ಉಳ್ಳಾಲ: ಸಮುದ್ರ ಪಾಲಾಗಿದ್ದ ಯುವಕನ ಮೃತದೇಹ ಉಚ್ಚಿಲದಲ್ಲಿ ಪತ್ತೆ

Update: 2017-06-29 13:52 GMT

ಉಳ್ಳಾಲ, ಜೂ. 29: ತುಮಕೂರು ಮೂಲದ ತಂಡವೊಂದು ಉಳ್ಳಾಲ ದರ್ಗಾಕ್ಕೆಂದು ಬಂದು ಅಲ್ಲಿಂದ ಮೊಗವೀರಪಟ್ಣಕ್ಕೆ ತೆರಳಿ ಸಮುದ್ರದಡದಲ್ಲಿ ವಿಹರಿಸುತ್ತಿದ್ದ ವೇಳೆ ಸದಸ್ಯರು ನೀರು ಪಾಲಾಗಿದ್ದು ಅದರಲ್ಲಿ ಶಾರುಖ್ ಖಾನ್‌ನ ಮೃತದೇಹ ಸೋಮೇಶ್ವರ ಉಚ್ಚಿಲ ಕಡ ಕಿನಾರೆಯಲ್ಲಿ ಗುರುವಾರ ಬೆಳಗ್ಗೆ ಪತ್ತೆಯಾಗಿದೆ.

ಶೋಧ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಯುವಕರು ಮೃತದೇಹವನ್ನು ಮೇಲಕ್ಕೆತ್ತಿ ದೇರಳಕಟ್ಟೆಯ ಆಸ್ಪತ್ರೆ ಸಾಗಿಸಿದ್ದು ಮರಣೋತ್ತರ ಪರೀಕ್ಷೆ ನಡೆದಿದೆ.

ಸಮುದ್ರ ಪಾಲಾಗಿದ್ದ ಮತ್ತೊಬ್ಬ ಯುವಕ ಹಯಾಝ್ ಮೃತದೇಹ ಮೊಗವೀರಪಟ್ಣದಲ್ಲಿ ಬ್ರೇಕ್‌ವಾಟರ್‌ಗಾಗಿ ಅಳವಡಿಸಲಾದ ಬರ್ಮ್‌ನ ಬಂಡೆಕಲ್ಲಿನ ಅಡಿಯಲ್ಲಿ ಸಿಲುಕಿದ್ದು ಹೊರತೆಗೆಯಲು ಎರಡು ಜೆಸಿಬಿ, ಒಂದು ಹಿಟಾಚಿ ಬಳಸಲಾಯಿತಾದರೂ ಇನ್ನೂ ಸಾಧ್ಯವಾಗಿಲ್ಲ. ಸಮುದ್ರದ ಅಲೆಗಳ ಅಬ್ಬರದ ಹೊಡೆತದ ಮುಂದೆ ಯಾವ ಕಾರ್ಯಾಚರಣೆಯೂ ಸಫಲಗೊಳ್ಳಲಿಲ್ಲ ಎಂದು ತಿಳಿದುಬಂದಿದೆ. 

ಜೀವರಕ್ಷಕರು, ಮುಳುಗು ತಜ್ಞರಿಗೆ ಸರಕಾರದಿಂದ ಯಾವ ಸಹಾಯ ಸಿಗದಿದ್ದರೂ ಮೃತದೇಹ ಹೊರತೆಗೆಯಲು ಜೀವದ ಹಂಗು ತೊರೆದು ಪ್ರಾಮಾಣಿಕ ಪ್ರಯತ್ನ ಮುಂದುವರಿಸಿರುವುದಾಗಿ ಅವರು ತಿಳಿಸಿದ್ದಾರೆ. ಈದ್ ಹಬ್ಬದ ರಜಾ ಖುಷಿಯನ್ನು ಕಳೆಯಲು ಬಂದಿದ್ದ ತುಮಕೂರು ಶಿರಾ ತಾಲೂಕಿನ ರಬ್ನಗರ ಮೊಹಲ್ಲಾ ಮಗೀರ್ ರಸ್ತೆ ನಿವಾಸಿಗಳಾದ ಜಲೀಲ್ ಎಂಬವರ ಪುತ್ರ ಶಾರುಖ್ ಖಾನ್ (19) ಹಾಗೂ ಸಿದ್ದೀಕ್ ಎಂಬವರ ಪುತ್ರ ಚೋಟು ಯಾನೆ ಹಯಾಝ್ (20) ಬುಧವಾರ ಮಧ್ಯಾಹ್ನ ಸಮುದ್ರದ ಅಲೆಗಳ ಜೊತೆಗೆ ಆಟವಾಡುತ್ತಿದ್ದಾಗ ಭಾರೀ ಗಾತ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಸಮುದ್ರ ಪಾಲಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News