×
Ad

ಹೊರಗುತ್ತಿಗೆ ಏಜೆನ್ಸಿ ವಂಚನೆ ವಿರುದ್ಧ ಹೋರಾಟ: ಮಾಸ್ ಇಂಡಿಯಾ

Update: 2017-06-29 19:44 IST

ಉಡುಪಿ, ಜೂ.29: ರಾಜ್ಯ ಸರಕಾರದ ವಿವಿಧ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಹೊರಗುತ್ತಿಗೆ ನೌಕರರ ಸಂಬಳದಿಂದ ಕಡಿತ ಮಾಡಿದ ಹಾಗೂ ಸರಕಾರದಿಂದ ಪಡೆದ ಇಎಸ್‌ಐ ಹಾಗೂ ಭವಿಷ್ಯ ನಿಧಿಯನ್ನು ಪ್ರಾಧಿಕಾರಕ್ಕೆ ಪಾವತಿಸದೆ ಗುತ್ತಿಗೆದಾರ ಏಜೆನ್ಸಿಯವರು ನೌಕರರಿಗೆ ಸುಮಾರು 15ಕೋಟಿ ರೂ. ವಂಚನೆ ಮಾಡಿದ್ದು, ಮಾಸ್ ಇಂಡಿಯಾ ಇದರ ವಿರುದ್ಧ ಜು.30ರಂದು ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸಲಿದೆ ಎಂದು ಮಾಸ್ ಇಂಡಿಯಾ ಕರ್ನಾಟಕ ರಾಜ್ಯಾಧ್ಯಕ್ಷ ಜಿ.ಎ.ಕೋಟೆಯಾರ್ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲ ಗುತ್ತಿಗೆದಾರರ ಪರವಾನಿಗೆಯನ್ನು ರದ್ದುಪಡಿಸಿ ಸರಕಾರವೇ ನೇರ ನೇಮಕಾತಿ ಮೂಲಕ ನೌಕರಿ ನೀಡಬೇಕು. ನೌಕರರಿಗೆ ಕನಿಷ್ಠ ವೇತನ ಹಾಗೂ ಸೇವಾ ಭದ್ರತೆ ಯನ್ನು ನೀಡಬೇಕು. ಹೊರಗುತ್ತಿಗೆದಾರರು ಲಕ್ಷಾಂತರ ಹಣವನ್ನು ನೌಕರರ ವೇತನದಿಂದ ಕಡಿತ ಮಾಡಿ ಮೋಸ ಮಾಡಿದ್ದು, ಆ ಹಣವನ್ನು 15 ದಿನಗಳ ಒಳಗೆ ಇಎಸ್‌ಐ ಹಾಗೂ ಪಿಎಫ್ ಖಜಾನೆಗೆ ತುಂಬಬೇಕು ಎಂದು ಒತ್ತಾಯಿಸಿದರು.

ಈ ವಂಚನೆ ವಿರುದ್ಧ ನ್ಯಾಯಾಲಯದಲ್ಲಿ ರಿಟ್ ಪಿಟಿಶಿನ್ ಹಾಕಲಾಗುವುದು. ಈ ಆಂದೋಲನ ಕೇವಲ ಕರ್ನಾಟಕಕ್ಕೆ ಸೀಮಿತವಾಗದೆ ಇಡೀ ದೇಶಾ ದ್ಯಂತ ನಡೆಸಲಾಗುವುದು. ಇಡೀ ದೇಶದಲ್ಲಿಯೇ ಹೊರಗುತ್ತಿಗೆ ಆಧಾರಿತ ಪದ್ಧತಿಯನ್ನು ರದ್ದುಗೊಳಿಸುವಂತೆ ಹೋರಾಟ ನಡೆಸಲಾಗುವುದು ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಮಹೇಶ್ ಕುಮಾರ್, ಮಣಿಪಾಲ ಅಧ್ಯಕ್ಷ ನರಸಿಂಹಮೂರ್ತಿ, ಮಹಿಳಾ ಅಧ್ಯಕ್ಷೆ ಗೀತಾ ಪೂಜಾರಿ, ರಮೇಶ್ ಕೆ.ಕೋಟ್ಯಾನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News