ಬೀಜಾಡಿಯಲ್ಲಿ ಸುಂಟರಗಾಳಿ: ತೋಟ, ಮನೆಗಳಿಗೆ ಹಾನಿ
ಕುಂದಾಪುರ, ಜೂ.28: ಬೀಜಾಡಿ ಗ್ರಾಮದಲ್ಲಿ ಜೂ.27ರಂದು ರಾತ್ರಿ ವೇಳೆ ಮಳೆಯೊಂದಿಗೆ ಬೀಸಿದ ಭಾರೀ ಗಾಳಿಯಿಂದ ಹಲವು ಮನೆಗಳು ಹಾಗೂ ತೋಟಕ್ಕೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.
ಸುಂಟರಗಾಳಿಯಿಂದ ಬೀಜಾಡಿ ಗ್ರಾಮದ ಲಲಿತಾ ಹಾಗೂ ಸುಶೀಲಾ ಎಂಬವರ ಮನೆಯ ಗೋಡೆ ಕುಸಿದು ಕ್ರಮವಾಗಿ 75ಸಾವಿರ ಹಾಗೂ 25 ಸಾವಿರ ರೂ. ನಷ್ಟ ಉಂಟಾಗಿದೆ. ಅದೇ ರೀತಿ ಅಲ್ಲೇ ಸಮೀಪದ ಮನೆಯೊಂದರ ಹೆಂಚು ಹಾರಿ ಹೋಗಿ ಸುಮಾರು 15ಸಾವಿರ ರೂ. ನಷ್ಟವಾಗಿದೆ.
ದೇವಮ್ಮ ದೇವಾಡಿಗ ಎಂಬವರ ಮನೆಯ ಮೇಲೆ ಮರ ಬಿದ್ದು ಹಾನಿ ಯಾಗಿ 50ಸಾವಿರ ರೂ. ನಷ್ಟ ಮತ್ತು ಕಾವೇರಿ ದೇವಾಡಿಗ ಎಂಬವರ ಮನೆ ಮೇಲೆ ಮರ ಬಿದ್ದು 10ಸಾವಿರ ರೂ. ಹಾಗೂ ಕೊಟ್ಟಿಗೆ ಹೆಂಚು ಹಾರಿ ಹೋಗಿ 30ಸಾವಿರ ರೂ. ನಷ್ಟ ಸಂಭವಿಸಿದೆ. ಭಾರೀ ಗಾಳಿಗೆ ಅಕ್ಕಯ್ಯ ದೇವಾಡಿಗ ಎಂಬವರ ತೋಟದಲ್ಲಿನ 25ಸಾವಿರ ರೂ. ವೌಲ್ಯದ ಬೆಳೆಗಳು ಹಾನಿಯಾ ಗಿವೆ. ನಾಗ ದೇವಾಡಿಗ ಎಂಬವರ ಕೊಟ್ಟಿಗೆ ಹಾಗೂ ಮನೆಗೆ ಹಾನಿ ಉಂಟಾಗಿ 30ಸಾವಿರ ರೂ. ನಷ್ಟವಾಗಿದೆ ಎಂದು ತಾಲೂಕು ಕಚೇರಿಯ ಮೂಲಗಳು ತಿಳಿಸಿವೆ.
ನಿನ್ನೆ ರಾತ್ರಿಯಿಂದ ಸುರಿದ ಭಾರಿ ಮಳೆಗೆ ಕಾರ್ಕಳ ತಾಲೂಕಿನ ಕುಕ್ಕುಂಜೆ ಗ್ರಾಮದ ಗುಲಾಬಿ ಎಂಬವರ ಮನೆಯ ಗೋಡೆ ಕುಸಿದು 20ಸಾವಿರ ರೂ. ನಷ್ಟ ಉಂಟಾಗಿದೆ. ಉಡುಪಿ ತಾಲೂಕಿನ ಪಾಂಗಾಳ ಸರಸ್ವತಿ ನಗರದ ನರ್ಸಿ ಪೂಜಾರ್ತಿ ಎಂಬವರ ಮನೆಯ ಮೇಲೆ ಮರ ಬಿದ್ದು 10ಸಾವಿರ ರೂ. ನಷ್ಟ ಸಂಭವಿಸಿದೆ.