ಕೇಂದ್ರ ಸಚಿವರಿಂದ ರೈತರ ಸ್ವಾಭಿಮಾನಕ್ಕೆ ಧಕ್ಕೆ: ರಾಜ್ಯ ರೈತ ಸಂಘ

Update: 2017-06-29 08:45 GMT

ಮಂಗಳೂರು, ಜೂ. 29: ರೈತರ ಸಾಲ ಮನ್ನಾಕ್ಕೆ ಸಂಬಂಧಿಸಿ ಕೇಂದ್ರದ ಹಿರಿಯ ಸಚಿವರಾದ ವೆಂಕಯ್ಯ ನಾಯ್ಡು ಸೇರಿದಂತೆ ಹಲವರು ರೈತರ ಸ್ವಾಭಿಮಾನಕ್ಕೆ ಧಕ್ಕೆ ತರುವ ಹೇಳಿಕೆಗಳನ್ನು ನೀಡಿದ್ದಾರೆ.

ಸಚಿವರ ಹೇಳಿಕೆಗಳನ್ನು ಖಂಡಿಸಿ ಹಾಗೂ ರೈತರ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಜುಲೈ 3ರಂದು ಧರಣಿ ಸತ್ಯಾಗ್ರಹ ನಡೆಸುವುದಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಿಳಿಸಿದೆ.

ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಸಂಘದ ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಕಾರ್ಯರ್ಶಿ ರವಿಕಿರಣ್ ಪುಣಚ, ರಾಜ್ಯ ಕೃಷಿ ವಲಯ ಬಿಕ್ಕಟ್ಟಿನಲ್ಲಿದೆ. ಸತತ ಬರಗಾಲ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ರಾಜ್ಯದ ಹಲವೆಡೆ ಅತಿವೃಷ್ಟಿ ಹಾಗೂ ಬರಗಾಲವಿದೆ. ಇಂತಹ ಸಂದರ್ಭದಲ್ಲಿ ಸಾಲ ಮನ್ನಾಕ್ಕೆ ಒತ್ತು ನೀಡುವುದು ಬಿಟ್ಟು ಕೇಂದ್ರ ಸರಕಾರದ ಸಚಿವರು ಬೇಜವಾಬ್ದಾರಿಯುತ ಹೇಳಿಕೆಗಳನ್ನು ನೀಡಿ ಅನ್ನದಾತರನ್ನು ಅವಮಾನಿಸಿದ್ದಾರೆ. ಅವರು ತಮ್ಮ ಹೇಳಿಕೆಯನ್ನು ಹಿಂಪಡೆದು ಕ್ಷಮೆಯಾಚಿಸಬೇಕು ಎಂದು ಅವರು ಒತ್ತಾಯಿಸಿದರು.

ವಾಣಿಜ್ಯ ಬ್ಯಾಂಕ್‌ಗಳಲ್ಲಿರುವ ರೈತರ ಎಲ್ಲಾ ಕೃಷಿ ಸಾಲಗಳನ್ನು ಕೇಂದ್ರ ಸರಕಾರ ಮನ್ನಾ ಮಾಡಬೇಕು. ಪ್ರಭಾವಿಗಳ ಆರು ಲಕ್ಷ ಕೋಟಿ ಸಾಲ ಮನ್ನಾ ಮಾಡಿರುವಾಗ ರೈತರ 52 ಸಾವಿರ ಕೋಟಿ ಮನ್ನಾ ಮಾಡುವುದು ಕೇಂದ್ರದ ಕರ್ತವ್ಯವಾಗಿದೆ.

ರಾಜ್ಯ ಸರಕಾರ 50,000 ರೂ.ಗಳ ರೈತರ ಬೆಳೆ ಸಾಲ ಮನ್ನಾ ಮಾಡಿದ್ದು ಸ್ವಾಗತಾರ್ಹ, ಇದರ ಜತೆ ಉಳಿದ ಸಾಲಗಳನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು. ಮುಂದೆ ಬೆಳೆ ಬೆಲೆಯಲು ಈ ಸಾಲಿಗೆ ಹೊಸ ಸಾಲ ವ್ಯವಸ್ಥೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ರೈತರಿಗೆ ವೈಜ್ಞಾನಿಕ ಬೆಳೆ ನಷ್ಟ ಪರಿಹಾರ ಮತ್ತು ವೈಜ್ಞಾನಿಕ ಬೆಲೆ ನಿಗದಿ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟು ಜುಲೈ 13ರಂದು ಬೆಳಗ್ಗೆ 11 ಗಂಟೆಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಯಲಿದೆ ಎಂದು ಅವರು ಹೇಳಿದರು.

ಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಭಟ್ ಕೊಜಂಬೆ, ಕೋಶಾಧಿಕಾರಿ ಮಂಜುನಾಥ ರೈ, ತಾರನಾಥ ಗೌಡ, ಮಂಜುನಾಥ ಪರಾರಿ, ಪ್ರೇಮನಾಥ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News