ಸದನಕ್ಕೆ ಬಂದ ವ್ಯಕ್ತಿಯೊಬ್ಬರನ್ನು ಹೊರದಬ್ಬಿದ ಸದಸ್ಯರು
ಉಡುಪಿ, ಜೂ. 29: ಉಡುಪಿ ನಗರಸಭೆಯ ಸಾಮಾನ್ಯಸಭೆಯಲ್ಲಿ ರಸ್ತೆ ಉದ್ಘಾಟನೆ ವಿಷಯಕ್ಕೆ ಸಂಬಂಧಿಸಿ ಸ್ಪಷ್ಟನೆ ನೀಡಲು ಸದಸ್ಯರೊಬ್ಬರು ಸದನಕ್ಕೆ ಕರೆಸಿದ ನಾಗರಿಕರೊಬ್ಬರನ್ನು ಆಡಳಿತ ಪಕ್ಷದ ಸದಸ್ಯರು ಹೊರದಬ್ಬಿರುವ ಘಟನೆ ಇಂದು ನಡೆದಿದ್ದು, ಇದರಿಂದ ಸಭೆಯಲ್ಲಿ ಕೊಲಾಹಲ ಉಂಟಾಗಿ ಇಡೀ ಸಭೆಯನ್ನೇ ಅರ್ಧಕ್ಕೆ ಮೊಟಕುಗೊಳಿಸಲಾಯಿತು.
ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಕಡಿಯಾಳಿ ವಾರ್ಡಿನ ಸದಸ್ಯೆ ಗೀತಾ ಶೇಟ್ ಮಾತನಾಡಿ, ಗುಂಡಿಬೈಲು ಪಾಡಿಗಾರ್ ಗೇಟ್ ರಸ್ತೆಯ ಉದ್ಘಾಟನೆಯನ್ನು ನನ್ನ ಗಮನಕ್ಕೆ ತಾರದೆ ಉದ್ಘಾಟಿಸಲಾಗಿದೆ. ಎಲ್ಲಿಯೂ ನನ್ನ ಹೆಸರನ್ನು ಉಲ್ಲೇಖಿಸಿಲ್ಲ. ನಾನು ಹೆಸರಿಗೆ ಮಾತ್ರ ಸದಸ್ಯೆ. ಇನ್ನು ಈ ಸ್ಥಾನದಲ್ಲಿ ಮುಂದುವರೆಯುವುದಿಲ್ಲ ಎಂದು ಹೇಳಿ ಅಧ್ಯಕ್ಷರಿಗೆ ರಾಜೀನಾಮೆ ಪತ್ರ ಒಪ್ಪಿಸಿದರು.
ಇದಕ್ಕೆ ಪ್ರತಿಯಾಗಿ ಅದೇ ವಾರ್ಡಿನ ನಾಮನಿರ್ದೇಶಿತ ಸದಸ್ಯ ಸತೀಶ್ ಪುತ್ರನ್ ಮಾತನಾಡಿ, ಗೀತಾ ಶೇಟ್ ಅಧಿಕಾರಿಗಳ ಗಮನಕ್ಕೆ ತಾರದೆ ಕಡಿಯಾಳಿ ಶಾಲೆ ಬಳಿ ರಸ್ತೆಯನ್ನು ಉದ್ಘಾಟಿಸಿದ್ದಾರೆ ಎಂದು ಆರೋಪಿಸಿ ಅದರ ಛಾಯಾಚಿತ್ರವನ್ನು ಸಭೆಯಲ್ಲಿ ಪ್ರದರ್ಶಿಸಿದರು. ಇದಕ್ಕೆ ಗೀತಾ ಶೇಟ್ ಸ್ಪಷ್ಟನೆ ನೀಡಿದರು.
ಆದರೆ ವಿಪಕ್ಷ ಸದಸ್ಯರು ಇದೇ ವಿಚಾರದಲ್ಲಿ ಗದ್ದಲ ಎಬ್ಬಿಸಿ ಮಹಿಳೆಗೆ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು. ಆದರೆ ಅಧ್ಯಕ್ಷರು, ವಿಪಕ್ಷದ ಸದಸ್ಯರು ಕೇಳಿದ ಬೇರೆ ಪ್ರಶ್ನೆಗೆ ಉತ್ತರಿಸಲು ಮುಂದಾದರು. ಇದರಿಂದ ಆಡಳಿತ ಹಾಗೂ ವಿಪಕ್ಷ ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆಯಿತು.
ಈ ಸಂದರ್ಭ ಸದಸ್ಯೆ ಗೀತಾ ಶೇಟ್, ಸದಸ್ಯರೊಬ್ಬರು ಪ್ರದರ್ಶಿಸಿದ ರಸ್ತೆ ಉದ್ಘಾಟನೆಯ ಫೋಟೊಗೆ ಸ್ಪಷ್ಟನೆ ನೀಡಲು ಸ್ಥಳೀಯರಾದ ರಾನಿ ಡಿಮೆಲ್ಲೊ ಎಂಬವರನ್ನು ಸದನದೊಳಗೆ ಕರೆದುಕೊಂಡು ಬಂದು, ಅಧ್ಯಕ್ಷರಿಂದ ಮೈಕ್ ಪಡೆದು ಅವರಿಗೆ ನೀಡಿದರು.
ರಾನಿ ಡಿಮೆಲ್ಲೊ ಮೈಕ್ ಹಿಡಿದು ಮಾತನಾಡಲು ಮುಂದಾಗಿದ್ದು, ಈ ಸಂದರ್ಭ ಆಡಳಿತ ಪಕ್ಷದ ಸದಸ್ಯರಾದ ರಮೇಶ್ ಪೂಜಾರಿ ಸಹಿತ ಇತರರು ಅವರ ಕೈಯಿಂದ ಮೈಕ್ ಕಿತ್ತುಕೊಂಡು ಸಭೆಗೆ ಸಾರ್ವಜನಿಕರು ಬಂದು ಮಾತನಾಡಲು ಅವಕಾಶ ಇಲ್ಲ ಎಂದು ಹೇಳಿ ಅವರನ್ನು ಹೊರ ದೂಡಿದರು. ಈ ವೇಳೆ ಇಡೀ ಸಭೆಯಲ್ಲಿ ಕೋಲಾಹಲ ಉಂಟಾಯಿತು.
ಈ ಸಂದರ್ಭ ವಿಪಕ್ಷ ಸದಸ್ಯರು ಆಡಳಿತ ಪಕ್ಷದ ವಿರುದ್ಧ ದಿಕ್ಕಾರಗಳನ್ನು ಕೂಗಿದರು. ಸಭೆ ನಡೆಸಲು ಅವಕಾಶ ನೀಡದೆ ಧರಣಿ ನಡೆಸಿದರು. ಈ ಹಿನ್ನೆಲೆಯಲ್ಲಿ ಅಧ್ಯಕ್ಷರು ಸಭೆಯನ್ನು ರದ್ದುಗೊಳಿಸಿ ಹೊರ ನಡೆದರು.
‘ನನ್ನ ವಾರ್ಡಿನ ಸದಸ್ಯೆಯ ಆಹ್ವಾನದಂತೆ ಸಭೆಗೆ ಬಂದ ನನ್ನ ಮೇಲೆ ಸದಸ್ಯರು ಹಲ್ಲೆ ನಡೆಸಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ’ ಎಂದು ತಿಳಿಸಿರುವ ರಾನಿ ಡಿಮೆಲ್ಲೊ ಉಡುಪಿ ಅಜ್ಜರಕಾಡು ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
‘ಸಭೆಗೆ ಹೊರಗಿನವರು ಬಂದು ಮಾತನಾಡಲು ಅವಕಾಶ ಇಲ್ಲ. ಆ ರೀತಿ ಬಂದವರನ್ನು ಸದಸ್ಯರು ಹೊರಗೆ ಕಳುಹಿಸಿದ್ದಾರೆ. ಆದರೆ ಅಂತವರಿಗೂ ವಿಪಕ್ಷ ಸದಸ್ಯರು ಬೆಂಬಲ ಸೂಚಿಸಿ ರಾಜಕೀಯ ಮಾಡುತ್ತಿದ್ದಾರೆ. ಒಳಗೆ ಬಂದ ವ್ಯಕ್ತಿ ನಮ್ಮ ಸದಸ್ಯರ ಅಂಗಿಗೆ ಕೈ ಹಾಕಿ ದೂಡಿದ್ದಾರೆ’ ಎಂದು ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಆರೋಪಿಸಿದರು.