ಕೊಲೆಗೆ ಪ್ರೇರಣೆ ನೀಡಿದ ಆರೋಪ: ನಾಲ್ವರ ಬಂಧನ
ಹೊಸದಿಲ್ಲಿ, ಜೂ.28: ಕಳೆದ ವಾರ ರೈಲಿನಲ್ಲಿ ಗುಂಪು ಹಲ್ಲೆಯಿಂದ ಮೃತಪಟ್ಟ ಜುನೈದ್ ಖಾನ್ ಕೊಲೆ ಪ್ರಕರಣದಲ್ಲಿ ದಿಲ್ಲಿ ಸರಕಾರದ ಸಿಬ್ಬಂದಿ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಇನ್ನೋರ್ವ ಅಧಿಕಾರಿಯನ್ನೂ ಆರೋಪಿ ಎಂದು ಗುರುತಿಸಲಾಗಿದ್ದು ಈತನನ್ನು ಇನ್ನಷ್ಟೇ ಬಂಧಿಸಬೇಕಿದೆ.
ಬಂಧಿಸಲ್ಪಟ್ಟ ನಾಲ್ವರಲ್ಲಿ ಓರ್ವ ವ್ಯಕ್ತಿ ಜುನೈದ್ ಖಾನ್‌ನನ್ನು ‘ರಾಷ್ಟ್ರವಿರೋಧಿ, ಗೋಮಾಂಸ ಭಕ್ಷಿಸುವವ’ ಎಂದು ಹೀಯಾಳಿಸಿದ್ದ. ಇತರ ಮೂವರು ಹಲ್ಲೆಗೆ ಪ್ರೇರಣೆ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ನಾಲ್ವರಿಂದ ಪ್ರೇರೇಪಿಸಲ್ಪಟ್ಟ ಗುಂಪು ನಾಲ್ವರು ಮುಸ್ಲಿಂ ಯುವಕರ ಮೇಲೆ ಹಲ್ಲೆ ನಡೆಸಿದ್ದು ಇದರಲ್ಲಿ ಜುನೈದ್ ಖಾನ್ ಎಂಬ ಬಾಲಕ ಮೃತಪಟ್ಟಿದ್ದ . ಜುನೈದ್ ಖಾನ್ ಮತ್ತಾತನ ಸೋದರನನ್ನು ಚೂರಿಯಿಂದ ಇರಿದಿದ್ದ ವ್ಯಕ್ತಿಯನ್ನು ಇನ್ನಷ್ಟೇ ಬಂಧಿಸಬೇಕಿದೆ. ಹರ್ಯಾನ ಪೊಲೀಸರು ಕಳೆದ ವಾರ ರಮೇಶ್ ಎಂಬ ಆರೋಪಿಯನ್ನು ಬಂಧಿಸಿದ್ದರು.
ಘಟನೆ ವೇಳೆ ರೈಲಿನಲ್ಲಿ ಪ್ರಯಾಣಿಕರು ತುಂಬಿದ್ದರೂ ಯಾರೊಬ್ಬರೂ ಸಾಕ್ಷ ನೀಡಲು ಮುಂದೆ ಬರುತ್ತಿಲ್ಲ. ಆದ್ದರಿಂದ ಆರೋಪಿಗಳ ಬಂಧನಕ್ಕೆ ತೊಂದರೆಯಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.