ಯುವತಿಗೆ ಚುಡಾವಣೆ: ಪೊಲೀಸರಿಂದ ಸ್ವಯಂಪ್ರೇರಿತ ದೂರು
ಮಂಗಳೂರು, ಜೂ.28: ನಗರದ ಅಲೋಶಿಯಸ್ ಕಾಲೇಜಿನಿಂದ ಬಲ್ಮಠ ರಸ್ತೆಯಾಗಿ ನಡೆದುಕೊಂಡು ಹೋಗುತ್ತಿದ್ದ ಯುವತಿಯೋರ್ವಳಿಗೆ ದ್ವಿಚಕ್ರ ವಾಹನದಲ್ಲಿ ಆಗಮಿಸಿದ ಯುವಕನೋರ್ವ ಚುಡಾಯಿಸಿದ ಬಗ್ಗೆ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲಾಗಿದೆ.
ರಶ್ಮಿ ಶೆಟ್ಟಿ ಎಂಬ ಯುವತಿ ಸೋಮವಾರ ಬಲ್ಮಠ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ದ್ವಿಚಕ್ರ ವಾಹನದಲ್ಲಿ ಈಕೆಯನ್ನು ಹಿಂಬಾಲಿಸಿದ ಯುವಕನೋರ್ವ ಹಾರ್ನ್ ಹಾಕುತ್ತಾ ಚುಡಾಯಿಸುತ್ತಿದ್ದ ಎನ್ನಲಾಗಿದೆ. ಯುವಕನ ವರ್ತನೆಯಿಂದ ಆಕ್ರೋಶಗೊಂಡ ರಶ್ಮಿ ಆರೋಪಿಯ ದ್ವಿಚಕ್ರ ವಾಹನದ ಫೊಟೋ ಮತ್ತು ವಾಹನ ಸಂಖ್ಯೆಯನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರು. ಅಷ್ಟೇ ಅಲ್ಲದೆ ವಾಹನದ ಮಾಲಕತ್ವದ ವಿವರಗಳನ್ನು ಶೋಧಿಸಿ ಫೇಸ್‌ಬುಕ್‌ನಲ್ಲಿ ಹಾಕಿದ್ದರು. ಇದು ರಿಝ್ವಾನ್ ಅಹ್ಮದ್ ಎಂಬಾತನಿಗೆ ಸೇರಿದ ವಾಹನವಾಗಿದ್ದು, ಅದನ್ನು ಚಲಾಯಿಸುತ್ತಿದ್ದುದು ಯಾರೆನ್ನುವುದು ತಿಳಿದು ಬಂದಿಲ್ಲ, ಈ ಬಗ್ಗೆ ಆಕೆ ಈವರೆಗೆ ಪೊಲೀಸರಿಗೆ ದೂರು ನೀಡಿಲ್ಲ. ಇದೀಗ ಪೊಲೀಸರೇ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಸ್ವಯಂ ಪ್ರೇರಿತರಾಗಿ ದೂರು ದಾಖಲಿಸಿಕೊಂಡಿದ್ದಾರೆ.