ಮಹಿಳಾ ನಿಲಯದಿಂದ ನಾಪತ್ತೆಯಾದವರು ಮುಂಬೈಗೆ ಪ್ರಯಾಣ
ಮುಂಬೈ, ಜೂ.28: ನಿಟ್ಟೂರಿನಲ್ಲಿರುವ ರಾಜ್ಯ ಮಹಿಳಾ ನಿಲಯದಿಂದ ಜೂ. 25ರಂದು ರಾತ್ರಿ ಪರಾರಿಯಾಗಿದ್ದ ಸುಶೀಲಾ, ರೂಪಾಲಿ ಹಾಗೂ ಅವರ ಮಗು ರಾಜೇಶ್ ಜೂ. 26ರಂದು ಮತ್ಸ್ಯಾಗಂಧಾ ರೈಲಿನಲ್ಲಿ ಮುಂಬೈಗೆ ಪ್ರಯಾಣಿಸಿರುವುದಾಗಿ ಪ್ರತ್ಯಕ್ಷವಾಗಿ ಕಂಡ ಭಯಂದರ್ ನಿವಾಸಿ, ಲೇಖಕಿ ಲತಾ ಸಂತೋಷ್ ಶೆಟ್ಟಿ ಮುದ್ದುಮನೆ ತಿಳಿಸಿದ್ದಾರೆ.
ಲತಾ ಸಂತೋಷ್ ಶೆಟ್ಟಿ ಅದೇ ದಿನ ಮತ್ಸ್ಯಾಗಂಧಾ ರೈಲಿನಲ್ಲಿ ಬಾರಕೂರು ನಿಂದ ಮುಂಬೈಗೆ ಸಾಮಾನ್ಯ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದಾಗ ಈ ಮೂವರನ್ನು ನೋಡಿದ್ದು, ಇಂದು ಪತ್ರಿಕಾ ವರದಿ ಓದಿದ ಲತಾ ಸಂತೋಷ್ ಶೆಟ್ಟಿ ಈ ಕುರಿತು ಪತ್ರಕರ್ತ ರೋನ್ಸ್ ಬಂಟ್ವಾಳ್‌ಗೆ ಮಾಹಿತಿ ನೀಡಿದ್ದಾರೆ.
ಪ್ರಯಾಣದ ವೇಳೆ ಲತಾ ಶೆಟ್ಟಿ ಇವರಲ್ಲಿ ಸುಶೀಲಾರನ್ನು ಮಾತನಾಡಿಸಿದ್ದರು. ‘ನಾವು ಕೊಲ್ಲೂರು ದೇವಸ್ಥಾನದಿಂದ ಬಂದಿದ್ದು ಈಕೆಗೆ ಯಾರೂ ಪೋಷಕರಿಲ್ಲದ ಕಾರಣ ನಮ್ಮೂರಿಗೆ ಕರೆದೊಯ್ಯುತ್ತಿದ್ದೇನೆ’ ಎಂದು ಸುಶೀಲಾ ಇವರ ಬಳಿ ಹೇಳಿದ್ದರು. ಲತಾ ಶೆಟ್ಟಿ ಥಾಣೆ ನಿಲ್ದಾಣದಲ್ಲಿ ಇಳಿಯುವಾಗಲೂ ಅವರು ಅದೆ ಜನರಲ್ ಕೋಚ್‌ನಲ್ಲಿದ್ದು ಕುರ್ಲಾ ಟರ್ಮಿನಲ್ ನತ್ತ ಸಾಗಿದ್ದಾರೆ ಎಂದು ಹೇಳಲಾಗಿದೆ.