ನಗರಸಭೆಯಲ್ಲಿ ವಿಪಕ್ಷ ಸದಸ್ಯರಿಂದ ಸದನದ ಬಾವಿಗಿಳಿದು ಪ್ರತಿಭಟನೆ

Update: 2017-06-29 13:33 GMT

ಪುತ್ತೂರು, ಜೂ.29: ನಗರಸಭೆಯ ಹಿಂದಿನ ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಉಲ್ಲೇಖಿಸದೇ ಅಜೆಂಡಾದಲ್ಲಿ ಕೇವಲ ವಿಷಯವನ್ನು ಮಾತ್ರ ಮುದ್ರಿಸಲಾಗಿದ್ದು, ಈ ಮೂಲಕ ಕ್ರಿಯಾಯೋಜನೆಯನ್ನು ಅಡಗಿಸಿ, ಭ್ರಷ್ಟಾಚಾರ ನಡೆಸಲಾಗುತ್ತಿದೆ ಎಂದು ನಗರಸಭೆಯ ವಿಪಕ್ಷ ಸದಸ್ಯರು ಆರೋಪಿಸಿ, ಆಡಳಿತ ಪಕ್ಷದ ವಿರುದ್ಧ ಧಿಕ್ಕಾರ ಕೂಗಿ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ ಘಟನೆ ಗುರುವಾರ ಪುತ್ತೂರು ನಗರಸಭೆಯ ವಿಶೇಷ ಸಾಮಾನ್ಯ ಸಭೆಯಲ್ಲಿ ನಡೆಯಿತು.

ನಗರಸಭೆ ಅಧ್ಯಕ್ಷೆ ಜಯಂತಿ ಬಲ್ನಾಡು ಅವರ ಅಧ್ಯಕ್ಷತೆಯಲ್ಲಿ ವಿಶೇಷ ಸಾಮಾನ್ಯ ಸಭೆ ನಡೆಯಿತು. ಕ್ರಿಯಾಯೋಜನೆಯನ್ನು ಅಡಗಿಸುವ ಕೆಲಸ ಆಗುತ್ತಿದೆ ಎಂದು ವಿಪಕ್ಷ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಆ ವೇಳೆ ಆಡಳಿತ ಪಕ್ಷದ ಸದಸ್ಯ ಮಹಮ್ಮದ್ ಆಲಿ ಅವರು ಈ ಬಗ್ಗೆ ದೂರು ನೀಡಿ, ಪ್ರತಿಭಟನೆ ಮಾಡಿ. ನೀವು ರಾಜಕಾರಣ ಮಾಡಿದ್ದೀರಿ, ನಾವು ರಾಜಕಾರಣ ಮಾಡುತ್ತೇವೆ ಎಂದು ಪ್ರತ್ಯತ್ತರ ನೀಡಿದರು.

ಇದರಿಂದ ಸದಸ್ಯರೊಳಗೆ ಮಾತಿನ ಚಕಮಕಿ ನಡೆಯಿತು. ಇದೊಂದು ಸಾಮಾನ್ಯ ಸಭೆಯೇ. ನಾಚಿಕೆಯಾಗ್ಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ ಸದಸ್ಯ ಜೀವಂಧರ್ ಜೈನ್ ಅವರು, ಅಧ್ಯಕ್ಷರು ಈ ಬಗ್ಗೆ ಈಗಲೇ ಉತ್ತರ ನೀಡಬೇಕು. ನೀಡದಿದ್ದರೆ ಸಭೆಯಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

ಅಧ್ಯಕ್ಷರು ಎಚ್ಚರಿಕೆಗೆ ಬಗ್ಗದೇ ಇದ್ದಾಗ, ಆಡಳಿತಕ್ಕೆ ಧಿಕ್ಕಾರ ಕೂಗಿ ಉಪವಿಭಾಗಾಧಿಕಾರಿಗಳು ಸಭೆಗೆ ಬರುವಂತೆ ಆಗ್ರಹಿಸುತ್ತಾ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಸದಸ್ಯರು ಆಗ್ರಹ ಹೆಚ್ಚಾಗುತ್ತಿದ್ದಂತೆ ಪೌರಾಯುಕ್ತೆ ರೂಪಾ ಶೆಟ್ಟಿ ಅವರು ಮಾತನಾಡಿ, ಇದನ್ನು ಮತಕ್ಕೆ ಹಾಕಬಹುದು ಎಂದು ಹೇಳಿದರು. ಇದಕ್ಕೆ ಆಡಳಿತ ಪಕ್ಷ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಮತಕ್ಕೆ ಹಾಕುವ ಅಧಿಕಾರ ಆಡಳಿತ ಪಕ್ಷಕ್ಕೆ ಮಾತ್ರ ಎಂದರು.

ಪ್ರತಿಭಟನೆ ನಡೆಯುತ್ತಿದ್ದಂತೆ ಆಡಳಿತ ಪಕ್ಷದ ಸದಸ್ಯರು ಅಜೆಂಡಾ ಓದಿ ಸಭೆ ಮುಗಿಯಿತು ಎಂದು ಘೋಷಿಸಿ ಹೊರನಡೆದರು. ಬಳಿಕ ಮಾತನಾಡಿದ ರಾಜೇಶ್ ಬನ್ನೂರು ಅವರು ಹಿಂದಿನ ಸಭೆಯಲ್ಲಿ ಪ್ರತಿ ವಾರ್ಡ್‌ಗೆ ರೂ. 10 ಲಕ್ಷ ಇಡುವಂತೆ ನಿರ್ಣಯ ಕೈಗೊಳ್ಳಲಾಗಿದೆ. ಆದರೆ ಸಭೆಯ ನಿರ್ಣಯವನ್ನು ಪುಸ್ತಕದಲ್ಲಿ ಉಲ್ಲೇಖಿಸಿಲ್ಲ. ಇದು ಭ್ರಷ್ಟಾಚಾರವಾಗಿದ್ದು, ಏಕಪಕ್ಷೀಯ ತೀರ್ಮಾನಕ್ಕೆ ವಿರೋಧ ಸೂಚಿಸುತ್ತಿದ್ದೇವೆ. ಕಾನೂನು ಪ್ರಕಾರ ಆಡಳಿತ ನಡೆಸಲಿ. ನಗರಸಭೆ ಬೈಲಾ, ತೆರಿಗೆ ಆಧಾರ ರಹಿತವಾಗಿ ಮಾಡಲಾಗಿದೆ. ಈ ಎಲ್ಲಾ ಕಾರಣಕ್ಕೆ ಪ್ರತಿಭಟನೆ ಮಾಡುತ್ತಿದ್ದೇವೆ ಎಂದರು. ಉಪವಿಭಾಗಾಧಿಭಾಗಾಧಿಕಾರಿಗಳು ಬಾರದೇ ಸ್ಥಳದಿಂದ ಕದಲುವುದಿಲ್ಲ. ರಾತ್ರಿಯಾದರೂ ಹೊರಗೆ ಹೋಗುವುದಿಲ್ಲ ಪಟ್ಟು ಹಿಡಿದರು.

ಸ್ವಲ್ಪ ಹೊತ್ತಿನ ಬಳಿಕ ಉಪವಿಭಾಗಾಧಿಕಾರಿ ರಘುನಂದನ ಮೂರ್ತಿ ಅವರು ಸಭೆಗೆ ಆಗಮಿಸಿ, ಪೌರಾಯುಕ್ತರಿಂದ ವಿವರ ಪಡೆದುಕೊಂಡರು. ಬಳಿಕ ವಿಪಕ್ಷ ಸದಸ್ಯರು ಪ್ರತಿಭಟನೆ ಹಿಂದೆಗೆದುಕೊಂಡರು. ಶಾಸಕಿಯವರು ಇಲ್ಲದಿರುವ ಕಾರಣ ಅರ್ಧ ಗಂಟೆಗಳ ಬಳಿಕ ಸಭೆ ನಡೆಯಲಿದೆ ಎಂದು ತಿಳಿಸಿದರು.
ಮಧ್ಯಾಹ್ನದ ಬಳಿಕ ಶಾಸಕಿ ಶಕುಂತಳಾ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಸದಸ್ಯರಿಗೆ ಹಿತವಚನ ಹೇಳಿದ ಶಾಸಕಿ ಅವರು ನಾವು ಕುಳಿತ ಸೀಟು ಶಾಶ್ವತವಲ್ಲ. ಜನರಿಗೆ ಉಪಕಾರ ಮಾಡಲು ನಾವು ಒಂದಷ್ಟು ಸಮಯ ಕುಳಿತಿದ್ದೇವೆ ಎಂದು ಜ್ಞಾನ ಎಲ್ಲರಿಗೂ ಇರಬೇಕು. ಸಭೆಯ ನಿರ್ಣಯ ಪುಸ್ತಕ ಎಲ್ಲಿರಬೇಕೋ ಅಲ್ಲೇ ಇರಬೇಕು ಎಂದೆಲ್ಲಾ ಸೂಚನೆ ನೀಡಿ ಸಭೆಯನ್ನು ಮುಗಿಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News