×
Ad

ಸಂವಿಧಾನವನ್ನು ಗೌರವಿಸಿ ಅನುಸರಿಸುವ ಮೂಲಕ ಪ್ರಜಾಪ್ರಭುತ್ವ ಉಳಿಸಲು ಪ್ರಯತ್ನಿಸಿ: ಎಲ್. ಹನುಮಂತಯ್ಯ

Update: 2017-06-29 17:02 IST

ಬೆಳ್ತಂಗಡಿ. ಜೂ.29: ಪ್ರಾಣಿಗಳ ಹೆಸರಿನಲ್ಲಿ ರಾಜಕೀಯ ಮಾಡಿ, ಬಹುಸಂಸ್ಕೃತಿಯ ನಾಡಿನಲ್ಲಿ ಆಹಾರದ ಹಕ್ಕನ್ನೇ ಕಸಿದುಕೊಳ್ಳುವಂತಹ ಪ್ರಯತ್ನಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ ನಮ್ಮ ಸಂವಿಧಾನವನ್ನು ಗೌರವಿಸಿ ಅನುಸರಿಸುವ ಮೂಲಕ ಪ್ರಜಾಪ್ರಭುತ್ವ ಉಳಿಸಲು ಪ್ರಯತ್ನಿಸಬೇಕಾಗಿದೆ ಎಂದು ಹಿರಿಯ ಚಿಂತಕರಾದ ಎಲ್. ಹನುಮಂತಯ್ಯ ಹೇಳಿದರು.

ಅವರು ಬೆಳ್ತಂಗಡಿಯ ಗುರುನಾರಾಯಣ ಸಭಾಭವನದಲ್ಲಿ ಕರಾವಳಿ ನೋಟ ಹಾಗೂ ಜೈಕನ್ನಡಮ್ಮ ಕೃತಿಗಳ ಅನಾವರಣ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ಸಮಾಜವನ್ನು ಜಾತಿ ಧರ್ಮಗಳ ಹೆಸರಿನಲ್ಲಿ ಒಡೆಯುವ ಕಾರ್ಯ ನಡೆಯುತ್ತಿದೆ. ಬಹುಸಂಸ್ಕೃತಿಗಳನ್ನು ಗೌರವಿಸುತ್ತಾ ಬಂದಿದ್ದ ಭಾರತದಲ್ಲಿ ಆಹಾರ ಕ್ರಮವನ್ನು ಸರಕಾರಗಳು ನಿರ್ಧರಿಸುವ ಹಂತಕ್ಕೆ ಬೆಳೆದಿರುವುದು ಪ್ರಜಾಪ್ರಭುತ್ವಕ್ಕೆ ಶೋಭೆ ತರುವಂತದ್ದಲ್ಲ ಎಂದ ಅವರು, ಗಾಂಧಿಯನ್ನು ಹತ್ಯೆ ಮಾಡಿದ ಗೋಡ್ಸೆಗೆ ಮಂದಿರ ಕಟ್ಟುವ ಆತನೇ ಆದರ್ಶಎನ್ನುವ ಹಂತಕ್ಕೆ ಬಂದಿರುವುದೂ ನಾಚಿಕೆಗೇಡು ಎಂದರು.

ಬುದ್ದಿವಂತರ ಜಿಲ್ಲೆಯಾದ ಕರಾವಳಿ ಜಿಲ್ಲೆಯಲ್ಲಿ ಇದೀಗ ಕೋಮು ದ್ವೇಷ ಹರಡುವ ಕಾರ್ಯ ನಡೆಯುತ್ತಿದೆ. ಸಹಬಾಳ್ವೆಯನ್ನು ಬಯಸುವವರು ಹೆಚ್ಚಿದ್ದರೂ ಅವರ ಧ್ವನಿ ಕ್ಷೀಣಿಸುತ್ತಿದೆ. ಅಂತಹ ಧ್ವನಿಗಳನ್ನು ಒಟ್ಟುಸೇರಿಸಿ ಗಟ್ಟಿಯಾಗಿಸುವ ಅಗತ್ಯವಿದೆ. ಮಡೆಸ್ನಾನದಂತಹ ಮೌಢ್ಯಗಳನ್ನು ನಂಬಿಕೆಯೆಂದು ಬಿಂಬಿಸುವ ಕಾರ್ಯ ಇಲ್ಲಿ ನಡೆಯುತ್ತಿದೆ. ಜನರನ್ನು ಎಚ್ಚರಿಸಿ ವೈಜ್ಞಾನಿಕ ಪ್ರಜ್ಞೆ ಬೆಳೆಸಬೇಕಾಗಿದೆ ಎಂದರು.

ಪುಸ್ತಕಗಳ ಅನಾವರಣಗೊಳಿಸಿ ಮಾತನಾಡಿದ ಹಿರಿಯ ಸಾಹಿತಿ ಕುಂ ವೀರಭದ್ರಪ್ಪ,  ಸಾಹಿತ್ಯ ಮನುಷ್ಯನ ಘನತೆಯನ್ನು ಹೆಚ್ಚಿಸುತ್ತದೆ, ಪುಸ್ತಕಗಳ ಓದಿನಿಂದ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣವಾಗಲು ಸಾಧ್ಯ. ಇಂದು ಧಾರ್ಮಿಕ ಕೇಂದ್ರಗಳ ಮುಂದಿರುವ ಸರತಿಯ ಸಾಲನ್ನು ವಾಚನಾಲಯಗಳ ಮುಂದೆ ನೋಡುವಂತಾಗಬೇಕು ಎಂದರು.

ಎಲ್ಲೆಂದರಲ್ಲಿ ದೇವಸ್ಥಾನಗಳು ದೇವಮಾನವರು ಸೃಷ್ಟಿಯಾಗುತ್ತಾರೆ. ಇದು ಅಪಾಯಕಾರಿ ಬೆಳವಣಿಗೆಯಾಗಿದೆ. ದಿನ ಬೆಳಗಾದರೆ ಮಾಧ್ಯಮಗಳ ಮೂಲಕ ಜ್ಯೋತಿಷಿಗಳು ಸಮಾಜದ ಆರೋಗ್ಯ ಕೆಡಿಸುತ್ತಿದ್ದಾರೆ. ಇಂತಹ ಬೆಳವಣಿಗೆಗಳ ನಡುವೆ ಮಾಧ್ಯಮಗಳು ಹೆಚ್ಚು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕಾಗಿದೆ ಎಂದರು.

ಅಂತರಂಗ ಹಾಗೂ ಬಹಿರಂಗ ಶುದ್ಧಿಯಾದರೆ ಮಾತ್ರ ಶ್ರೇಷ್ಠ ಸಾಹಿತ್ಯ ಹೊರಹೊಮ್ಮಲು ಸಾಧ್ಯವಿದೆ. ಸಾಹಿತ್ಯವನ್ನು ಮನಸ್ಸಿಟ್ಟು ಓದಿದಾಗ ಆ ಸಾಹಿತಿಗಳು ಹೃದಯದಲ್ಲಿ ವಾಸಿಸುತ್ತಾರೆ. ನಮ್ಮ ಶಿಕ್ಷಣ ಕ್ರಮ ಹಾಗೂ ಮೊಬೈಲ್‌ಗಳು ಮಕ್ಕಳನ್ನು ಓದಿನಿಂದ ದೂರ ಮಾಡುತ್ತಿದೆ. ಇದು ಅಪಾಯಕಾರಿ ಬೆಳವಣಿಗೆಯಾಗಿದೆ. ದಲಿತರ ಕೇರಿಗಳಿಗೆ ಶಾಲೆಗಳನ್ನು ತಂದು ಅಲ್ಲಿಗೆ ದಲಿತ ಮಕ್ಕಳನ್ನು ಕರೆತಂದು ಅವರಿಗೆ ಹೆಸರಿಟ್ಟು ಕರೆದು ಶಿಕ್ಷಣ ನೀಡಲು ಮುಂದಾದಾಗ ಸಮಾಜದಲ್ಲಿ ಎದುರಿಸಬೇಕಾಗಿ ಬಂದ ಸವಾಲುಗಳನ್ನು ವಿವರಿಸಿದ ಅವರು ಬದಲಾವಣೆಗಳು ಸುಲಭವಾಗಿ ಬರಲು ಸಾಧ್ಯವಿಲ್ಲ ಎಂದರು.
 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ತಂಗಡಿ ಶಾಸಕ ಕೆ. ವಸಂತ ಬಂಗೇರ ವಹಿಸಿ ಶುಭ ಹಾರೈಸಿದರು. ಪುಸ್ತಕಗಳ ಬಗ್ಗೆ ಪತ್ರಕರ್ತೆ ಜ್ಯೋತಿ ಇರ್ವತ್ತೂರು ಹಾಗೂ ಹರಿಪ್ರಸಾದ್ ಅಡ್ಪಂಗಾಯ ಮಾತನಾಡಿದರು. ವೇದಿಕೆಯಲ್ಲಿ ರೂಪಾ ಪ್ರಕಾಶನದ ಯು.ಎನ್ ಮಹೇಶ್ ಉಪಸ್ಥಿತರಿದ್ದರು. ಅರವಿಂದ ಚೊಕ್ಕಾಡಿ ಸ್ವಾಗತಿಸಿದರು. ಅಜಿತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು, ಪತ್ರಿಕೆಯ ಸಂಪಾದಕ ದೇವಿಪ್ರಸಾದ್ ವಂದಿಸಿದರು. 
 

  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News