ರಾಹುಲ್ ಗಾಂಧಿಯನ್ನು ‘ಪಪ್ಪು’ ಎಂದು ಉಲ್ಲೇಖಿಸಿದ್ದ ಕಾಂಗ್ರೆಸ್ ಮುಖಂಡ ಪಕ್ಷಕ್ಕೆ ರಾಜೀನಾಮೆ
ಹೊಸದಿಲ್ಲಿ, ಜೂ.28: ಇತ್ತೀಚೆಗೆ ರಾಹುಲ್ ಗಾಂಧಿಯನ್ನು ‘ಪಪ್ಪು’ ಎಂದು ಉಲ್ಲೇಖಿಸಿದ್ದ ಕಾಂಗ್ರೆಸ್ ಮುಖಂಡ ವಿನಯ್ ಪ್ರಧಾನ್ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಮೀರತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿದ್ದ ಪ್ರಧಾನ್ ಮಾಡಿದ್ದ ಪೇಸ್‌ಬುಕ್ ಪೋಸ್ಟ್ ಒಂದರಲ್ಲಿ ರಾಹುಲ್ ಗಾಂಧಿಯನ್ನು ‘ಪಪ್ಪು’ ಎಂದು ಉಲ್ಲೇಖಿಸಲಾಗಿತ್ತು. ಇದು ವಿವಾದಕ್ಕೆ ಕಾರಣವಾಗಿತ್ತು ಮತ್ತು ಹಲವು ಮಂದಿ ಆಕ್ಷೇಪ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಧಾನ್‌ರನ್ನು ಜಿಲ್ಲಾಧ್ಯಕ್ಷ ಹುದ್ದೆಯಿಂದ ಉಚ್ಛಾಟಿಸಲಾಗಿತ್ತು ಮತ್ತು ಪಕ್ಷದ ಎಲ್ಲಾ ಹುದ್ದೆಯನ್ನೂ ಕಿತ್ತುಕೊಳ್ಳಲಾಗಿತ್ತು.
ತನ್ನನ್ನು ಹುದ್ದೆಯಿಂದ ಉಚ್ಚಾಟಿಸುವ ಮೊದಲು ತನ್ನ ಹೇಳಿಕೆಗೆ ಅವಕಾಶ ನೀಡಲಾಗಿಲ್ಲ. ರಾಹುಲ್‌ಗೆ ವೈಯಕ್ತಿಕ ಹಿತಾಸಕ್ತಿಗಿಂತ ರಾಷ್ಟ್ರದ ಹಿತಾಸಕ್ತಿಯ ಬಗ್ಗೆ ಹೆಚ್ಚಿನ ಆದ್ಯತೆಯಿದೆ. ಆದ್ದರಿಂದಲೇ ಅವರು ಅದಾನಿ, ಅಂಬಾನಿ, ಮಲ್ಯರ ಜೊತೆ ಕೈಜೋಡಿಸುತ್ತಿಲ್ಲ ಎಂದು ತಾನು ಹೇಳಿದ್ದೆ.
ಆದರೆ ತನ್ನ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ತಾನು ನಿಜಕ್ಕೂ ಓರ್ವ ‘ಪಪ್ಪು’ ಎಂದು ರಾಹುಲ್ ಸಾಬೀತುಪಡಿಸಿದ್ದಾರೆ. ಈಗ ನನ್ನ ರಾಜಕೀಯ ಜೀವನಕ್ಕೆ ಅಡ್ಡಿಯುಂಟಾಗಿದೆ. ಪಕ್ಷಕ್ಕಾಗಿ 22 ವರ್ಷ ಸುದೀರ್ಘ ಸೇವೆ ಸಲ್ಲಿಸಿದ ತನಗೆ ಅನ್ಯಾಯವಾಗಿದೆ ಎಂದು ಪ್ರಧಾನ್ ದೂರಿದ್ದಾರೆ.
ರಾಜೀವ್ ಗಾಂಧಿಯವರ ಸುತ್ತ ಇರುವ ಭಟ್ಟಂಗಿಗಳು ಕಾಂಗ್ರೆಸ್ ಪಕ್ಷವನ್ನು ವಿನಾಶದತ್ತ ಕೊಂಡೊಯ್ಯುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಂಡಿದೆ. ‘ಪಪ್ಪು’ವಿನ ದಾಖಲೆ ನೋಡಿದರೆ ಪಕ್ಷ ಮುಂದೆಂದೂ ಚುನಾವಣೆಯಲ್ಲಿ ಗೆಲ್ಲದು ಎಂಬುದು ಖಚಿತವಾಗುತ್ತದೆ ಎಂದವರು ಟೀಕಿಸಿದ್ದಾರೆ.