×
Ad

ಧ್ವನಿ ಎತ್ತಿದ ಅಲೋಶಿಯಸ್ ಆಡಳಿತ ಮಂಡಳಿ, ವಿದ್ಯಾರ್ಥಿಗಳು

Update: 2017-06-29 17:19 IST

ಮಂಗಳೂರು, ಜೂ. 29: ನಗರದ ಅಂಬೇಡ್ಕರ್ ವೃತ್ತದಿಂದ ಲೈಟ್‌ಹೌಸ್- ಕ್ಯಾಥಲಿಕ್ ಕ್ಲಬ್‌ವರೆಗಿನ ರಸ್ತೆಗೆ ಸಂತ ಅಲೋಶಿಯಸ್ ರಸ್ತೆ ಎಂದಿರುವುದನ್ನು ಮರು ನಾಮಕರಣ ಮಾಡಲು ಅವಕಾಶ ನೀಡುವುದಿಲ್ಲ. ನಮ್ಮ ಸಂಸ್ಥೆಯ ಬೇಡಿಕೆಯನ್ನು ಅಗೌರವಿಸಿ ರಸ್ತೆಗೆ ಬೇರೆ ಹೆಸರಿನಲ್ಲಿ ಉದ್ಘಾಟನೆ ಮಾಡಿದ್ದಲ್ಲಿ ಅದಕ್ಕೆ ಪ್ರತಿಭಟನಾತ್ಮಕ ಉತ್ತರ ನೀಡುತ್ತೇವೆ ಎಂದು ಸಂತ ಅಲೋಶಿಯಸ್ ಸಂಸ್ಥೆಯ ಆಡಳಿತ ಮಂಡಳಿ, ಹಳೆ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿ ಸಮೂಹ ಧ್ವನಿ ಎತ್ತಿದ್ದಾರೆ.

ರಸ್ತೆಗೆ ಮುಲ್ಕಿ ಸುಂದರ ರಾಮ ಶೆಟ್ಟಿ ನಾಮಕರಣ ಮಾಡಲು ಮುಂದಾಗಿರುವುದನ್ನು ವಿರೋಧಿಸಿ ಸಂತ ಅಲೋಶಿಯಸ್ ಕಾಲೇಜಿನ ಎರಿಕ್ ಮಥಾಯಸ್ ಸಭಾಂಗಣದಲ್ಲಿ ಇಂದು ಆಯೋಜಿಸಲಾದ ಪ್ರತಿಭಟನಾ ಸಭೆಯಲ್ಲಿ ಈ ಧ್ವನಿ ವ್ಯಕ್ತವಾಯಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಕಾಲೇಜು ಹಳೆ ವಿದ್ಯಾರ್ಥಿ ಎನ್.ಜಿ. ಮೋಹನ್, ನಗರದ ಬೇರೆ ಯಾವುದೇ ರಸ್ತೆಗೆ ಮುಲ್ಕಿ ಸುಂದರ ರಾಮ ಶೆಟ್ಟಿ ನಾಮಕರಣದ ಬಗ್ಗೆ ನಮಗೆ ಅಭ್ಯಂತರವಿಲ್ಲ. ಆದರೆ ಈಗಾಗಲೇ ಸಂತ ಅಲೋಶಿಯಸ್ ಕಾಲೇಜು ಎಂಬುದಾಗಿ ಗುರುತಿಸಿಕೊಂಡಿರುವ ರಸ್ತೆಗೆ ಮರು ನಾಮಕರಣ ಮಾಡುವುದಕ್ಕೆ ಸಂಸ್ಥೆಯ ಹಳೆ ವಿದ್ಯಾರ್ಥಿಗಳ ವಿರೋಧವಿದೆ. ಈ ಬಗ್ಗೆ ಸಂಬಂಧಪಟ್ಟವರಿಗೆ ಸಲಹೆಯನ್ನು ನೀಡಲಾಗಿದ್ದರೂ ಅವರದನ್ನು ತಿರಸ್ಕರಿಸಿದ್ದಾರೆ. ಅದರಿಂದಾಗಿ ನಾವಿಂದು ಹೋರಾಟದ ಹಾದಿ ಹಿಡಿಯುವುದು ಅನಿವಾರ್ಯವಾಯಿತು. ಯಾವುದೇ ಕಾರಣಕ್ಕೂ ಜನಪ್ರತಿನಿಧಿಗಳು ಮರು ನಾಮಕರಣಕ್ಕೆ ಅವಕಾಶ ನೀಡಬಾರದು. ಇಲ್ಲವಾದಲ್ಲಿ ನಾವು ಮುಂದಿನ ಹೆಜ್ಜೆಗೆ ಸಿದ್ಧರಾಗಿದ್ದು, ಹಳೆ ವಿದ್ಯಾರ್ಥಿಗಳು ಈ ಹೋರಾಟಕ್ಕೆ ಕೈಜೋಡಿಸಲಿದ್ದಾರೆ ಎಂದು ಹೇಳಿದರು.

ಶಿಕ್ಷಣ ಸಂಸ್ಥೆಯ ಗೌರವವನ್ನು ಕಸಿಯಬೇಡಿ:

ಶಿಕ್ಷಣ ಸಂಸ್ಥೆ ಎಂಬುದು ಭವಿಷ್ಯಗಳನ್ನು ರೂಪಿಸುವಂತಹವುಗಳು. ಸಂತ ಅಲೋಶಿಯಸ್ ಕಾಲೇಜು 137 ವರ್ಷಗಳ ಇತಿಹಾಸವನ್ನು ಹೊಂದಿದೆ. ಇಲ್ಲಿ ನಮ್ಮಂತಹ ಲಕ್ಷಾಂತರ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ನಾನಾ ಕ್ಷೇತ್ರಗಳಲ್ಲಿ ಗುರುತಿಸಿಕೊಂಡು ಕೊಡುಗೆಗಳನ್ನು ನೀಡಿದ್ದಾರೆ. ಅಂತಹ ಶಿಕ್ಷಣ ಸಂಸ್ಥೆಗೆ ನೀಡಲಾಗಿರುವ ಗೌರವವನ್ನು ಯಾವುದೇ ಕಾರಣಕ್ಕೂ ಹಿಂಪಡೆಯಲು ಬಿಡುವುದಿಲ್ಲ. ನಾವೆಲ್ಲಾ ಸಂಸ್ಥೆಯ ಜತೆಗಿದ್ದೇವೆ ಎಂದು ಕಾಲೇಜಿನ ವಿದ್ಯಾರ್ಥಿ ನಾಯಕ ಅಮನ್ ವಿದ್ಯಾರ್ಥಿಗಳ ಪರವಾಗಿ ಧ್ವನಿ ಎತ್ತಿದರು.

ಬೋಳುಗುಡ್ಡೆಯನ್ನು ಶಿಕ್ಷಣ ಕೇಂದ್ರವಾಗಿಸಿದ ಸೇವೆಯನ್ನು ಕಡೆಗಣಿಸದಿರಿ:

ಒಂದು ಕಾಲದಲ್ಲ ಬೋಳು ಗುಡ್ಡೆಯಾಗಿದ್ದ ಹ್ಯಾಟ್ ಹಿಲ್‌ನಲ್ಲಿ ಜೆಸ್ಯೂಟ್ ಪಾದ್ರಿಗಳ ಫಲಾಪೇಕ್ಷೆಯಿಲ್ಲದ ಸೇವೆ ಹಾಗೂ ತ್ಯಾಗದಿಂದಾಗಿ ಅಂತಾರಾಷ್ಟ್ರೀಯವಾಗಿ ಖ್ಯಾತಿ ಪಡೆದ ಶಿಕ್ಷಣ ಸಂಸ್ಥೆಯೊಂದು ರೂಪು ಪಡೆದಿದೆ. ಆ ಕೊಡುಗೆಯ ಸ್ಮರಣಾರ್ಥ ಸುಮಾರು 40 ವರ್ಷಗಳ ಹಿಂದೆಯೇ ಈ ರಸ್ತೆಗೆ ಸಂತ ಅಲೋಶಿಯಸ್ ರಸ್ತೆಯಾಗಿ ಗುರುತಿಸಿ ನಾಮಫಲಕವನ್ನು ಹಾಕಲಾಗಿದೆ. ಅದು ಇಂದಿಗೂ ಎಂಸಿಸಿ ಬ್ಯಾಂಕ್‌ನ ಎದುರು ಇದ್ದು, ಅದು ಹಳೆಗನ್ನಡದಲ್ಲಿ ಇರುವುದು. ಅದು ಸಾಕಷ್ಟು ವರ್ಷಗಳ ಹಿಂದೆ ಸಂಸ್ಥೆಗೆ ನೀಡಲಾದ ಗೌರವ ಎಂಬುದುಕ್ಕೆ ಸಾಕ್ಷಿಯಾಗಿದೆ. ಅದಕ್ಕಿಂತಲೂ ಹೆಚ್ಚಿನ ದಾಖಲೆ ಬೇರೇನೂ ಬೇಕಾಗಿಲ್ಲ. ಹಾಗಾಗಿ ರಸ್ತೆಗೆ ಮರು ನಾಮಕರಣವನ್ನು ಆಡಳಿತ ಮಂಡಳಿ, ವಿದ್ಯಾರ್ಥಿಗಳು ಹಾಗೂ ಹಳೆ ವಿದ್ಯಾರ್ಥಿಗಳ ಜತೆಗೆ ಕಾಲೇಜಿನ ಶಿಕ್ಷಕ ವರ್ಗ, ಸಿಬ್ಬಂದಿಗಳು ಕೂಡಾ ವಿರೋಧಿಸಿ ಧ್ವನಿ ಎತ್ತಿದ್ದೇವೆ. ನಮ್ಮ ವಿರೋಧವನ್ನು ಲೆಕ್ಕಿಸದೆ ಉದ್ಘಾಟನೆ ನಡೆದರೆ ಅಲ್ಲಿಯೂ ನಮ್ಮ ಧ್ವನಿಯನ್ನು ಎತ್ತಲಿದ್ದೇವೆ ಎಂದು ಕಾಲೇಜಿನ ಕುಲ ಸಚಿವ ಡಾ.ಎ.ಎಂ. ನರಹರಿ ಹೇಳಿದರು.

ಮರು ನಾಮಕರಣ ಕೈಬಿಡುವವರೆಗೆ ಹೋರಾಟ:

ಮಾನವ ಶ್ರಮ ಹಾಗೂ ದೈವದತ್ತವಾಗಿ ಈ ರಸ್ತೆಗೆ ಸಂತ ಅಲೋಶಿಯಸ್ ರಸ್ತೆ ಎಂದು ಹೆಸರಿಸಲಾಗಿದೆ. ಮಾನವ ಶ್ರಮ ಹಾಗೂ ದೈವಿಕವಾಗಿ ದೊರೆತ ಗೌರವವನ್ನು ಯಾವುದೇ ರೀತಿಯಲ್ಲೂ ಕಸಿದುಕೊಳ್ಳದೆ ಪ್ರಾಕೃತಿಕ ನ್ಯಾಯವನ್ನು ಒದಗಿಸಬೇಕು. ನಾವು ಹಿಂದೆಯೂ, ಮುಂದೆ ಹಾಗೂ ಎಂದೆಂದೂ ಈ ರಸ್ತೆಯನ್ನು ಸಂತ ಅಲೋಶಿಯಸ್ ರಸ್ತೆ ಎಂದೇ ಕರೆಯುತ್ತೇವೆ ಮತ್ತು ಈ ನಿಟ್ಟಿನಲ್ಲಿ ಹೋರಾಟವನ್ನೂ ಮುಂದುವರಿಸುತ್ತೇವೆ. ಈ ರಸ್ತೆಯ ಮರು ನಾಮಕರಣವನ್ನು ಕೈ ಬಿಡುವವರೆಗೆ ನಮ್ಮ ಹೋರಾಟ ನಡೆಯಲಿದೆ ಎಂದು ಪದವಿ ಕಾಲೇಜಿನ ಪ್ರಾಂಶುಪಾಲ ರೆ.ಫಾ. ಪ್ರವೀಣ್ ಮಾರ್ಟಿಸ್ ನುಡಿದರು.

ಆರಂಭದಲ್ಲಿ ಕಾಲೇಜಿನ ಉಪ ಪ್ರಾಂಶುಪಾಲ ಡಾ. ರಿಚ್ಚರ್ಡ್ ಗೊನ್ಸಾಲ್ವಿಸ್ ಮಾತನಾಡಿ, ಈ ರಸ್ತೆ ಲೈಟ್ ಹಿಲ್ ರಸ್ತೆಯಾಗಿ ಗುರುತಿಸಿಕೊಂಡಿದ್ದರೂ ಸುಮಾರು 40 ವರ್ಷಗಳಿಗೂ ಮೊದಲು ಈ ರಸ್ತೆಗೆ ಸಂತ ಅಲೋಶಿಯಸ್ ರಸ್ತೆಯಾಗಿ ನಾಮಫಲಕ ಹಾಕಲಾಗಿದೆ. ಹಾಗಿರುವಾಗ ಸುದೀರ್ಷ ಇತಿಹಾಸವನ್ನು ಹೊಂದಿರುವ ಶಿಕ್ಷಣ ಸಂಸ್ಥೆಗೆ ಯಾವುದೇ ರೀತಿಯ ಮಾಹಿತಿ ನೀಡದೆ ಮರು ನಾಮಕರಣಕ್ಕೆ ಮುಂದಾಗಿರುವುದು ಬೇಸರದ ಸಂಗತಿ ಎಂದರು.

ಸಾಂಕೇತಿಕವಾಗಿ ನಡೆದ ಪ್ರತಿಭಟನಾ ಸಭೆಯಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು, ಉಪನ್ಯಾಸಕರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕ್ಯಾಂಪಸ್‌ನೊಳಗೂ ಪ್ರತಿಭಟನೆಗೆ ಅವಕಾಶವಿಲ್ಲ!

ನಗರದಲ್ಲಿ ಸೆಕ್ಷನ್ 144 ವಿಧಿಸಲಾಗಿರುವ ಹಿನ್ನೆಲೆಯಲ್ಲಿ ಕಾಲೇಜಿನ ಆವರಣದೊಳಗೂ ಪ್ರತಿಭಟನೆ ನಡೆಸುವಂತಿಲ್ಲ ಎಂದು ಪೊಲೀಸರು ನೋಟಿಸ್ ನೀಡುವ ಮೂಲಕ ಪ್ರಜಾಪ್ರಭುತ್ವದಲ್ಲಿ ನ್ಯಾಯಕ್ಕಾಗಿ ಧ್ವನಿ ಎತ್ತುವ ಪ್ರಕ್ರಿಯೆಯನ್ನೂ ಹತ್ತಿಕ್ಕುವ ಪ್ರಯತ್ನ ನಡೆದಿರುವುದು ಖಂಡನೀಯ ಎಂದು ಕಾಲೇಜಿನ ಕುಲ ಸಚಿವ ಡಾ.ಎ.ಎಂ. ನರಹರಿ ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News