ಸಭೆಗೆ ತಪ್ಪು ಮಾಹಿತಿ ನೀಡುವ ಅಧಿಕಾರಿಗಳ ಬಗ್ಗೆ ಶಿಸ್ತು ಕ್ರಮಕ್ಕೆ ಸದಸ್ಯರ ಆಗ್ರಹ

Update: 2017-06-29 13:27 GMT

    

ಪುತ್ತೂರು, ಜೂ29: ಕಂದಾಯ ಇಲಾಖೆಯಲ್ಲಿ ಜನಪ್ರತಿನಿಧಿಗಳು ಸೂಚಿಸಿದ ಯಾವುದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಮಧ್ಯವರ್ತಿಗಳು ಮತ್ತು ಹಣ ನೀಡಿದವರಿಗೆ ಕೆಲಸ ಮಾಡಿಕೊಡುತ್ತಿದ್ದಾರೆ. ಅಧಿಕಾರಿಗಳು ತಾ.ಪಂ. ಸಾಮಾನ್ಯ ಸಭೆಯಲ್ಲಿ ಸುಳ್ಳು ಮಾಹಿತಿ ನೀಡುವ ಮೂಲಕ ಸದನವನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಸಭೆಯಲ್ಲಿ ತಪ್ಪು ಮಾಹಿತಿ ನೀಡುವ ಅಧಿಕಾರಿಗಳ ಬಗ್ಗೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ತಾ.ಪಂ. ಸದಸ್ಯರು ಆಗ್ರಹಿಸಿ ಘಟನೆ ಗುರುವಾರ ಪುತ್ತೂರು ತಾ.ಪಂ. ಸಾಮಾನ್ಯ ಸಭೆಯಲ್ಲಿ ನಡೆಯಿತು.

ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ ಅವರ ಅಧ್ಯಕ್ಷತೆಯಲ್ಲಿ ತಾ.ಪಂ. ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆ ನಡೆಯಿತು. ಸಭೆಯಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡುತ್ತಾ ಪಡುಬೆಟ್ಟು ಶಾಲೆಯ ಜಾಗ ಮಂಜೂರಾತಿಗಾಗಿ ಪ್ರಸ್ತಾವನೆಯನ್ನು ಉಪವಿಭಾಗಾಧಿಕಾರಿಗಳಿಗೆ ಸಲ್ಲಿಸಲಾಗಿದೆ ಎಂದು ತಿಳಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ ಸದಸ್ಯೆ ಉಷಾ ಅಂಚನ್ ಅವರು ತಹಶೀಲ್ದಾರ್ ಕಚೇರಿಯಿಂದ ಮಂಜೂರಾತಿಗಾಗಿ ಉಪ ವಿಭಾಗಾಧಿಕಾರಿಗಳ ಕಚೇರಿಗೆ ಕಡತ ಹೋಗಲು 2 ತಿಂಗಳು ಬೇಕೇ ಎಂದು ಪ್ರಶ್ನಿಸಿದರು.

ಅಧಿಕಾರಿಗಳು ತಾಲೂಕು ಪಂಚಾಯತ್ ಸಭೆಯಲ್ಲಿ ಪ್ರಸ್ತಾಪಿಸಿದ ಯಾವುದೇ ಕೆಲಸಗಳನ್ನು ಮಾಡುತ್ತಿಲ್ಲ. ಹೀಗಿರುವಾಗ ಸಾಮಾನ್ಯ ಸಭೆ ನಡೆಸುವ ಔಚಿತ್ಯವಾದರೂ ಏನು ಎಂದು ಪ್ರಶ್ನಿಸಿ, ಈ ಕಡತದ ಬಗ್ಗೆ ಸ್ಪಷ್ಟ ಮಾಹಿತಿ ನೀಡಬೇಕೆಂದು ಒತ್ತಾಯಿಸಿದರು. ಇದಕ್ಕೆ ಸದಸ್ಯೆ ಫೌಝಿಯಾ ಇಬ್ರಾಹಿಂ ಅವರು ದ್ವನಿಗೂಡಿಸಿ ಕಂದಾಯ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಪುತ್ತೂರು ತಾಲೂಕಿನಲ್ಲಿ ಯಾವುದೇ ಸರ್ಕಾರಿ ಕೆರೆಗಳ ಒತ್ತುವರಿ ಪ್ರಕರಣಗಳು ಇಲ್ಲ ಎಂದು ಕಂದಾಯ ಅಧಿಕಾರಿಗಳು ಮಾಹಿತಿ ನೀಡಿದಾಗ ಆಕ್ಷೇಪಿಸಿದ ಸದಸ್ಯ ಸಾಜ ರಾಧಾಕೃಷ್ಣ ಆಳ್ವ ಅವರು ಕುರಿಯದಲ್ಲಿ 3ರಿಂದ 4 ಎಕ್ರೆಯಷ್ಟು ಜಾಗದಲ್ಲಿರುವ ಕರೆಯ ಒಂದು ಭಾಗವನ್ನು ಒತ್ತುವರಿ ಮಾಡಿಕೊಂಡು ಸಸಿಗಳನ್ನು ನೆಟ್ಟಿರುವ ವಿಚಾರವನ್ನು ಪ್ರಸ್ತಾಪಿಸಿದರು. ಕಂದಾಯ ಇಲಾಖೆಯ ಅಧಿಕಾರಿಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಜನಪ್ರತಿನಿಧಿಗಳು ಹೇಳಿದ ಕೆಲಸ ಕಂದಾಯ ಇಲಾಖೆಯಲ್ಲಿ ಆಗುತ್ತಿಲ್ಲ , 94ಸಿಸಿಗೆ ಸಂಬಂಧಿಸಿ ಒಂದು ವರ್ಷದಲ್ಲಿ ಯಾವುದೇ ಕೆಲಸ ನಡೆದಿಲ್ಲ. ಪ್ರತಿಭಟನೆ ಮಾಡಿದರೆ ಮಾತ್ರ ಎಚ್ಚೆತ್ತುಕೊಳ್ಳುತ್ತಿದ್ದಾರೆ. ಇಲ್ಲಿ ಬಂದು ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಶಿವರಂಜನ್ ಸುಳ್ಳು ಮಾಹಿತಿ ನೀಡಿ ಸದನದ ದಾರಿತಪ್ಪಿಸುತ್ತಿರುವ ಅಧಿಕಾರಿಗಳ ವಿರುದ್ದ ಶಿಸ್ತುಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು. ಒಂದು ವರ್ಷದ ಹಿಂದೆಯೇ ಕುರಿಯ ಗ್ರಾಮದ ಕೆರೆ ಸೇರಿದಂತೆ ತಾಲ್ಲೂಕಿನ ಎಲ್ಲಾ ಕೆರೆಗಳ ಜಾಗ ಅಳತೆ ಮಾಡಿ ಗಡಿಗುರುತು ಮಾಡವಂತೆ ಹೇಳಿದ್ದೆವು. ಆದರೆ ಈ ತನಕ ಅಳತೆ ಕಾರ್ಯವೇ ನಡೆದಿಲ್ಲ .ಹೀಗಿದ್ದರೂ ಒತ್ತುವರಿ ಆಗಿಲ್ಲ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ ಎಂದ ಸದಸ್ಯರು, ಸರ್ವೆ ಇಲಾಖೆಯ ಅಧಿಕಾರಿಗಳೇ ಸಭೆಗೆ ಬರಬೇಕೆಂದು ಪಟ್ಟುಹಿಡಿದರು.

ಬಳಿಕ ಉಪತಹಶೀಲ್ದಾರ್ ಕರೆ ಮಾಡಿ ಸರ್ವೆ ಇಲಾಖೆಯ ಅಧಿಕಾರಿಯೊಬ್ಬರನ್ನು ಸಭೆಗೆ ಕರೆಸಿಕೊಂಡರು. ಸಭೆಗೆ ಬಂದ ಸರ್ವೆ ಇಲಾಖೆಯ ಅಧಿಕಾರಿಯೂ ಉತ್ತರ ನೀಡಲು ವಿಫಲರಾದರು. ಇದು ಸದಸ್ಯರ ಆಕ್ರೋಶವನ್ನು ಇನ್ನಷ್ಟೂ ಇಮ್ಮಡಿಸಿತು. ಅಧಿಕಾರಿಗಳು ಬೇಜವಾಬ್ಧಾರಿಯುತ ಮತ್ತು ತಪ್ಪು ಮಾಹಿತಿ ನೀಡುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸ್ಥಾಯಿ ಸಮಿತಿಯ ಅಧ್ಯಕ್ಷ ಮುಕುಂದ ಅವರು ಕೆರೆಗಳ ಅಳತೆ ಕಾರ್ಯ ನಡೆಸಿ ಗಡಿಗುರುತು ಮಾಡುವ ಕಾರ್ಯವನ್ನು ಶೀಘ್ರವಾಗಿ ಮಾಡಬೇಕೆಂದು ಸೂಚಿಸಿದರು. ಒಂದು ತಿಂಗಳೊಳಗೆ ಒತ್ತುವರಿ ತೆರವುಗೊಳಿಸಬೇಕೆಂದು ಸದಸ್ಯ ಪರಮೇಶ್ವರ ಆಗ್ರಹಿಸಿದರು.

ಒಂದು ಹಂತದಲ್ಲಿ ಕೆಲ ಸದಸ್ಯರು ಅಧ್ಯಕ್ಷರ ವಿರುದ್ದವೇ ರೇಗಿ ನೀವು ಸರಿಯಾದ ಕಾನೂನು ಕ್ರಮಕೈಗೊಳ್ಳದ ಕಾರಣದಿಂದಲೇ ಕಂದಾಯ ಇಲಾಖೆಯವರು ಈ ರೀತಿಯ ಬೇಜವಾಬ್ದಾರಿಯುತ ಉತ್ತರ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಬಳಿಕ ಪ್ರತಿಕ್ರಿಯೆ ನೀಡಿದ ಅಧ್ಯಕ್ಷೆ ಭವಾನಿ ಚಿದಾನಂದ ಅವರು ಇನ್ನು ಮುಂದಕ್ಕೆ ಕಂದಾಯ ಅಧಿಕಾರಿಗಳೂ ಸೇರಿದಂತೆ ಯಾವೊಬ್ಬ ಅಧಿಕಾರಿಯೂ ಸದನದಲ್ಲಿ ತಪ್ಪು ಮಾಹಿತಿ ನೀಡಬಾರದು. ಸರಿಯಾದ ಮಾಹಿತಿ ಇಲ್ಲದೆ ಸಭೆಗೆ ಬರುವುದೂ ಬೇಡ ಎಂದು ಸೂಚಿಸಿದರು.

ಪ್ರಕೃತಿ ವಿಕೋಪದಡಿ ಅನುದಾನವಿದೆ.ಆದರೆ ಅರ್ಜಿ ಬಂದಿಲ್ಲ ಎಂದು ಕಡಬ ಉಪತಹಶೀಲ್ದಾರ್ ಅವರು ಹೇಳಿಕೆ ನೀಡಿದಾಗ ಸದಸ್ಯೆ ಲಲಿತಾ ಅವರು ಕಾಮಣ ಗ್ರಾಮದವರೊಬ್ಬರು ನೀಡಿದ ಅರ್ಜಿ ಏನಾಗಿದೆ ಎಂದು ಪ್ರಶ್ನಿಸಿದರು. ಆರಂಭದಲ್ಲಿ ಅರ್ಜಿಯೇ ಬಂದಿಲ್ಲ ಎಂದ ಅವರು ಬಳಿಕ ಆ ಅರ್ಜಿಯಲ್ಲಿ ಸರಿಯಾದ ದಾಖಲೆಗಳಿಲ್ಲ ಎಂದು ಹೇಳಿದರು. ಬಳಿಕ ಅರ್ಜಿ ನನ್ನ ಟೇಬಲ್‌ನಲ್ಲಿಯೇ ಇದೆ ಎಂಬ ಉತ್ತರ ನೀಡಿದರು. ಇದು ಮತ್ತೊಮ್ಮೆ ಸದಸ್ಯರನ್ನು ರೇಗುವಂತೆ ಮಾಡಿತು. ನಮ್ಮನ್ನು ದಾರಿ ತಪ್ಪಿಸುವ ಕೆಲಸ ಮಾಡಬೇಡಿ ಎಂದು ಸದಸ್ಯ ಪರಮೇಶ್ವರ್, ತೇಜಸ್ವಿನಿ ಕಟ್ಟಪುಣಿ, ಜಿ.ಪಂ. ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಸರ್ವೋತ್ತಮ ಗೌಡ ಮತ್ತಿತರರು ಅವರು ಅಧಿಕಾರಿಗಳು ಸದನಕ್ಕೆ ತಪ್ಪು ಮಾಹಿತಿ ನೀಡುವುದು ಸರಿಯಲ್ಲ ಎಂದು ಮತ್ತೊಮ್ಮೆ ಆಕ್ರೋಶ ವ್ಯಕ್ತ ಪಡಿಸಿದರು. ತಾಲೂಕು ಪಂಚಾಯತ್ ಉಪಾಧ್ಯಕ್ಷೆ ರಾಜೇಶ್ವರಿ, ಕಾರ್ಯನಿರ್ವಹಣಾಧಿಕಾರಿ ಜಗದೀಶ್, ಯೋಜನಾಧಿಕಾರಿ ಗಣಪತಿ ಭಟ್ ಉಪಸ್ಥಿತರಿದ್ದರು. -

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News