ಶಾಸ್ತ್ರಿ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಸಚಿನ್ ಕಾರಣ

Update: 2017-06-28 18:44 GMT

ಮುಂಬೈ, ಜೂ.28: ಭಾರತ ಕ್ರಿಕೆಟ್ ತಂಡದ ಆಲ್‌ರೌಂಡರ್ ರವಿಶಾಸ್ತ್ರಿ ಅವರು ಬ್ಯಾಟಿಂಗ್ ಮಾಸ್ಟರ್ ಸಚಿನ್ ತೆಂಡುಲ್ಕರ್ ಅವರ ಸಲಹೆ ಮೇರೆಗೆ ಭಾರತದ ಕ್ರಿಕೆಟ್ ತಂಡದ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ.

ಅನಿಲ್ ಕುಂಬ್ಳೆ ರಾಜೀನಾಮೆಯಿಂದ ತೆರವಾಗಿರುವ ಭಾರತದ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ರವಿಶಾಸ್ತ್ರಿ ಆಸಕ್ತಿನ ಹೊಂದಿರಲಿಲ್ಲ. ಆದರೆ ಸಚಿನ್ ತೆಂಡುಲ್ಕರ್ ಸಲಹೆ ಮೇರೆಗೆ ಅರ್ಜಿ ಸಲ್ಲಿಸಿದ್ದಾರೆ.

ಈ ಹಿಂದೆ ಟೀಮ್ ಇಂಡಿಯಾದ ನಿರ್ದೇಶಕರಾಗಿದ್ದ ರವಿಶಾಸ್ತ್ರಿ ಕಳೆದ ವರ್ಷ ಪ್ರಧಾನ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಆದರೆ ಕೋಚ್ ಆಯ್ಕೆಗೆ ಬಿಸಿಸಿಐ ನೇಮಕ ಮಾಡಿದ್ದ ಸಚಿನ್ ತೆಂಡುಲ್ಕರ್ ನೇತೃತ್ವದ ಕ್ರಿಕೆಟ್ ಸಲಹಾ ಸಮಿತಿ ಶಾಸ್ತ್ರಿ ಅರ್ಜಿಯನ್ನು ತಿರಸ್ಕರಿಸಿತ್ತು. ಅನಿಲ್ ಕುಂಬ್ಳೆಗೆ ಅವಕಾಶ ನೀಡಿತ್ತು.

ಪ್ರಸ್ತುತ ಲಂಡನ್ ಪ್ರವಾಸದಲ್ಲಿರುವ ಸಚಿನ್ ತೆಂಡುಲ್ಕರ್ ಅವರು ಶಾಸ್ತ್ರಿ ಜೊತೆ ಮಾತುಕತೆ ನಡೆಸಿ ತನ್ನ ನಿಲುವನ್ನು ತಿಳಿಸಿದ್ದಾರೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ರವಿ ಶಾಸ್ತ್ರಿ ಪರ ಒಲವು ಹೊಂದಿದ್ದಾರೆ.

ಕಳೆದ ವರ್ಷ ಬಿಸಿಸಿಐ ನೇಮಕ ಮಾಡಿದ್ದ ಸಚಿನ್ ತೆಂಡುಲ್ಕರ್, ಸೌರವ್ ಗಂಗುಲಿ ಮತ್ತು ವಿವಿಎಸ್ ಲಕ್ಷ್ಮಣ್ ನೇತೃತ್ವದ ಕ್ರಿಕೆಟ್ ಸಲಹಾ ಸಮಿತಿ(ಸಿಎಸಿ) ಮುಂದೆ ಕುಂಬ್ಳೆ, ರವಿ ಶಾಸ್ತ್ರಿ ಮತ್ತಿತರರು ಸಂದರ್ಶನಕ್ಕೆ ಹಾಜರಾಗಿದ್ದರು. ಈ ವೇಳೆ ಸೌರವ್ ಗಂಗುಲಿ ಮತ್ತು ವಿವಿಎಸ್ ಲಕ್ಷ್ಮಣ್ ಅವರು ಕುಂಬ್ಳೆ ಪರ ಬ್ಯಾಟಿಂಗ್ ನಡೆಸಿದ್ದರು. ಆದರೆ ಸಚಿನ್ ತೆಂಡುಲ್ಕರ್ ಶಾಸ್ತ್ರಿ ಪರ ಒಲವು ವ್ಯಕ್ತಪಡಿಸಿದ್ದರು. ಆದರೆ ಅಂತಿಮವಾಗಿ ಗಂಗುಲಿ ಮತ್ತು ವಿವಿಎಸ್ ಮಾತಿಗೆ ಮನ್ನಣೆ ನೀಡಿ ಕುಂಬ್ಳೆಗೆ ಕೋಚ್ ಹುದ್ದೆ ನೀಡಲು ಒಪ್ಪಿಕೊಂಡರು.

ಕುಂಬ್ಳೆ ಕೋಚ್ ಹುದ್ದೆಯನ್ನು ವಹಿಸಿಕೊಳ್ಳುವ ತನಕ ಶಾಸ್ತ್ರಿ ಟೀಮ್ ಇಂಡಿಯಾದ ನಿರ್ದೇಶಕರಾಗಿದ್ದರು. ಕೋಚ್ ಹುದ್ದೆ ಕೈತಪ್ಪಿದಾಗ ಶಾಸ್ತ್ರಿ ಟೀಮ್ ಇಂಡಿಯಾದ ನಿರ್ದೇಶಕ ಹುದ್ದೆಯಿಂದ ಕೆಳಗಿಳಿದಿದ್ದರು.

ಕುಂಬ್ಳೆ ಕೋಚ್ ಆಗಿದ್ದಾಗ ಟೀಮ್ ಇಂಡಿಯಾ 2016-17ನೆ ಸಾಲಿನಲ್ಲಿ ಉತ್ತಮ ಪ್ರದರ್ಶನ ನೀಡಿತ್ತು. ಡಂಕೆನ್ ಫ್ಲೆಚೆರ್ ಕೋಚ್ ಹುದ್ದೆಯಿಂದ ನಿರ್ಗಮಿಸಿದಾಗ ತಂಡದ ನಿರ್ದೇಶಕರಾಗಿ ತಂಡದಲ್ಲಿ ಒಗ್ಗಟ್ಟು ಮೂಡಿಸುವಲ್ಲಿ ಶಾಸ್ತ್ರಿ ಶ್ರಮಿಸಿದ್ದರು.

ಇದೀಗ ಶಾಸ್ತ್ರಿ ಅವರೊಂದಿಗೆ ಕೋಚ್ ಹುದ್ದೆಗೆ ಟಾಮ್ ಮೋಡಿ, ರಿಚರ್ಡ್ ಪೈಬಸ್, ವೀರೇಂದ್ರ ಸೆಹ್ವಾಗ್, ಲಾಲ್‌ಚಂದ್ ರಜಪೂತ್, ಆಸ್ಟ್ರೇಲಿಯದ ಮಾಜಿ ವೇಗಿ ಮೆಕ್‌ಡರ್ಮೆಟ್ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ.

 ಕೋಚ್ ಹುದ್ದೆಗೆ ಇಂಜಿನಿಯರ್: ಭಾರತ ಕ್ರಿಕೆಟ್ ತಂಡದ ಕೋಚ್ ಹುದ್ದೆಗೆ ಹಿರಿಯ ಹಾಗೂ ಖ್ಯಾತ ಕ್ರಿಕೆಟಿಗರು ಅರ್ಜಿ ಸಲ್ಲಿಸಿದ ಬೆನ್ನಲ್ಲೆ ಇಂಜಿನಿಯರ್ ಒಬ್ಬರು ಅರ್ಜಿ ಸಲ್ಲಿಸುವ ಮೂಲಕ ಗಮನ ಸೆಳೆದಿದ್ದಾರೆ.

ಗೃಹ ನಿರ್ಮಾಣ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿರುವ 30ರ ಹರೆಯದ ಉಪೇಂದ್ರನಾಥ ಬ್ರಹ್ಮಚಾರಿ ಮಂಗಳವಾರ ಇಮೇಲ್ ಮೂಲಕ ಕೋಚ್ ಹುದ್ದೆ ಗೆ ಅರ್ಜಿ ಸಲ್ಲಿಸಿದ್ದಾರೆ. ಹಿಂದೆ ಯಾವುದಾರೂ ತಂಡದಲ್ಲಿ ಕೋಚ್ ಆಗಿ ಸೇವೆ ಸಲ್ಲಿಸಿದ್ದ ಅನುಭವಿ ಕ್ರಿಕೆಟಿಗರು ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿದ್ದಾರೆ ಎಂದು ಬಿಸಿಸಿಐ ಹೇಳಿದ್ದರೂ, ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ತಕ್ಕ ಪಾಠ ಕಲಿಸಲು ತಾನು ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿರುವುದಾಗಿ ಉಪೇಂದ್ರನಾಥ್ ತಿಳಿಸಿದ್ದಾರೆ.

ಹಿಂದೆ ಗ್ರೇಗ್ ಚಾಪೆಲ್‌ನ್ನು ಟೀಮ್ ಇಂಡಿಯಾದ ಹುದ್ದೆಯಿಂದ ಹೊರದಬ್ಬುವಲ್ಲಿ ಸೌರವ್ ಗಂಗುಲಿ, ಸಚಿನ್ ತೆಂಡುಲ್ಕರ್ ಮತ್ತು ವಿವಿಎಸ್ ಲಕ್ಷ್ಮಣ್ ಪ್ರಮುಖ ಪಾತ್ರ ವಹಿಸಿದ್ದರು. ಅವರ ಹಾದಿಯಲ್ಲೇ ಕೋಚ್‌ನ್ನು ಬದಲಾಯಿಸಲು ವಿರಾಟ್ ಕೊಹ್ಲಿ ಹೆಜ್ಜೆ ಇರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News