ಸಿಕ್ಕಿಮ್‌ನಲ್ಲಿಯ ಭಾರತೀಯ ಬಂಕರ್ ಧ್ವಂಸಗೊಳಿಸಿದ ಚೀನಾ

Update: 2017-06-28 15:47 GMT

ಹೊಸದಿಲ್ಲಿ,ಜೂ.28: ಸಿಕ್ಕಿಮ್‌ನಲ್ಲಿ ಭಾರತ-ಚೀನಾ-ಭೂತಾನ್ ಗಡಿಗಳ ಸಂಗಮ ಪ್ರದೇಶದಲ್ಲಿದ್ದ ಭಾರತೀಯ ಸೇನೆಯ ಹಳೆಯ ಬಂಕರ್‌ವೊಂದನ್ನು ಚೀನಾ ಬುಲ್‌ಡೋಝರ್ ಬಳಸಿ ಧ್ವಂಸಗೊಳಿಸಿದೆ. ಇದಕ್ಕೂ ಮುನ್ನ ಈ ಬಂಕರ್‌ನ್ನು ತೆರವುಗೊಳಿಸುವಂತೆ ಚೀನಾದ ಮನವಿಯನ್ನು ಭಾರತವು ತಿರಸ್ಕರಿಸಿತ್ತು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಸಿಕ್ಕಿಮ್‌ನ ಡೋಕಾ ಲಾ ಪ್ರದೇಶದಲ್ಲಿ ಜೂನ್ ಮೊದಲ ವಾರದಲ್ಲಿ ನಡೆದ ಈ ಘಟನೆಯು ಉಭಯ ದೇಶಗಳ ಸೇನಾಪಡೆಗಳ ಮುಖಾಮುಖಿಗೆ ನಾಂದಿ ಹಾಡಿತ್ತು ಮತ್ತು ಭಾರತ-ಚೀನಾ ಗಡಿಯ ಸಿಕ್ಕಿಂ ವಿಭಾಗದಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸಿತ್ತು ಎಂದು ಬುಧವಾರ ಈ ಮೂಲಗಳು ತಿಳಿಸಿದವು.

ಭಾರತವು ಇತ್ತೀಚಿನ ದಿನಗಳಲ್ಲಿ ಜನತಾ ವಿಮೋಚನಾ ಸೇನೆ(ಪಿಎಲ್‌ಎ)ಯ ವಿರುದ್ಧ ತನ್ನ ರಕ್ಷಣಾ ವ್ಯವಸ್ಥೆಯನ್ನು ಬಲಗೊಳಿಸಲು ಸಿಕ್ಕಿಮ್‌ನಲ್ಲಿ ಗಡಿಯುದ್ದಕ್ಕೂ ಹಲವಾರು ಹೊಸ ಬಂಕರ್‌ಗಳನ್ನು ನಿರ್ಮಿಸುತ್ತಿರುವುದನ್ನು ಮತ್ತು ಹಳೆಯ ಬಂಕರ್‌ಗಳನ್ನು ಮೇಲ್ದರ್ಜೆಗೇರಿಸುತ್ತಿರುವುದನ್ನು ಚೀನಾ ಲಘುವಾಗಿ ಪರಿಗಣಿಸಿಲ್ಲ ಎನ್ನಲಾಗಿದೆ.

ಜಮ್ಮು-ಕಾಶ್ಮೀರದಿಂದ ಅರುಣಾಚಲ ಪ್ರದೇಶದವರೆಗಿನ 3,488 ಕಿ.ಮೀ.ಉದ್ದದ ಭಾರತ-ಚೀನಾ ಗಡಿಯ 220 ಕಿ.ಮೀ.ಉದ್ದದ ವಿಭಾಗವು ಸಿಕ್ಕಿಮ್‌ನಲ್ಲಿದೆ.
ಟಿಬೆಟಿಯನ್ನರ ಆಧ್ಯಾತ್ಮಿಕ ಗುರು ದಲಾಯಿ ಲಾಮಾ ಅವರ ಇತ್ತೀಚಿನ ಅರುಣಾಚಲ ಪ್ರದೇಶ ಭೇಟಿಯ ಕುರಿತೂ ಚೀನಾ ಭಾರತ ಸರಕಾರದ ಬಗ್ಗೆ ಅಸಮಾಧಾನ ಹೊಂದಿದೆ ಎಂದಿರುವ ಮೂಲಗಳು, ಸಿಕ್ಕಿಮ್‌ನಲ್ಲಿ ಗಡಿಯನ್ನು ಗುರುತಿಸಲಾಗಿದ್ದರೂ ಆ ರಾಜ್ಯ ಸೇರಿದಂತೆ ಮುಂಚೂಣಿ ಪ್ರದೇಶಗಳಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಲೂ ಚೀನಾ ಪ್ರಯತ್ನಿಸುತ್ತಿದೆ ಎಂದು ತಿಳಿಸಿದವು.

ಡೋಕಾ ಲಾ ಪ್ರದೇಶದಲ್ಲಿ ಬಿಕ್ಕಟ್ಟು ಉದ್ಭವಿಸಿರುವ ಹಿನ್ನೆಲೆಯಲ್ಲಿ ಗಡಿಯಲ್ಲಿನ ಪರಿಸ್ಥಿತಿಯ ವಿವರಗಳನ್ನೊಳಗೊಂಡ ವರದಿಯೊಂದನ್ನು ಸಿಕ್ಕಿಂ ಸರಕಾರವು ಕೇಂದ್ರಕ್ಕೆ ರವಾನಿಸಿದೆ.

ಭಾರತ ಮತ್ತು ಚೀನಾ ನಡುವಿನ ಬಿಕ್ಕಟ್ಟು ಮುಂದುವರಿದಿರುವುದರಿಂದ ಸುಮಾರು 50 ಜನರನ್ನೊಳಗೊಂಡಿದ್ದ ಕೈಲಾಸ ಮಾನಸ ಸರೋವರ ಯಾತ್ರಿಗಳ ಮೊದಲ ತಂಡವು ನಾಥು ಲಾ ಗಡಿ ಠಾಣೆಯಿಂದಲೇ ವಾಪಸಾಗಿದೆ. ಪ್ರಯಾಣ ಮುಂದುವರಿಸಲು ಚೀನಾದ ಅನುಮತಿಗಾಗಿ ಮೂರು ದಿನಗಳ ಕಾಲ ನಾಥು ಲಾದಲ್ಲಿ ಕಾದು ಕುಳಿತಿದ್ದ ಯಾತ್ರಿಗಳು ಜೂ.23ರಂದು ಗ್ಯಾಂಗ್ಟಕ್‌ಗೆ ಮರಳಿದ್ದಾರೆ. ಈ ವರ್ಷ ನಾಥು ಲಾ ಪಾಸ್‌ನ ಮೂಲಕ ಕೈಲಾಸ ಮಾನಸ ಸರೋವರ ಯಾತ್ರೆ ಮುಂದುವರಿಯುವ ಸಾಧ್ಯತೆಗಳಿ ಲ್ಲವಾದ್ದರಿಂದ ಗ್ಯಾಂಗ್ಟಕ್ ತಲುಪಿದ ಎರಡನೇ ತಂಡದಲ್ಲಿಯ ಯಾತ್ರಿಗಳಿಗೆ ತಮ್ಮ ಮನೆಗಳಿಗೆ ಮರಳುವಂತೆ ಸೂಚಿಸಲಾಗಿದೆ.

ಚೀನಾದ ವಶದಲ್ಲಿರುವ ಟಿಬೆಟ್‌ನಲ್ಲಿರುವ ಮಾನಸ ಸರೋವರಕ್ಕೆ ಸಿಕ್ಕಿಂ ಮಾರ್ಗವನ್ನು 2015ರಲ್ಲಿ ಸಾರ್ವಜನಿಕರಿಗಾಗಿ ಮುಕ್ತಗೊಳಿಸಲಾಗಿತ್ತು.
ಸುಮಾರು 50 ಯಾತ್ರಿಗಳಿರುವ ಮೂರನೇ ತಂಡಕ್ಕೆ ವೀಸಾಗಳನ್ನು ಇನ್ನೂ ನೀಡಲಾ ಗಿಲ್ಲ. ಈ ವರ್ಷ ನಾಥು ಲಾ ಮೂಲಕ ಸುಮಾರು 8-10 ತಂಡಗಳು ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳಲಿದ್ದವು.

ಚೀನಿ ವೀಸಾಗಳನ್ನು ಹೊಂದಿದ್ದರೂ ಸುಮಾರು 100 ಯಾತ್ರಿಗಳನ್ನು ಆ ದೇಶವು ವಾಪಸ್ ಕಳುಹಿಸಿದೆ ಎಂದು ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಮೆಹ್ರಿಷಿ ಅವರು ಮಂಗಳವಾರ ತಿಳಿಸಿದ್ದರು.

ಮಾರ್ಗಮಧ್ಯದ ಸೇತುವೆಯೊಂದು ಮುರಿದಿದ್ದು, ಯಾತ್ರಿಗಳು ಅದನ್ನು ದಾಟುವುದು ಸಾಧ್ಯವಾಗುವುದಿಲ್ಲ ಎಂಬ ಕಾರಣವನ್ನು ಈ ವಾಪಸಾತಿಗೆ ನೀಡಿದೆ ಎಂದು ಮೂಲಗಳು ತಿಳಿಸಿದವು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News