ ತೀವ್ರ ಕಡಲ್ಕೊರೆತಕ್ಕೆ ತುತ್ತಾಗಿರುವ ಪ್ರದೇಶಗಳಲ್ಲಿ ಒಟ್ಟು 22.25ಕೋಟಿ ರೂ. ವೆಚ್ಚದಲ್ಲಿ ಒಟ್ಟು 2.224ಕಿ.ಮೀ. ಉದ್ದದ ಶಾಶ್ವತ ತಡೆಗೋಡೆ ನಿರ್ಮಾಣದ ಎಂಟು ಕಾಮಗಾರಿಗಳಿಗೆ ಇದೀಗ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ.

ಉಡುಪಿ ಕಿದಿಯೂರು ಪಡುಕೆರೆಯಲ್ಲಿ 4.80 ಕೋಟಿ ರೂ. ವೆಚ್ಚದಲ್ಲಿ 470 ಮೀ., ಕುಂದಾಪುರ ಕೋಡಿಬೆಂಗ್ರೆ ಗುಲಾಬಿ ಕುಂದರ್ ಮನೆ ಬಳಿ 3.50 ಕೋಟಿ ರೂ. ವೆಚ್ಚದಲ್ಲಿ 454 ಮೀ., ಗಂಗೊಳ್ಳಿ ಬೇಲಿಕೇರಿ ದಕ್ಷಿಣ ಭಾಗದಲ್ಲಿ 3.75ಕೋಟಿ ರೂ. ವೆಚ್ಚದಲ್ಲಿ 300ಮೀ., ಗಂಗೊಳ್ಳಿ ಖಾರ್ವಿಕೇರಿ ಮಹಾ ಗಣಪತಿ ದೇವಸ್ಥಾನದ ಬಳಿ 2.50ಕೋಟಿ ರೂ. ವೆಚ್ಚದಲ್ಲಿ 200 ಮೀಟರ್, ಬೈಂದೂರು ನಾವುಂದ ಮಸ್ಕಿ ಬಳಿ 3ಕೋಟಿ ರೂ. ವೆಚ್ಚದ 255 ಮೀ. ಮತ್ತು 99.5ಲಕ್ಷ ರೂ. ವೆಚ್ಚದಲ್ಲಿ 85ಮೀ., ಪಡುವರಿ ತಾರಪತಿ ಶಾಲೆ ಬಳಿ 1.71 ಕೋಟಿ ರೂ. ವೆಚ್ಚದಲ್ಲಿ 155ಮೀ., ಪಡುಬಿದ್ರಿ ನಡಿಪಟ್ಲ ಎಂಬಲ್ಲಿ 2ಕೋಟಿ ರೂ. ವೆಚ್ಚದಲ್ಲಿ 325 ಮೀಟರ್ ಉದ್ದದ ಶಾಶ್ವತ ತಡೆಗೋಡೆ ನಿರ್ಮಾಣ ವಾಗಲಿದೆ ಎಂದು ಉಡುಪಿ ಬಂದರು ಇಲಾಖೆಯ ಸಹಾಯಕ ಅಭಿಯಂತರ ಜಗದೀಶ್ ತಿಳಿಸಿದ್ದಾರೆ.

ಉಡುಪಿ ನಗರಸಭೆಯ ನಗರೋತ್ಥಾನ ಯೋಜನೆಯ ಮೂರು ಕೋಟಿ ರೂ. ಅನುದಾನದಲ್ಲಿ ಮಲ್ಪೆ ಬೀಚ್‌ನಲ್ಲಿ ಶಾಶ್ವತ ತಡೆಗೋಡೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ತ್ರಾಸಿ ಮರವಂತೆ ಬೀಚ್‌ನಲ್ಲಿ ಐದು ಕೋಟಿ ರೂ. ವೆಚ್ಚದಲ್ಲಿ ಒಟ್ಟು 434 ಮೀಟರ್ ಉದ್ದದ ಎರಡು ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ ಜಿಲ್ಲಾಧಿಕಾರಿಗಳ ಮೂಲಕ ಕಾರವಾರ ಬಂದರು ಇಲಾಖೆಯ ನಿರ್ದೇಶಕರಿಗೆ ಈಗಾಗಲೇ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News